More

    ಅಭಿವೃದ್ಧಿ, ಆಡಳಿತ ಸುಧಾರಣೆಗೆ ಚುನಾವಣೆ ಮುಖ್ಯ: ಸಂತೋಷ್ ಕುಮಾರ್

    ಜಗಳೂರು: ಅಭಿವೃದ್ಧಿ, ಆಡಳಿತ ಸುಧಾರಣೆಗೆ ಚುನಾವಣೆ ಮುಖ್ಯ. ಮತದಾರರು ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ ಹಕ್ಕು ಚಲಾಯಿಸಬೇಕು ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಚುನಾವಣಾ ಆಯೋಗ, ಜಿಲ್ಲಾಡಳಿತ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮತದಾನ ಮಾಡುವುದು ಹಕ್ಕು ಮಾತ್ರವಲ್ಲ, ಅದು ದೇಶ ಕಟ್ಟುವ ನಿಟ್ಟಿನಲ್ಲಿ ಕರ್ತವ್ಯ ಕೂಡ ಆಗಿದೆ. ಆದ್ದರಿಂದ ಎಲ್ಲರೂ ಮುಕ್ತ, ಪಾರದರ್ಶಕ ವಾತಾವರಣದಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದರು.

    ಈ ಅಭಿಯಾನದಲ್ಲಿ ಎಲ್ಲ ಅರ್ಹ ಮತದಾರರು ಕೈ ಜೋಡಿಸಿ ಶೇ. 100ರಷ್ಟು ಮತದಾನಕ್ಕೆ ಮುಂದಾಗಬೇಕಿದೆ. ಜಗತ್ತಿನಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡ ಅತಿ ದೊಡ್ಡ ದೇಶ ನಮ್ಮದು. ಹೀಗಾಗಿ, ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ, ಅಭಿವೃದ್ಧಿ ಗೆ ಪೂರಕವಾಗಿ ಚುನಾವಣೆಗಳು ಅತಿ ಮಹತ್ತರ ಪಾತ್ರ ವಹಿಸುತ್ತವೆ ಎಂದರು.

    ಪ್ರತಿ ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಮತ್ತು ಜನಪರ ಕಾಳಜಿಯುಳ್ಳ ಅಭ್ಯರ್ಥಿಗೆ ನಿಮ್ಮ ಹಕ್ಕನ್ನು ನೀಡಿ. ಹಣ, ವಸ್ತು ಮತ್ತಿತರ ಆಮಿಷಗಳಿಗೆ ಬಲಿಯಾಗಬಾರದು ಎಂದರು.

    ಮುಖ್ಯಾಧಿಕಾರಿ ಲೋಕ್ಯನಾಯ್ಕ ಮಾತನಾಡಿ, ಹಲವು ಹಂತದ ಈ ಚುನಾವಣೆಯಲ್ಲಿ ನಮ್ಮ ದೇಶದ ಆಡಳಿತ ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಗಳಿಗೆ ಅತಿ ಮಹತ್ವ ನೀಡಬೇಕಾಗುತ್ತದೆ. ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಮುಕ್ತವಾಗಿ ಭಾಗವಹಿಸುವಂತೆ ಮನವಿ ಮಾಡಿದರು.

    ಪಟ್ಟಣದ ಪೋಲಿಂಗ್ ಬೂತ್‌ನ 17 ವಾರ್ಡ್‌ಗಳಲ್ಲಿ ಶೇ.100ರಷ್ಟು ಮತದಾನವಾಗುವ ಕಾರಣಕ್ಕೆ ಎಲ್ಲ ವಾರ್ಡ್‌ಗಳಲ್ಲಿ ಜಾಥಾ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ. ಕಡ್ಡಾಯವಾಗಿ ಮತದಾನದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅರಿವು ಮೂಡಿಸುವ ಕೆಲಸವನ್ನು ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ ಎಂದರು.

    ಸಿಪಿಐ ಶ್ರೀನಿವಾಸರಾವ್, ಪಿಎಸ್‌ಐ ಡಿ.ಸಾಗರ್, ಪಪಂ ಆರೋಗ್ಯಾಧಿಕಾರಿ ಕಿಫಾಯತ್ ಅಹಮ್ಮದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts