ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರ ಮಧ್ಯದ ಬಿಆರ್ಟಿಎಸ್ ಕಾರಿಡಾರ್ ಕೆಲವೇ ತಿಂಗಳಲ್ಲಿ ಇನ್ನಷ್ಟು ಪರಿಸರ ಸ್ನೇಹಿಯಾಗಿ ಸೇವೆ ನೀಡಲಿದೆ.
ಈಗಾಗಲೇ ಕಾರಿಡಾರ್ ಮಧ್ಯೆ ನಾಲ್ಕು ಮೀಟರ್ ಮೀಡಿಯನ್ನಲ್ಲಿ ಹಸಿರು ಗಿಡಗಳು ನಳನಳಿಸುತ್ತಿವೆ. ಕಾರಿಡಾರ್ ಅಕ್ಕಪಕ್ಕದಲ್ಲಿ ಗಿಡಗಳನ್ನು ಬೆಳೆಸಲು ಯೋಜನೆ ರೂಪಿಸಿ ಹಸಿರು ಬಿಆರ್ಟಿಎಸ್ ಆಗಿ ಪರಿವರ್ತನೆ ಮಾಡುತ್ತಿರುವ ಕಂಪನಿ ಇದೀಗ ಇಲೆಕ್ಟ್ರಿಕ್ ಬಸ್ಗಳನ್ನು ಓಡಿಸುವ ಯೋಜನೆ ರೂಪಿಸುವ ಮೂಲಕ ಮತ್ತಷ್ಟು ಪರಿಸರಕ್ಕೆ ಹತ್ತಿರವಾಗುತ್ತಿದೆ.
ಹೌದು. ಹುಬ್ಬಳ್ಳಿ- ಧಾರವಾಡ ಮಧ್ಯೆ ಬಿಆರ್ಟಿಎಸ್ ಕಂಪನಿ ಗುರುವಾರ ಇಲೆಕ್ಟ್ರಿಕ್ ಬಸ್ಗಳ ಪರೀಕ್ಷಾರ್ಥ ಸಂಚಾರ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಇವುಗಳ ಬಳಕೆ ಹೆಚ್ಚಿಸಿ ಪರಿಸರ ಮಾಲಿನ್ಯ ತಡೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ.
ಸದ್ಯ ಈ ಕಾರಿಡಾರ್ನಲ್ಲಿ ಡೀಸೆಲ್ ಬಸ್ಗಳು ಓಡಾಡುತ್ತಿದ್ದು, ಹೊಗೆ ಉಗುಳುತ್ತವೆ. ಆದರೆ, ಇಲೆಕ್ಟ್ರಿಕ್ ಬಸ್ಗಳು ವಿದ್ಯುತ್ ಬ್ಯಾಟರಿಗಳ ಮೂಲಕ ಸಂಚರಿಸುತ್ತವೆ. ಹಾಗಾಗಿ ಹೊಗೆ ಉಗುಳದೇ ಪರಿಸರಕ್ಕೆ ಪೂರಕವಾಗಿರುತ್ತವೆ.
ಪುಣೆಯ ಓಲೆಕ್ಟ್ರಾ ಕಂಪನಿ ಸಿದ್ಧಪಡಿಸಿದ ಇಲೆಕ್ಟ್ರಿಕ್ ಬಸ್ನ್ನು ಕಾರಿಡಾರ್ನಲ್ಲಿ ಪರೀಕ್ಷಾರ್ಥ ಓಡಿಸಲಾಯಿತು. ಪ್ರಸ್ತುತ ಸಂಚರಿಸುತ್ತಿರುವ ಚಿಗರಿ ಬಸ್ಗಳಿಗೂ ಇಲೆಕ್ಟ್ರಿಕ್ ಬಸ್ಗಳಿಗೂ ಹೆಚ್ಚಿನ ತಾಂತ್ರಿಕ ವ್ಯತ್ಯಾಸ ಇಲ್ಲ. ಬ್ಯಾಟರಿ ಚಾಲಿತ ಈ ಬಸ್ಗಳು ಚಿಗರಿಯಂತೆಯೇ ಬಸ್ ನಿಲ್ದಾಣಗಳಲ್ಲಿ ಹೊಂದಿಕೊಳ್ಳುತ್ತವೆ. ಪ್ರಯಾಣಿಕರು ಇಳಿಯಲು ಹಾಗೂ ಹತ್ತಲು ಅನುಕೂಲಕರವಾಗಿವೆ. ಯಾವುದೇ ಸಮಸ್ಯೆ ಇಲ್ಲದೇ ಪರೀಕ್ಷಾರ್ಥ ಸಂಚಾರ ಮುಗಿಸಿವೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.
ಅವಳಿ ನಗರ ಮಧ್ಯೆ ಇಲೆಕ್ಟ್ರಿಕ್ ಬಸ್ಗಳ ಸಂಚಾರದ ಕಾರ್ಯಸಾಧ್ಯತೆ, ಖರ್ಚು- ವೆಚ್ಚ, ಚಾಲನೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಎಲ್ಲವೂ ಹೊಂದಾಣಿಕೆಯಾದರೆ ಸುಮಾರು 50 ಬಸ್ಗಳನ್ನು ಖರೀದಿಸುವ ಯೋಜನೆ ಇದೆ ಎನ್ನುತ್ತಾರೆ ಅಧಿಕಾರಿಗಳು.