More

    ಕರೊನಾ ಮುಂಜಾಗ್ರತೆ ಮರೆಯದಿರಿ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಸೂಚನೆ

    ಬೆಂಗಳೂರು ಗ್ರಾಮಾಂತರ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಉತ್ಪಾದಕರ ಒಕ್ಕೂಟದಿಂದ ಗ್ರಾಮಾಂತರ ಜಿಲ್ಲೆಯಾದ್ಯಂತ ಅ.2ರಿಂದ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಿಬ್ಬಂದಿ ಕರೊನಾ ಮುಂಜಾಗ್ರತೆಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ್ ಸೂಚಿಸಿದರು.

    ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 1ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಜಾನುವಾರು ಆರೋಗ್ಯ ದೃಷ್ಟಿಯಿಂದ ಹಮ್ಮಿಕೊಂಡಿರುವ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಬೇಕು. ಆದರೆ ಕರೊನಾ ಮುಂಜಾಗ್ರತೆ ಕಡೆಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.

    ಲಸಿಕಾ ಕಾರ್ಯಕ್ರಮದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಅಗತ್ಯವಿದ್ದ ಕಡೆಗಳಲ್ಲಿ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸೂಚಿಸಿದರು.
    ಕಾಲುಬಾಯಿ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರೊನಾ ನಿಯಮ ಪಾಲನೆ ಮಾಡಬೇಕು. ಕಾಲಾವಧಿಯೊಳಗೆ ನಿಗದಿತ ಗುರಿ ಸಾಧಿಸಬೇಕು ಎಂದು ತಿಳಿಸಿದರು.

    ಸಾಂಕ್ರಾಮಿಕ ರೋಗ: ಕಾಲುಬಾಯಿ ರೋಗ ತೀವ್ರವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಗೂರಸುಳ್ಳ ಪ್ರಾಣಿಗಳಲ್ಲಿ ಈ ರೋಗ ಕಂಡುಬರುತ್ತದೆ. ಇದು ಪ್ರಾಣಿಜನ್ಯ ರೋಗವಲ್ಲ. ಈ ಕಾಯಿಲೆ ವೇಗವಾಗಿ, ವ್ಯಾಪಕವಾಗಿ ಹರಡುತ್ತದೆ. ಇದರಿಂದ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾನೆ. ಇದನ್ನು ನಿಯಂತ್ರಿಸಿ ಹೈನುಗಾರಿಕೆ ರೈತರನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತುವ ದಿಸೆಯಲ್ಲಿ ಸರ್ಕಾರ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಬಾಲಚಂದ್ರ ಹೇಳಿದರು.
    ಜಿಲ್ಲೆಯಲ್ಲಿ 1,87,724 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 43 ತಂಡ ರಚಿಸಲಾಗಿದೆ, 227 ಸಿಬ್ಬಂದಿ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಹೇಳಿದರು.
    ಬಮುಲ್ ವ್ಯವಸ್ಥಾಪಕ ಡಾ.ಕೆ ದೇವರಾಜು ಮತ್ತಿತರರು ಇದ್ದರು.

    ಕಾಲುಬಾಯಿ ಜ್ವರ ಕಾಯಿಲೆ ಗೊರಸುಳ್ಳ ಪ್ರಾಣಿಗಳಲ್ಲಿ ಕಂಡುಬರುತ್ತವೆ, ಇದೊಂದು ವ್ಯಾಪಕವಾಗಿ ಹರಡುವ ಕಾಯಿಲೆಯಾಗಿದ್ದು, ಇಲಾಖೆಯಿಂದ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಸಿಬ್ಬಂದಿ ಹಾಗೂ ರೈತರು ಕರೊನಾ ನಿಯಮ ಕಡೆಗಣಿಸಬಾರದು.
    ಡಾ.ಜಗದೀಶ್ ಕೆ.ನಾಯಕ್
    ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts