More

    ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆಗೆ ಒತ್ತು

    ಹುಬ್ಬಳ್ಳಿ: ರಾಜ್ಯದ ಹಿಂದುಳಿದ ಜಿಲ್ಲೆ, ತಾಲೂಕುಗಳಿಗೂ ಕೈಗಾರಿಕೆಗಳು ಬರಬೇಕೆಂಬ ಆಶಯದೊಂದಿಗೆ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ವೇದಿಕೆಯವರು ಈ ಹಿಂದೆ ನೀಡಿದ ಸಲಹೆಯಂತೆ ರಾಜ್ಯದಲ್ಲಿ ಮೂರು ವಿಶೇಷ ಹೂಡಿಕೆ ವಲಯಗಳನ್ನು (ಎಸ್​ಐಆರ್) ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಇಲ್ಲಿಯ ಡೆನಿಸನ್ಸ್ ಹೋಟೆಲ್​ನಲ್ಲಿ ಶನಿವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಜಿಲ್ಲಾ ಕೈಗಾರಿಕಾ ಕೇಂದ್ರ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವುಗಳ ಸಹಯೋಗದಲ್ಲಿ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ ಹಾಗೂ ಕಲಬುರಗಿ ಕೇಂದ್ರ ಮಾಡಿಕೊಂಡು ಮೂರು ವಲಯಗಳನ್ನು ಘೋಷಿಸಲಾಗಿದೆ. ಈ ವಲಯಗಳ ಜಿಲ್ಲೆ, ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಗಮನ ಹರಿಸಲು ಕಾಯ್ದೆ ರೂಪಿಸಲಾಗುವುದು. ಶೀಘ್ರದಲ್ಲೇ ಸದನದಲ್ಲಿ ಕಾಯ್ದೆ ಮಂಡಿಸುವ ಆಶಯ ಹೊಂದಿದ್ದೇನೆ ಎಂದರು.

    ಕೈಗಾರಿಕಾ ಸೌಲಭ್ಯ ಕಾಯ್ದೆ ತಿದ್ದುಪಡಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕರ್ನಾಟಕ ಈಗ ಹೆಚ್ಚು ಹೂಡಿಕೆ ಸ್ನೇಹಿಯಾಗಿದೆ. ಕರೊನಾ ಸಂಕ್ರಮಣದ ನಂತರ ಕೇಂದ್ರದ ಉದ್ಯಮ ಹಾಗೂ ಆಂತರಿಕ ವ್ಯವಹಾರಗಳ ಉತ್ತೇಜನ ಇಲಾಖೆಗೆ 3.76 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗೆ 1188 ಪ್ರಸ್ತಾವನೆಗಳು ಬಂದಿವೆ. ಅದರಲ್ಲಿ ಕರ್ನಾಟಕದಲ್ಲಿ 1.54 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು 95 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ದೇಶದ ಒಟ್ಟು ಹೂಡಿಕೆಯಲ್ಲಿ ಶೇ. 41 ಕರ್ನಾಟಕದ ಪಾಲು ಇದೆ. ಈ ಮೂಲಕ ನಂಬರ್ ಒನ್ ಬಂಡವಾಳ ಆಕರ್ಷಕ ರಾಜ್ಯವಾಗಿ ಹೊರಹೊಮ್ಮಿದೆ ಎಂದರು.

    ದೇಶದ ಎಲ್ಲ ಕಡೆ ಅಧ್ಯಯನ ಮಾಡಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. ಉದ್ಯಮ ಸ್ಥಾಪಿಸುವವರು ಸ್ವಯಂ ದೃಢೀಕರಣ ಸಲ್ಲಿಸಿದರೆ ಸಾಕು, ಅವರು ನೇರವಾಗಿ ಕಟ್ಟಡ ನಿರ್ವಿುಸಿ ಉದ್ಯಮ ಆರಂಭಿಸಬಹುದು. ನಂತರದ ಮೂರು ವರ್ಷದಲ್ಲಿ ಅಗತ್ಯ ಅನುಮತಿ, ಪರವಾನಗಿಗಳನ್ನು ಪಡೆಯಬಹುದು ಎಂದರು.

    ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಮಾತನಾಡಿ, ರಾಜ್ಯದಲ್ಲಿ ಹೊಸ ಕೈಗಾರಿಕಾ ವಸಾಹತುಗಳ ಅಗತ್ಯ ಇದೆ. ಮೂಲಸೌಲಭ್ಯ ಹೆಚ್ಚಿಸಬೇಕಿದೆ. ಚಿಕ್ಕ ನಿವೇಶನಗಳನ್ನು ರೂಪಿಸಿ ಸಣ್ಣ ಉದ್ದಿಮೆದಾರರಿಗೆ ಅನುಕೂಲ ಮಾಡಬೇಕಾಗಿದೆ. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿ ಈಡೇರಿಸಬೇಕು ಎಂದು ಮನವಿ ಮಾಡಿದರು.

    ವಿದ್ಯುತ್ ಕಂಪನಿಗಳ ಕೆಲ ಷರತ್ತುಗಳಿಂದಾಗಿ ರಾಜ್ಯದಲ್ಲಿ ವಿದ್ಯುತ್ ಸಿಗದೇ 2.5 ಲಕ್ಷ ಉದ್ಯಮಗಳು ತೊಂದರೆ ಅನುಭವಿಸುತ್ತಿವೆ. ಇದನ್ನು ಸರಳೀಕರಣ ಮಾಡಬೇಕು ಎಂದೂ ಆಗ್ರಹಿಸಿದರು.

    ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಪಿ.ಎನ್. ಜೈಕುಮಾರ, ಸಿ.ಸಿ. ಹೊಂಡದಕಟ್ಟಿ, ನಾಗರಾಜ ದಿವಟೆ, ಇತರರು ಉಪಸ್ಥಿತರಿದ್ದರು.

    ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜು ಸಮಾರೋಪ ಭಾಷಣ ಮಾಡಿದರು. ಎನ್​ಕೆಎಸ್​ಎಸ್​ಐಎ ಅಧ್ಯಕ್ಷ ನಿಂಗಣ್ಣ ಬಿರಾದಾರ ಸ್ವಾಗತಿಸಿದರು. ಎನ್.ಆರ್. ಜಗದೀಶ ವಂದಿಸಿದರು.

    70 ಕಂಪನಿಗಳ ಪ್ರಸ್ತಾವನೆಗೆ ಅನುಮೋದನೆ

    ಪ್ರತಿ ತಿಂಗಳು ಸಭೆ ಮಾಡಿ ಉದ್ಯಮ ಸ್ಥಾಪನೆಯ ಪ್ರಸ್ತಾವನೆಗಳನ್ನು ವಿಲೇವಾರಿ ಮಾಡುತ್ತಿದ್ದೇನೆ. ಈವರೆಗೆ ಹೈದರಾಬಾದ್ ಕರ್ನಾಟಕ ಸೇರಿ 70 ಕಂಪನಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದೇನೆ. ಇತ್ತೀಚೆಗೆ ಕೇಂದ್ರ ನೀತಿ ಆಯೋಗಕ್ಕೆ ಭೇಟಿ ಮಾಡಿದಾಗ, ರಾಜ್ಯದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ವಿುಸಲು 4ರಿಂದ 5 ಸಾವಿರ ಎಕರೆ ಜಾಗ ಗುರುತಿಸಿ ಕೊಡುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಚಿಂತನೆ ನಡೆದಿದ್ದು ಶೀಘ್ರ ಜಾಗ ಒದಗಿಸಲಾಗುವುದು. ರಾಜ್ಯದಲ್ಲಿ 5-6 ಕಡೆ ಟೌನ್ ಶಿಪ್ ಮಾಡುವ ಉದ್ದೇಶವಿದ್ದು, ಅದರಲ್ಲಿ ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶವನ್ನು ಆದ್ಯತೆಯಲ್ಲಿ ಪರಿಗಣಿಸಲು ಸಿಎಂಗೆ ಮನವಿ ಮಾಡುತ್ತೇನೆ ಎಂದು ಶೆಟ್ಟರ್ ಹೇಳಿದರು.

    ಹೊಸ ಕೈಗಾರಿಕೆ ಸ್ಥಾಪನೆ ಮಾಡುವವರು ಇನ್ನು ಮುಂದೆ ಹತ್ತಾರು ಕಡೆ ಓಡಾಡಿ ಅನುಮತಿ ಪಡೆಯದೇ ‘ಸಾರ್ಥಕ’ ಎಂಬ ಒಂದೇ ವೇದಿಕೆ ಸಂರ್ಪಸಿದರೆ ಎಲ್ಲ ಕೆಲಸಗಳು ಆಗುತ್ತವೆ. ಇಂತಹ ಹಲವು ಅನುಕೂಲಗಳು ಹೊಸ ನೀತಿಯಲ್ಲಿವೆ.
    | ಎಚ್.ಎಂ. ಶ್ರೀನಿವಾಸ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts