

ನವದೆಹಲಿ: ವಿಶ್ವದ ನಂ 1 ಶ್ರೀಮಂತ ಎಲನ್ ಮಸ್ಕ್ ಇಂದು (ಜುಲೈ 23) ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ ಮಾಲೀಕರಾಗಿರುವ ಮಸ್ಕ್, ಟ್ವಿಟರ್ ಜಾಲತಾಣ ವೇದಿಕೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಟ್ವಿಟರ್ ಲೋಗೋ ಬದಲಾಯಿಸಿ, ಟ್ವಿಟರ್ ಬರ್ಡ್ಗೆ ವಿದಾಯ ಹೇಳುವ ಮೂಲಕ ಇಡೀ ವೇದಿಕೆಯನ್ನು ರೀಬ್ರ್ಯಾಂಡ್ ಮಾಡಲು ಸಜ್ಜಾಗಿದ್ದಾರೆ.
ಟ್ವಿಟರ್ ಬರ್ಡ್ ಬದಲು ಎಕ್ಷ್ (X) ಲೋಗೋ ಮೊರೆ ಹೋಗುವ ಸುಳಿವನ್ನು ವಿಡಿಯೋ ಮೂಲಕ ನೀಡಿದ್ದಾರೆ. ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ. ಇಂದು ರಾತ್ರಿ ಉತ್ತಮವಾದ ಎಕ್ಷ್ ಲೋಗೋವನ್ನು ಪೋಸ್ಟ್ ಮಾಡಿದ್ದಲ್ಲಿ, ನಾಳೆಯಿಂದ ಅದೇ ಲೋಗೋದೊಂದಿಗೆ ಮುಂದುವರಿಯಲಿದ್ದೇವೆ ಎಂದು ಮಸ್ಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಸ್ಕ್ ಹಂಚಿಕೊಂಡಿಲ್ಲ.
ಬಹಳ ಹಿಂದಿನಿಂದಲೂ ಮಸ್ಕ್ ಅವರು ಎಕ್ಷ್ ಎಂಬ ಹೆಸರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಏಪ್ರಿಲ್ನಲ್ಲಿ ಟ್ವಿಟರ್ನ ಹೊಸ ಸಿಇಒ ಲಿಂಡಾ ಯಾಕರಿನೊ ಅವರನ್ನು ಸ್ವಾಗತಿಸುವಾಗ, ಟ್ವಿಟರ್ ವೇದಿಕೆಯನ್ನು X ದಿ ಎವೆರಿಥಿಂಗ್ ಆ್ಯಪ್ ಆಗಿ ಪರಿವರ್ತಿಸಲು ಲಿಂಡಾ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು.
ಮಸ್ಕ್ ಅವರು ಕಳೆದ ವರ್ಷ ಟ್ವಿಟರ್ ಅನ್ನು ಖರೀದಿ ಮಾಡಿ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ಬಳಿಕ ಟ್ವಿಟರ್ ನಿರಂತರವಾಗಿ ತಾಂತ್ರಿಕ ವೈಫಲ್ಯವನ್ನು ಅನುಭವಿಸುತ್ತಿದೆ. ಜಾಹೀರಾತು ಆದಾಯವು ಸ್ಥಿರವಾಗಿ ಕ್ಷೀಣಿಸುತ್ತಿರುವಾಗ ಸಾಮಾಜಿಕ ಜಾಲತಾಣ ಕಂಪನಿಯು ತನ್ನ ವೇದಿಕೆಯನ್ನು ಪುನರುಜ್ಜೀವನಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ.
ಈಗಲೂ ಟ್ವಿಟರ್ ಕಂಪನಿ ಹಣವನ್ನು ಕಳೆದುಕೊಳ್ಳುತ್ತಿದ್ದು, ಜಾಹೀರಾತಿಗೆ ಪರ್ಯಾಯವಾದ ವ್ಯಾಪಾರ ಮಾದರಿಗಳೊಂದಿಗೆ ಬರಲು ಪ್ರಯತ್ನಿಸುತ್ತಿದೆ. ಟ್ವಿಟರ್ ಬ್ಲ್ಯೂಟಿಕ್ ಸಬ್ಸ್ಕ್ರಿಪ್ಸನ್ ಪರಿಚಯಿಸಿದೆ. ತಿಂಗಳಿಗೆ 8 ಡಾಲರ್ ನೀಡಿ ಬ್ಲ್ಯೂಟಿಕ್ ಪಡೆಯುವ ವ್ಯವಸ್ಥೆ ಇದಾಗಿದೆ. ಈಗಾಗಲೇ ಹಲವರು ಈ ಸೇವೆ ಪಡೆಯುತ್ತಿದ್ದು, ಇದರಿಂದ ಟ್ವಿಟರ್ಗೆ ಕೊಂಚ ಹಣ ಬರುತ್ತಿದೆ. ಈ ತಿಂಗಳಿಂದ ಟ್ವಿಟರ್ ಕಂಪನಿ ಕೆಲವು ಟ್ವಿಟರ್ ಚಂದಾದಾರರಿಗೆ ಜಾಹೀರಾತು ಆದಾಯದ ಪಾಲನ್ನು ಪಾವತಿಸಲು ಪ್ರಾರಂಭಿಸಿತು.
ಮಸ್ಕ್ ಅವರು ಹೊಸ ಕೃತಕ ಬುದ್ಧಿಮತ್ತೆ ಕಂಪನಿ xAI ಘೋಷಣೆ ಮಾಡಿದ ದಿನದ ಬೆನ್ನಲ್ಲೇ ಟ್ವಿಟರ್ ರೀಬ್ರ್ಯಾಂಡ್ ಮಾತನ್ನು ಆಡಿದ್ದಾರೆ. OpenAI ಮತ್ತು Google ನಂತಹ ಕಂಪನಿಗಳು ಮಾನವರಿಗೆ ಆಗುವ ಅಪಾಯಗಳನ್ನು ಪರಿಗಣಿಸದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಆರೋಪಿಸಿದ ಬೆನ್ನಲ್ಲೇ xAI ಕಂಪನಿಯನ್ನು ಘೋಷಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ xAI ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್)