More

    ಹೆದ್ದೂರಿನಲ್ಲಿ ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು

    ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ಕಂಬದಿಂದ ಬಿದ್ದು ಗಾಯಗೊಂಡಿದ್ದ ಲೈನ್‌ಮನ್‌ವೊಬ್ಬರು ಸಕಾಲಕ್ಕೆ ಆಂಬುಲೆನ್ಸ್ ಬಾರದ ಹಿನ್ನಲೆಯಲ್ಲಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
    ಶಿವಮೊಗ್ಗ ಮಲವಗೊಪ್ಪದ ನಿವಾಸಿ ರವಿ ನಾಯಕ (37) ಮೃತ ಲೈನ್‌ಮನ್. 12 ವರ್ಷಗಳಿಂದ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು ಗುರುವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹೆದ್ದೂರಿನಲ್ಲಿ ವಿದ್ಯುತ್ ಕಂಬದ ಮೇಲೆ ಹತ್ತಿ ಲೈನ್ ಕೆಲಸ ಮಾಡುವಾಗ ಆಯತಪ್ಪಿ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕಟ್ಟೇಹಕ್ಕಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಲ್ಲಿಂದ ತೀರ್ಥಹಳ್ಳಿಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
    ಸಕಾಲಕ್ಕೆ ಬಾರದ ಆಂಬುಲೆನ್ಸ್: ಗಂಭೀರವಾಗಿದ್ದ ರವಿ ನಾಯಕ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಸರ್ಕಾರಿ 108 ಆಂಬುಲೆನ್ಸ್‌ಗೆ ಕರೆ ಮಾಡಿ ಬಹಳ ಹೊತ್ತು ಕಾದರೂ ಬಾರಲೇ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಕಾರಿನಲ್ಲೇ ತೀರ್ಥಹಳ್ಳಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಕುಟುಂಬಸ್ಥರು, ಸಂಬಂಧಿಕರ ಆಕ್ರೋಶ:
    ಸಕಾಲಕ್ಕೆ ಆಂಬುಲೆನ್ಸ್ ಬಾರದ ಹಿನ್ನಲೆಯಲ್ಲಿ ರವಿ ನಾಯಕ ಮೃತಪಟ್ಟಿದಾರೆಂದು ಕುಟುಂಬಸ್ಥರು, ಸಂಬಂಧಿಕರೊಂದಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಇದೇ ರೀತಿಯಾಗಿ ಹಿಂದೊಮ್ಮೆ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದರು. ತುರ್ತು ಸಂದರ್ಭಗಳಲ್ಲಿ ಗ್ರಾಮೀಣ ಭಾಗದ ರೋಗಿಗಳ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಹಲವರು ಜೀವ ಕಳೆದುಕೊಳ್ಳುವಂತಾಗಿದೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬರಬೇಕು ಎಂದು ಸ್ಥಳೀಯರು ಪಟ್ಟು ಹಿಡಿದು ಧರಣಿ ನಡೆಸಿದರು.
    ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ. ನಟರಾಜ್ ಅವರು ಸಮಸ್ಯೆಗಳನ್ನು ಆಲಿಸಿ ಬೇಡಿಕೆಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದು ತಕ್ಷಣದಲ್ಲಿ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಒಂದು ವಾರದೊಳಗೆ ಕಟ್ಟೆಹಕ್ಕಲಿನ ಸರ್ಕಾರಿ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಹಾಗೂ ರೋಗಿಗಳಿಗೆ ಸರಿಯಾದ ಅಗತ್ಯ ಚಿಕಿತ್ಸೆ ಸಿಗದಿದ್ದಲ್ಲಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts