More

    ವಿಶ್ವವಿದ್ಯಾನಿಲಯದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಅಶೋಕ್ ಸಂಗಪ್ಪ

    ಮಡಿಕೇರಿ: ಕೊಡಗು ವಿಶ್ವವಿದ್ಯಾನಿಲಯದಲ್ಲಿ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ್ ತಿಳಿಸಿದರು.


    ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಗುರುವಾರ ನಡೆದ ಕೊಡಗು ವಿಶ್ವವಿದ್ಯಾನಿಲಯದ ಪ್ರಥಮ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


    ವಿಶ್ವವಿದ್ಯಾನಿಲಯದಲ್ಲಿ ಹಲವು ಇತಿಮಿತಿಗಳ ನಡುವೆ ಧನಾತ್ಮಕ ಚಿಂತನೆ ಒಳಗೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಯುವಜನರಿಗೆ ಉದ್ಯೋಗ ಸೃಷ್ಟಿಯತ್ತ ವಿಶೇಷ ಆದ್ಯತೆ ನೀಡಲಾಗಿದೆ. ಕೊಡಗು ವಿಶ್ವವಿದ್ಯಾನಿಲಯದಲ್ಲಿ ಬಿಸಿಎ, ಎಂಸಿಎ, ಎಂಬಿಎ, ಪದವಿ, ಸ್ನಾತಕೋತ್ತರ ಪದವಿ ಆರಂಭಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.


    ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಕೊಡಗು ವಿಶ್ವವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈಗಾಗಲೇ ಏಳು ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾಗಿದ್ದು, ವಿಶ್ವವಿದ್ಯಾನಿಲಯಗಳು ವಿನೂತನ ಪಠ್ಯ ಚಟುವಟಿಕೆಗಳನ್ನು ಅಳವಡಿಸಿಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದು ಬಿ.ಕೆ.ರವಿ ಪ್ರತಿಪಾದಿಸಿದರು.


    ಆಧುನಿಕ ಬದುಕಿನಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾವಣೆಗಳತ್ತ ವಿಶ್ವವಿದ್ಯಾನಿಲಯಗಳು ಸಾಗಬೇಕು. ಮಾನವಿಕ ಪದವಿಗಳ ಜೊತೆ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕು. ಹೊಸ ವಿಶ್ವವಿದ್ಯಾನಿಲಯಗಳು ಹಲವು ಸಮಸ್ಯೆ ಮತ್ತು ಸವಾಲುಗಳ ನಡುವೆಯೂ ಸಹ ಯುವಜನರಿಗೆ ಉನ್ನತ ಶಿಕ್ಷಣ ಕಲ್ಪಿಸುವತ್ತ ಗಮನಹರಿಸಬೇಕು. ಪ್ರಸ್ತುತ ಬೇಡಿಕೆಗೆ ತಕ್ಕಂತೆ ಯುವ ಜನರಿಗೆ ಉನ್ನತ ಶಿಕ್ಷಣ ನೀಡುವಂತಾಗಬೇಕು ಎಂದು ಬಿ.ಕೆ.ರವಿ ಸಲಹೆ ಮಾಡಿದರು.


    ಹಾಸನ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ತರಿಕೆರೆ ಚಂದ್ರಶೇಖರ ತಾರಾನಾಥ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿ ಬದಲಾವಣೆ ಕಂಡು ಬರುತ್ತಿದ್ದು, ಪ್ರಾಕೃತಿಕ ಪರಿಸರ ಹಾಗೂ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ಜಲಸಂರಕ್ಷಣೆ, ವಾತಾವರಣದಲ್ಲಿನ ಬದಲಾವಣೆ ಮತ್ತಿತರ ವಿಷಯಗಳ ಕುರಿತು ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವಂತಾಗಬೇಕು ಎಂದರು.


    ಜ್ಞಾನ ಇದ್ದಲ್ಲಿ ಅಜ್ಞಾನಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಜತೆಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವಂತಾಗಬೇಕು. ವಿಜ್ಞಾನ, ತಂತ್ರಜ್ಞಾನ, ಗಣಿತ, ಸಾಮಾಜಿಕ ವಿಜ್ಞಾನ, ಹೀಗೆ ಹಲವು ವಿಷಯಗಳ ಕುರಿತು ಉನ್ನತ ಶಿಕ್ಷಣ ನೀಡುವುದು ವಿಶ್ವವಿದ್ಯಾನಿಲಯದ್ದಾಗಿದೆ. ಆ ನಿಟ್ಟಿನಲ್ಲಿ ಜ್ಞಾನವೇ ಶಕ್ತಿ ಎಂಬುದನ್ನು ಯಾರೂ ಸಹ ಮರೆಯಬಾರದು. ವಿಶ್ವವಿದ್ಯಾನಿಲಯದಲ್ಲಿ ಯುವಜನರು ಉನ್ನತ ಶಿಕ್ಷಣ ಪಡೆಯುವ ಮೂಲಕ ಉತ್ತಮ ವ್ಯಕ್ತಿತ್ವ ಹೊಂದಬೇಕು. ಉನ್ನತ ಶಿಕ್ಷಣ ಪಡೆದು ಯಶಸ್ಸು ಸಾಧಿಸಬೇಕು ಎಂದರು.


    ಹಾವೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸುರೇಶ್.ಎಚ್.ಜಂಗಮಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಹ ಸಾಮಾಜಿಕ ಕಳಕಳಿ ಇರಬೇಕು. ಸಾಮಾಜಿಕ ಕಳಕಳಿ ಇದ್ದಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದ ಅವರು, ಆಧುನಿಕ ಬದುಕಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಗಣಕಯಂತ್ರ ಇದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿವರ್ತನೆಗೆ ಮುಂದಾಗಬೇಕು. ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.


    ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಸೀನಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಒಂದು ಘಟಕ ಕಾಲೇಜು, ೬ ಸರ್ಕಾರಿ ಪದವಿ ಕಾಲೇಜುಗಳು, ೩ ಅನುದಾನಿತ ಕಾಲೇಜುಗಳು, ೧೨ ಖಾಸಗಿ ಕಾಲೇಜುಗಳು, ಒಟ್ಟು ೨೩ ಕಾಲೇಜುಗಳನ್ನು ಕೊಡಗು ವಿಶ್ವವಿದ್ಯಾನಿಲಯ ಒಳಗೊಂಡಿದೆ ಎಂದು ತಿಳಿಸಿದರು.


    ಕೊಡಗು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಕೆ.ಎನ್.ಜನಾರ್ಧನ್ ಮಾತನಾಡಿ, ಕೊಡಗು ವಿಶ್ವವಿದ್ಯಾನಿಲಯದ ಸರ್ವೋತೋಮುಖ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದರು.


    ಬರೋಡ ಬ್ಯಾಂಕಿನ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರೊ.ರಾಘವ, ಪ್ರಾಧ್ಯಾಪಕರಾದ ಜಮೀರ್ ಅಹ್ಮದ್, ಜಯಶಂಕರ್, ಶ್ರೀಧರ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts