More

    ಪ್ರತಿಪಕ್ಷ ನಾಯಕರ ಆಯ್ಕೆ ಇಂದು; ಬಿಜೆಪಿ ಕೇಂದ್ರ ವೀಕ್ಷಕರಾಗಿ ಸಚಿವೆ ನಿರ್ಮಲಾ ಸೀತಾರಾಮನ್, ದುಷ್ಯಂತಕುಮಾರ್ ಗೌತಮ್

    ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ತೆರೆಮರೆ ಚಟುವಟಿಕೆಗಳು ಗರಿಗೆದರಿವೆ. ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆಗೆ ಶುಕ್ರವಾರ ಸಂಜೆ 6ಕ್ಕೆ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಪೂರಕವಾಗಿ ಆಕಾಂಕ್ಷಿಗಳು ತಮ್ಮದೇ ಆದ ಕಸರತ್ತಿಗೆ ಕೈಹಾಕಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಕರೆದಿರುವ ಈ ಸಭೆ ಸುಸೂತ್ರ, ಆಯ್ಕೆಯು ಸುಗಮವಾಗಿ ನೆರವೇರಿಸುವ ಉದ್ದೇಶದಿಂದ ಪಕ್ಷದ ವರಿಷ್ಠರು ಕೇಂದ್ರದ ವೀಕ್ಷಕರನ್ನಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪಕ್ಷದ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ದುಷ್ಯಂತಕುಮಾರ್ ಗೌತಮ್ ರನ್ನು ಕಳುಹಿಸಿಕೊಟ್ಟಿದೆ.

    ನಿರ್ಮಲಾ ಸೀತಾರಾಮನ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿಯಾಗಿ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಉಭಯ ಕುಶಲೋಪರಿ ನಂತರ ವಿಜಯೇಂದ್ರ ಅವರು ಪಕ್ಷದ ರಾಜ್ಯ ಕಚೇರಿಗೆ ತೆರಳಿದರು.

    ಪಕ್ಷದ ಮತ್ತೊಬ್ಬ ಕೇಂದ್ರ ವೀಕ್ಷಕ ದುಷ್ಯಂತಕುಮಾರ್ ಗೌತಮ್ ಅವರು ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಜತೆಗೆ ಪಕ್ಷದ ರಾಜ್ಯ ಕಚೇರಿಗೆ ಧಾವಿಸಿದರು. ವಿಧಾನ ಮಂಡಲದ ಉಭಯ ಸದನಗಳ ಆಯ್ಕೆ ಪೂರ್ಣಗೊಳಿಸುವ ಮೂಲಕ ಅಧಿಕೃತ ನಾಯಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲು ಬಿಜೆಪಿ ಸಜ್ಜಾಗಲಿದೆ.

    ಕೇಂದ್ರ ವೀಕ್ಷಕರು ಹೊತ್ತು ತಂದ ಸಂದೇಶವೇನು ?

    ಜಾತಿ, ಪ್ರದೇಶ, ಅನುಭವ ಹಾಗೂ ಕಲಾಪದಲ್ಲಿ ಪಟುತ್ವ ಆಧಾರದಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಯಾಗಲಿದ್ದು, ಯಾರೂ ಊಹಿಸದ ಅಚ್ಚರಿ ಅಭ್ಯರ್ಥಿಗಳು ಆಯ್ಕೆ ಸಾಧ್ಯತೆಗಳಿವೆ. ಪಕ್ಷದ ವರಿಷ್ಠರ ಒಲವು, ನಿಲುವು ಏನೆಂಬುದು ಗುಟ್ಟಾಗಿ ಉಳಿದಿದ್ದು, ಕೇಂದ್ರ ವೀಕ್ಷಕರಿಬ್ಬರು ಹೊತ್ತು ತಂದ ಸಂದೇಶದ ಬಗ್ಗೆ ಕುತೂಹಲವಿದೆ.

    ಜತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಪೇಕ್ಷೆ ಬಗ್ಗೆ‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ರಾಜ್ಯ ಸಾರಥಿಯಾಗಿ ಬಿ.ವೈ.ವಿಜಯೇಂದ್ರ, ಸದನದೊಳಗೆ ಪ್ರತಿಪಕ್ಷ ನಾಯಕರ ಸಂಯೋಜನೆ ಅಷ್ಟೇ ಮುಖ್ಯವಾಗಿದೆ. ಪ್ರತಿಪಕ್ಷ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವುದು, ಸಂಘಟನೆಗೂ ಅನುಕೂಲವಾಗಿ ಪರಿಣಮಿಸುವ ಸಮತೋಲನ ಸೂತ್ರ ಅಗತ್ಯವೆಂಬುದು ಪಕ್ಷದ ಮೂಲಗಳ ಅಭಿಪ್ರಾಯವಾಗಿದೆ.

    ವಯೋಮಿತಿ ಮಾನದಂಡ, ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ಆರ್.ಅಶೋಕ್, ಪ್ರಭಾವಿಯೊಬ್ಬರ ಒಲವಿದೆ ಎಂಬ ಕಾರಣಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ, ಹಿಂದುಳಿದ ವರ್ಗ, ಕರಾವಳಿಗೆ ಆದ್ಯತೆ ದೃಷ್ಟಿಯಲ್ಲಿ ವಿ.ಸುನಿಲ್ ಕುಮಾರ್, ಆಕ್ರಮಣಕಾರಿ ಶೈಲಿ ವಿಚಾರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ಸದ್ಯಕ್ಕೆ ಚರ್ಚೆಯಲ್ಲಿವೆ.

    ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಯಾರಾಗುತ್ತಾರೆ ಎಂಬುದರ ಮೇಲೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನ ಹೆಸರು ಅಂತಿಮವಾಗಲಿದೆ. ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ತೇಜಸ್ವಿನಿಗೌಡ, ಛಲವಾದಿ ನಾರಾಯಣಸ್ವಾಮಿ ಹೆಸರುಗಳು ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts