More

    ತುರ್ತು ಪರಿಸ್ಥಿತಿ ಆತಂಕ ತಂದಿಟ್ಟ ಕರೊನಾ

    ಮಂಗಳೂರು/ಉಡುಪಿ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಶನಿವಾರದಿಂದ ಒಂದು ವಾರ ಮಾಲ್‌ಗಳು ಬಂದ್ ಆಗುವ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಶುಕ್ರವಾರ ಸಾಯಂಕಾಲ ದಿನೋಪಯೋಗಿ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದರು.

    ಬಿಗ್‌ಬಜಾರ್, ಸಿಟಿ ಸೆಂಟರ್, ಸ್ಪಾರ್, ಮೋರ್, ನೀಲ್‌ಗಿರೀಸ್ ಮೊದಲಾದ ಮಳಿಗೆಗಳಲ್ಲಿ ಸಾಯಂಕಾಲದ ವೇಳೆ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಅಕ್ಕಿ, ಬೇಳೆ, ತರಕಾರಿ, ಸಾಂಬಾರು ಪದಾರ್ಥಗಳನ್ನು 10 ದಿನಗಳಿಗಾಗುವಷ್ಟು ಪ್ರಮಾಣದಲ್ಲಿ ಖರೀದಿಸುತ್ತಿರುವುದು ಕಂಡು ಬಂತು. ಸೆಂಟ್ರಲ್ ಮಾರುಕಟ್ಟೆಯಲ್ಲೂ ಎಂದಿಗಿಂತ ಹೆಚ್ಚಿನ ಗ್ರಾಹಕರು ಕಂಡು ಬಂದರು.
    ಕೆಲವು ಮಳಿಗೆಗಳಲ್ಲಿ ಗ್ರಾಹಕರನ್ನು ನಿಯಂತ್ರಿಸುವುದೇ ಸವಾಲಾಗಿತ್ತು. ಖರೀದಿಸಿದ ವಸ್ತುಗಳ ಬಿಲ್ ಮಾಡಲು ಉದ್ದವಾದ ಸರತಿ ಸಾಲುಗಳು ಕಂಡು ಬಂತು. ರಾತ್ರಿ ತನಕವೂ ಮಳಿಗೆಗಳಲ್ಲಿ ಗ್ರಾಹಕರು ತುಂಬಿದ್ದರು.

    ಸಭೆ-ಸಮಾರಂಭ ಮುಂದಕ್ಕೆ: ಮುಂಜಾಗ್ರತಾ ಕ್ರಮವಾಗಿ ಜನಸಮೂಹ ಕೇಂದ್ರಗಳಾದ ಸಭೆ, ಸಮಾರಂಭ ನಡೆಸದಂತೆ ಸರ್ಕಾರ ನೀಡಿರುವ ಸೂಚನೆಯನ್ನು ಪಾಲಿಸುವ ನಿಟ್ಟಿನಲ್ಲಿ ದ.ಕ, ಉಡುಪಿ ಜಿಲ್ಲೆಗಳಲ್ಲಿ ಹಲವು ಕಾರ್ಯಕ್ರಮಗಳು ರದ್ದುಗೊಂಡಿವೆ. ಬಹುತೇಕ ಸರ್ಕಾರಿ ಮತ್ತು ಖಾಸಗಿ ಸಾರ್ವಜನಿಕ ಸಮಾರಂಭಗಳನ್ನು ಮುಂದೂಡಲಾಗಿದೆ ಎಂದು ಸಂಘಟಕರು ಪ್ರಕಟಿಸಿದ್ದಾರೆ.
    ಆದರೆ ನಿಗದಿಯಾಗಿರುವ ಮದುವೆ, ಸೀಮಂತ, ಹುಟ್ಟುಹಬ್ಬ ಮತ್ತಿತರ ಕಾರ್ಯಕ್ರಮಗಳು ರದ್ದುಗೊಳಿಸಿದ ಮಾಹಿತಿ ಇಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಬಂದಿಲ್ಲವಾದ ಕಾರಣ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಏಪ್ರಿಲ್‌ನಲ್ಲಿ ನಡೆಯುವ ಮದುವೆಗಳು ಕೆಲವು ಮುಂದೂಡಿಕೆಯಾಗುವ ಕುರಿತು ಮಾಹಿತಿ ಬಂದಿದೆ ಎಂದು ಹೋಟೇಲ್- ಸಭಾಂಗಣಗಳ ಮಾಲೀಕರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಇಂದು ದ.ಕ. ಉಸ್ತುವಾರಿ ಸಭೆ: ದ.ಕ. ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಮಾ.14ರಂದು ಸಾಯಂಕಾಲ 4.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಉಡುಪಿ ಸಾಹಿತ್ಯ ಸಮ್ಮೇಳನ ಮುಂದಕ್ಕೆ: ಮಾ.13ರಂದು ಬೆಳಗ್ಗೆ 10 ಗಂಟೆಗೆ ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಎರಡು ದಿನಗಳ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

    ಪಿಲಿಕುಳ ಬಂದ್ ಇಲ್ಲ: ಪಿಲಿಕುಳ ಜೈವಿಕ ನಿಸರ್ಗಧಾಮ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಪ್ರವಾಸಿಗರಿಗೆ ಎಂದಿನಂತೆ ತೆರೆದಿರಲಿದೆ ಎಂದು ಜೈವಿಕ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ ಭಂಡಾರಿ ತಿಳಿಸಿದ್ದಾರೆ. ಸರ್ಕಾರದ ಆದೇಶದಲ್ಲಿ ಮೃಗಾಲಯ ಬಂದ್ ಮಾಡುವ ಉಲ್ಲೇಖವಿಲ್ಲ. ಮೈಸೂರು ಹಾಗೂ ಬನ್ನೇರುಘಟ್ಟ ಮೃಗಾಲಯಗಳು ತೆರೆದುಕೊಳ್ಳುವುದರಿಂದ ಪಿಲಿಕುಳದಲ್ಲೂ ಮುಂದಿನ ಆದೇಶದ ತನಕ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

    ಪ್ರವಾಸೋದ್ಯಮಕ್ಕೆ ಹೊಡೆತ
    ಧಾರ್ಮಿಕ ಮತ್ತು ಬೀಚ್ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಕರೊನಾದಿಂದ ದೊಡ್ಡ ಹೊಡೆತ ಬಿದ್ದಿದೆ. ಕಳೆದ ಎರಡು ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ದೇವಸ್ಥಾನಗಳು, ಬೀಚ್‌ಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಹೋಟೆಲ್-ವಸತಿಗೃಹಗಳು ಗ್ರಾಹಕರಿಲ್ಲದೆ ಉದ್ಯಮ ತತ್ತರಿಸಿದೆ. ಟ್ರಾವೆಲ್ ಉದ್ಯಮ ಪ್ರವಾಸ ನಿರ್ವಾಹಕರೂ ವಹಿವಾಟಿಲ್ಲದೆ ಕಂಗಾಲಾಗಿದ್ದಾರೆ.

    ಶಾಲಾ ಕಾಲೇಜು ರಜೆ: ರಾಜ್ಯ ಸರ್ಕಾರದ ಆದೇಶದಂತೆ ದ.ಕ, ಉಡುಪಿ ಜಿಲ್ಲೆಗಳಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಎಲ್ಲ ಅಂಗನವಾಡಿ, ನರ್ಸರಿ, ಎಲ್‌ಕೆಜಿ, ಯುಕೆಜಿ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. 1ರಿಂದ 6ನೇ ತರಗತಿ ಮಾರ್ಚ್ 14ರಿಂದ ರಜೆ, 7ರಿಂದ 9ನೇ ತರಗತಿಯವರಿಗೆ ಮಾರ್ಚ್ 23ರೊಳಗೆ ಪರೀಕ್ಷೆ ಮುಗಿಸಿ ಬಳಿಕ ರಜೆ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಂತೆ ಮಾ.27ರಿಂದ ನಡೆಯುತ್ತದೆ. ಈಗಾಗಲೇ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ. ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಈಗಾಗಲೇ ಫೆಬ್ರವರಿಯಲ್ಲಿ ಮುಕ್ತಾಯಗೊಂಡು ರಜೆ ನೀಡಲಾಗಿದೆ. ಎಲ್ಲ ಪದವಿ ಕಾಲೇಜುಗಳಿಗೆ ಮಾ.14ರಿಂದ 28ರವರೆಗೆ ರಜೆ ನೀಡುವಂತೆ ಸರ್ಕಾರ ನೀಡಿರುವ ಆದೇಶವನ್ನು ಪಾಲಿಸುವಂತೆ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.

    ಮದ್ರಸಗಳಿಗೆ ರಜೆ: ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕರಿಸಿದ ಎಲ್ಲ ಮದ್ರಸಗಳಿಗೆ ಮಾ.14ರಿಂದ ಮುಂದಿನ ಪ್ರಕಟಣೆಯವರೆಗೆ ರಜೆ ಸಾರಲಾಗಿದೆ. ಏಪ್ರಿಲ್ 4,5, 6ರಂದು ನಿಗದಿಯಾಗಿರುವ ಪಬ್ಲಿಕ್ ಪರೀಕ್ಷೆಗಳು ನಡೆಯಲಿದೆ ಎಂದು ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ತಿಳಿಸಿದೆ. ಮಾ.14ರಿಂದ 1 ವಾರಗಳ ಕಾಲ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್‌ನ ಅಧೀನದ ಎಲ್ಲ ಮದ್ರಸಗಳಿಗೆ ರಜೆ ಸಾರಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೋರ್ಡ್‌ನ ಪ್ರಕಟಣೆ ತಿಳಿಸಿದೆ.

    ಈಜುಕೊಳ ಬಂದ್: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಸೂಚನೆ ಪ್ರಕಾರ ನಗರದ ಮಂಗಳಾ ಈಜುಕೊಳದಲ್ಲಿ ಶುಕ್ರವಾರ ಸಾಯಂಕಾಲದಿಂದಲೇ ಸಾರ್ವಜನಿಕರ ಈಜು ಬ್ಯಾಚು ನಿಲುಗಡೆಗೊಳಿಸಲಾಗಿದೆ.

    ಮುಂದೂಡಿಕೆಯಾದ ಕಾರ್ಯಕ್ರಮ
    – ಉಡುಪಿ ಜಿಲ್ಲಾ ಬಾಲಭವನದಲ್ಲಿ ಮಾ.19ರಂದು ನಡೆಯಬೇಕಿದ್ದ ವಿಶೇಷ ಮಕ್ಕಳಿಗಾಗಿ ಒಂದು ದಿನದ ಮಕ್ಕಳೋತ್ಸವ.
    – ಮಾ.14ರಂದು ನಡೆಯಬೇಕಿದ್ದ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ವಾರ್ಷಿಕ ಕ್ರೀಡಾಕೂಟ.
    – ಮಾ.15ರಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ಹವಿಗನ್ನಡ ಪುಸ್ತಕ ಸಂಪುಟ ಬಿಡುಗಡೆ ಕಾರ್ಯಕ್ರಮ.
    – ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆ ಕದ್ರಿ ಪಾರ್ಕಿನಲ್ಲಿ ಮಾ.14, 15ರಂದು ಏರ್ಪಡಿಸಿದ್ದ ಸಾನಿಧ್ಯ ಉತ್ಸವ.
    – ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ ಸಹಕಾರದೊಂದಿಗೆ ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ ಮಾ.15ರಂದು ಆಯೋಜಿಸಿದ್ದ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ.
    – ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾ.14ರಂದು ಮಂಗಳೂರು ಪುರಭವನದಲ್ಲಿ ಹಮ್ಮಿಕೊಂಡಿದ್ದ ರೈತರ, ಸಹಕಾರಿಗಳ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಮ್ಮೇಳನ.
    – ಪುತ್ತೂರು ಅಂಚೆ ವಿಭಾಗದಿಂದ ಮಾ.16ರಿಂದ ಜಿಲ್ಲೆಯ ವಿವಿಧೆಡೆ ಆಯೋಜಿಸಲ್ಪಟ್ಟಿದ್ದ ಆಧಾರ್ ಶಿಬಿರಗಳು.
    – ಸ್ಮಾರ್ಟ್ ಸಿಟಿ ಹಾಗೂ ಇನ್ನಿತರ ಯೋಜನೆಗಳ ಕಾಮಗಾರಿಗಳಿಗೆ ಮಾ.14ರಂದು ನಿಗದಿಯಾಗಿದ್ದ ಗುದ್ದಲಿ ಪೂಜೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts