More

    ಅಧಿಕಾರವಿದ್ದರೂ ಅಭಿವೃದ್ಧಿ ಏಕೆ ಮಾಡಲಿಲ್ಲ: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ

    ಮಂಡ್ಯ: ಹಣದ ಆಸೆಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ರಮೇಶ ಬಂಡಿಸಿದ್ದೇಗೌಡ ಅವರು ಅಲ್ಲಿಯೂ ನಿಷ್ಠೆಯಿಂದಿಲ್ಲ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದರು.
    ನಗರದ ಖಾಸಗಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ 1ನೇ ವೃತ್ತದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ ಬಂಡಿಸಿದ್ದೇಗೌಡ ಕುಟುಂಬಕ್ಕೆ ಎಚ್.ಡಿ.ದೇವೇಗೌಡ ಅವರು 35 ವರ್ಷ ಅಧಿಕಾರ ನೀಡಿದರು. ಆದರೂ ಆ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಅಷ್ಟು ವರ್ಷ ಅಧಿಕಾರ ಅನುಭವಿಸಿದರೂ ಅನುದಾನ ಏಕೆ ತರಲಿಲ್ಲ. ರಾಜಕೀಯಕ್ಕೆ ಬಂದ ಮೇಲೆ ಜನಸೇವೆ ಮಾಡಬೇಕು. ಅದನ್ನು ಮಾಡದೇ ನಾನು ಮಾಡಿರುವ ಅಭಿವೃದ್ಧಿ ಕಂಡು ಒಳಸಂಚು ನಡೆಸುತ್ತಿರುವ ಜನರೇ ಮುಂದೆ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
    ಶ್ರೀರಂಗಪಟ್ಟಣವನ್ನು ಪ್ರಬಲ ಕ್ಷೇತ್ರವನ್ನಾಗಿ ಮಾಡಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡುವುದೇ ನನ್ನ ಗುರಿ. ನಾನು ಶಾಸಕನಾಗಿ ಹಣ ಮಾಡಲು ಬಂದವನಲ್ಲ. ಪ್ರಾಮಾಣಿಕವಾಗಿ ಜನಸೇವೆ ಮಾಡಲು ಬಂದವನು. ಜನರು ಹೇಗೆ ತಮ್ಮ ಜಮೀನುಗಳಲ್ಲಿ ಹೆಚ್ಚು ಇಳುವರಿ ಕೊಡುವ ಬೆಳೆಯನ್ನು ನಾಟಿ ಮಾಡುತ್ತೀರೋ, ಹಾಗೆಯೇ ಕ್ಷೇತ್ರಕ್ಕೆ ಯಾರು ಉತ್ತಮರು ಎಂಬುದನ್ನು ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯಿಂದ ಎರರು ರಾಷ್ಟ್ರೀಯ ಪಕ್ಷಗಳು ಆತಂಕಗೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗೃಹಿಣಿಗೆ 2 ಸಾವಿರ ರೂ ನೀಡುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಅಧಿಕಾರಕ್ಕೆ ಬರದಿದ್ದರೆ ರಮೇಶ ಬಂಡಿಸಿದ್ದೇಗೌಡ ಅವರು ಹಣ ನೀಡಲಿದ್ದಾರೆಯೇ ಎಂದು ಪ್ರಶ್ನಿಸಿದರು.
    ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮು, ಜಿಪಂ ಮಾಜಿ ಸದಸ್ಯ ನರಸಿಂಹಾಚಾರ್, ಕಾನೂನು ಘಟಕದ ರಾಜ್ಯ ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಕೊತ್ತತ್ತಿ ತಮ್ಮಣ್ಣ, ಪುಟ್ಟಸ್ವಾಮಿ, ಯತೀಶ್, ದೇವರಾಜು, ಕಾಳೇನಹಳ್ಳಿ ತಿಮ್ಮೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts