More

    ಕಾಡಾನೆಗಳ ದಾಳಿಗೆ ಬಾಳೆ, ಅಡಕೆ ನಾಶ

    ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಚೀಕನಹಳ್ಳಿ ಸಮೀಪದ ಬಂಡೆ ಗ್ರಾಮದಲ್ಲಿ ಶನಿವಾರ ಕಾಡಾನೆಗಳು ಜಮೀನಿನಲ್ಲಿ ನೆಟ್ಟಿದ್ದ ಬಾಳೆ ಅಡಕೆ ಗಿಡಗಳನ್ನು ಕಿತ್ತು ಎಲ್ಲೆಂದರಲ್ಲಿ ಬಿಸಾಡಿದ್ದು ಕಾಫಿ ಗಿಡಗಳನ್ನು ನಾಶ ಮಾಡಿವೆ.


    ತಾಲೂಕಿನ ಮಲೆನಾಡು ಭಾಗದ ಅರೇಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ 40ಕ್ಕೂ ಹೆಚ್ಚಿನ ಭುವನೇಶ್ವರಿ ಹಾಗೂ ಬೀಟಮ್ಮ ಗುಂಪಿನ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಂಡರೆ ಪ್ರತ್ಯೇಕವಾಗಿ ಒಂದೆರಡು ಆನೆಗಳು ಬೇರೆ ಬೇರೆ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಕಾಡಾನೆಗಳ ಹಿಂಡು ಸಮೀಪದ ಕಾಫಿ ತೋಟ ಮತ್ತು ಬೆಳೆಗಳನ್ನು ನಾಶಪಡಿಸುತ್ತಿವೆ. ಜತೆಗೆ ಬಾಳೆ ಬೆಳೆಯನ್ನು ತಿಂದು ತುಳಿದು ಹಾಕಿವೆ. ತೋಟದಲ್ಲಿದ್ದ ಅಡಕೆ ಗಿಡಗಳನ್ನು ಕಿತ್ತು ಬಿಸಾಡಿವೆ.


    ಕೆಲ ದಿನಗಳಿಂದ ಬಂಡೆ, ಕೋಗೋಡು, ಕಿತ್ತಾವರ, ಕುಂಬಾರಳ್ಳಿ, ಸಿರಗುರ, ಹುನುಗನಹಳ್ಳಿ ಗ್ರಾಮದ ಆಸುಪಾಸಿನಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಸಿಬ್ಬಂದಿ ಏನೂ ಮಾಡಲಾಗದ ಸ್ಥಿತಿಗೆ ಬಂದಿದ್ದಾರೆ. ಮಳೆಯ ನಡುವೆ ಆನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದೆ. ಅಲ್ಲದೆ, ಶನಿವಾರ ಚೀಕನಹಳ್ಳಿ ಸಮೀಪದ ಬಂಡೆ ಗ್ರಾಮದ ರಮೇಶ್ ಸುವರ್ಣ ಅವರ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ತೋಟದಲ್ಲಿದ್ದ ಬಾಳೆ ಗಿಡಗಳನ್ನು ತಿಂದು ತುಳಿದು ಹಾಕಿವೆ. ತೋಟದಲ್ಲಿ ಹುಲುಸಾಗಿ ಬೆಳೆದಿದ್ದ ಅಡಕೆ ಗಿಡಗಳನ್ನು ಮನಸೋ ಇಚ್ಛೆ ಕಿತ್ತು ಎಲ್ಲೆಂದರಲ್ಲಿ ಬಿಸಾಡಿವೆ.
    ಕತ್ತಲಾಗುತ್ತಿದ್ದಂತೆ ಹಿಂಡು ಹಿಂಡಾಗಿ ಹೊರಡುವ ಕಾಡಾನೆಗಳು ಮನಸ್ಸಿಗೆ ಬಂದಲ್ಲಿ ನುಗ್ಗಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಆನೆಗಳನ್ನು ಶಾಶ್ವತವಾಗಿ ಮಲೆನಾಡು ಭಾಗದಿಂದ ದೂರದ ಕಾಡಿಗೆ ಓಡಿಸುವುದಕ್ಕೆ ಮುಂದಾಗಬೇಕು ಎಂಬುದು ರೈತರ ಮನವಿ.

    ಸರ್ಕಾರ ಎಚ್ಚೆತ್ತುಕೊಳ್ಳಲಿ
    ತಾಲೂಕಿನ ಮಲೆನಾಡು ಭಾಗದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ತೋಟ ಗದ್ದೆಗಳಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗುವ ಮುನ್ನ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಾಡಾನೆಗಳನ್ನು ಶಾಶ್ವತವಾಗಿ ತಾಲೂಕಿನಿಂದ ಓಡಿಸಲು ಮುಂದಾಗಬೇಕು. ಕೂಲಿ ಕಾರ್ಮಿಕರು, ಕಾಫಿ ಬೆಳೆಗಾರರು, ರೈತರು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕು ಎನ್ನುವುದು ಸ್ಥಳೀಯ ನಿವಾಸಿಗಳ ಒತ್ತಾಯ

    ಈಗಾಗಲೇ ತಾಲೂಕಿನಲ್ಲಿ ಕಾಡಾನೆಗಳು ಬೀಡು ಬಿಟ್ಟು ತೋಟ, ಜಮೀನು ಗದ್ದೆಗಳಲ್ಲಿ ಬೆಳೆ ನಷ್ಟ ಮಾಡಿರುವುದು ಗಮನಕ್ಕೆ ಬಂದಿದೆ. ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪರಿಶೀಲಿಸಲಾಗಿದೆ. ಇಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು.
    ವಿನಯ್ ಕುಮಾರ್, ವಲಯ ಅರಣ್ಯಾಧಿಕಾರಿ ಬೇಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts