More

    ಶಾಲೆಗಳಿಗೆ ಇಮೇಲ್ ಬಾಂಬ್ ಬೆದರಿಕೆ ಸಂದೇಶ; ಕೇಂದ್ರ ತನಿಖಾ ಸಂಸ್ಥೆಗಳ ಮೊರೆ ಹೋದ ಪೊಲೀಸ್

    ಬೆಂಗಳೂರು: ನಗರದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಸಂಬಂಧ 27 ಪ್ರಕರಣಗಳು ದಾಖಲಾಗಿವೆ. ಕೇಂದ್ರ ತನಿಖಾ ಸಂಸ್ಥೆಗಳ ನೆರವು ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

    ಬಾಂಬ್ ಬೆದರಿಕೆ ಇಮೇಲ್ ಸಂಬಂಧ ಸ್ಥಳೀಯ ಠಾಣಾ ಮಟ್ಟದಲ್ಲಿ ತನಿಖೆ ನಡೆದಿದೆ. ಸೈಬರ್ ಕ್ರೈಂ ಪೊಲೀಸರು ಮತ್ತು ಸೈಬರ್ ತಜ್ಞರು ನೆರವು ನೀಡುತ್ತಿದ್ದಾರೆ. ನಗರದ 48 ಖಾಸಗಿ ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದ್ದವು. ಖಾಸಗಿ ಶಾಲೆಗಳ ದೂರು ಆಧರಿಸಿ 27 ಪ್ರಕರಣಗಳು ದಾಖಲಾಗಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಒಂದೇ ಮಾದರಿ ಕೃತ್ಯ ಕಾರಣಕ್ಕೆ 2-3 ದೂರುಗಳನ್ನು ಕ್ರೋಡೀಕರಿಸಿ ಒಂದು ಎಫ್‌ಐಆರ್ ದಾಖಲಿಸಲಾಗಿದೆ. 2022ರಲ್ಲೂ ಇದೇ ರೀತಿ 6 ಪ್ರಕರಣಗಳು ವರದಿಯಾಗಿದ್ದವು. ಹೀಗಾಗಿ ಈ ವರ್ಷದ ಪ್ರಕರಣ ಜತೆಗೆ ಹಿಂದಿನ ವರ್ಷದ ಹಳೇ ಪ್ರಕರಣಗಳನ್ನು ಒಗ್ಗೂಡಿಸಿ ತನಿಖೆ ನಡೆಸಲಾಗುತ್ತಿದೆ. ಹಳೇ ಮತ್ತು ಹೊಸ ಪ್ರಕರಣಗಳ ನಡುವೆ ಸಾಮ್ಯತೆ ಇದೆ. ಇಮೇಲ್ ಸಂದೇಶಗಳಲ್ಲಿ ವ್ಯತ್ಯಾಸವಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ತನಿಖೆ ಪ್ರಗತಿ ಕುರಿತು ತನಿಖಾ ತಂಡಗಳ ಸಭೆ ನಡೆಸಿ ಸಮಾಲೋಚಿಸಿದ್ದೇನೆ ಎಂದು ವಿವರಿಸಿದರು.

    ಬಾಂಬ್ ಬೆದರಿಕೆ ಸಂಬಂಧ ಇಮೇಲ್ ಐಡಿ ಮಾಹಿತಿ ಕೋರಿ ಸರ್ವೀಸ್ ಪ್ರೊವೈಡರ್ ಬೆಬೇಲ್ ಡಾಟ್ ಕಾಮ್‌ಗೆ ಕೇಂದ್ರ ತನಿಖಾ ದಳದ (ಸಿಬಿಐ) ಮೂಲಕ ಕಳುಹಿಸಿದ್ದ ಪತ್ರಕ್ಕೆ ಕಂಪನಿ ಪ್ರತಿಕ್ರಿಯೆ ನೀಡಿದೆ. ಆ ಮಾಹಿತಿ ಪರಿಶೀಲಿಸಿ ಮುಂದಿನ ಹಂತದ ತನಿಖೆ ನಡೆಸಲಾಗುತ್ತದೆ. ನಗರದ ಖಾಸಗಿ ಶಾಲೆಗಳಿಗೆ ಬಂದಿದ್ದ ಇಮೇಲ್ ಮಾದರಿಯಲ್ಲೇ ಅಮೆರಿಕ, ಮಲೇಷ್ಯಾ, ಜರ್ಮನಿ ಹಾಗೂ ಫ್ರಾನ್ಸ್‌ನ ಕೆಲ ಶಾಲೆಗಳಿಗೂ ಇಮೇಲ್ ಬಂದಿದ್ದವು.

    ಈ ಬಗ್ಗೆ ತನಿಖೆ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಗತ್ಯ ಬಿದ್ದರೆ ವಿದೇಶಿ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts