More

    ವಿಜಯಾನಂದ ಸ್ವಾಭಿಮಾನಿ ಅಭ್ಯರ್ಥಿ: ಜೆಡಿಎಸ್‌ಗೆ ಸೆಡ್ಡು ಹೊಡೆದ ಬಂಡಾಯಗಾರರು

    ಮಂಡ್ಯ: ನಿರೀಕ್ಷೆಯಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್.ವಿಜಯಾನಂದ ’ಸ್ವಾಭಿಮಾನಿ ಅಭ್ಯರ್ಥಿ’ಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅಖಾಡದಲ್ಲಿ ಮತ್ತೊಮ್ಮೆ ಸ್ವಾಭಿಮಾನಿ ಅಭ್ಯರ್ಥಿ ವಿರುದ್ಧ ಹೋರಾಡಬೇಕಿದೆ.
    ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಬಿ ಫಾರ್ಮ್ ನೀಡಿದ ಹಿನ್ನೆಲೆಯಲ್ಲಿ ಬಂಡಾಯ ಸಾರಿದ್ದ ಶಾಸಕ ಎಂ.ಶ್ರೀನಿವಾಸ್, ತಮ್ಮ ನೇತೃತ್ವದಲ್ಲಿ ವಿಜಯಾನಂದ, ಎಚ್.ಎನ್.ಯೋಗೇಶ್ ಮತ್ತು ಮಹಾಲಿಂಗೇಗೌಡ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ನಡುವೆ ಹಲವು ಮನವೊಲಿಕೆ ಯತ್ನ ನಡೆದರೂ ಪ್ರಯೋಜನಕ್ಕೆ ಬರಲಿಲ್ಲ. ಮೊದಲೇ ಘೋಷಣೆ ಮಾಡಿದಂತೆ ಸ್ಪರ್ಧೆಗೆ ಸೈ ಎಂದಿದ್ದಾರೆ. ಸೋಮವಾರ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ವಿಜಯಾನಂದ ಒಮ್ಮತದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಯಿತು.
    ಎಂ.ಶ್ರೀನಿವಾಸ್ ನೇತೃತ್ವದಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಬೆಂಬಲಿಗರು ಬಹುಪರಾಕ್ ತಿಳಿಸಿದರು. ಮಾತ್ರವಲ್ಲದೆ ಸ್ವಾಭಿಮಾನದ ಪಡೆ ಹೆಸರಿನಲ್ಲಿ ಚುನಾವಣೆ ನಡೆಸಿ ತಮ್ಮ ಶಕ್ತಿ ತೋರಿಸೋಣವೆಂದು ಘೋಷಣೆ ಮೊಳಗಿಸಿದರು. ಇನ್ನು ಯೋಗೇಶ್ ಹಾಗೂ ಮಹಾಲಿಂಗೇಗೌಡ ನಾಮಪತ್ರ ವಾಪಸ್ ಪಡೆದರು. ಈ ನಡುವೆ ಬಂಡಾಯಗಾರರ ಪಾಳಯದಲ್ಲಿದ್ದ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಅವರನ್ನು ಭೇಟಿ ಮಾಡಿ ಜೆಡಿಎಸ್ ಮುಖಂಡರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡುವುದಾಗಿ ಮಂಜು ಘೋಷಣೆ ಮಾಡಿದ್ದಾರೆ.
    ಕೆವಿಎಸ್ ಕುಟುಂಬ ಉಳಿಸುವ ಹೊಣೆ ನಿಮ್ಮ ಮೇಲಿದೆ: ಸಭೆಯಲ್ಲಿ ಮಾತನಾಡಿದ ಸ್ವಾಭಿಮಾನಿ ಪಡೆಯ ಅಭ್ಯರ್ಥಿ ಕೆ.ಎಸ್.ವಿಜಯಾನಂದ, ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ತೆಗೆದುಕೊಂಡ ತೀರ್ಮಾನದಂತೆ ನನ್ನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸಭೆ ತೀರ್ಮಾನಿಸಿದ್ದು, ಅದಕ್ಕೆ ನಾನು ಋಣಿಯಾಗಿರುತ್ತೇನೆ. ಸಹಕಾರ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಕೆ.ವಿ.ಶಂಕರಗೌಡ ಕುಟುಂಬವನ್ನು ಗಂಡು ಮೆಟ್ಟಿದ ನಾಡು, ರಾಜಕೀಯ ಪ್ರಜ್ಞಾವಂತಿಕೆಯ ತವರೂರು ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಲ್ಲೆಯ ರಾಜಕಾರಣದಲ್ಲಿ ಉಳಿಸುವ ಹೊಣೆಗಾರಿಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರ ತೀರ್ಮಾನಕ್ಕೆ ಬಿಟ್ಟದ್ದು ಎಂದರು.
    ನಾನು ಯಾವುದೇ ಪಕ್ಷದ ಬಂಡಾಯ ಅಭ್ಯರ್ಥಿಯಲ್ಲ. ಜನರ ತೀರ್ಮಾನವೇ ಅಂತಿಮ. ನಮ್ಮ ಗೆಲುವೇ ಮುಖ್ಯವೇ ಹೊರತು, ಬೇರೆಯವರನ್ನು ಸೋಲಿಸುವುದು ನಮ್ಮ ಗುರಿಯಲ್ಲ. ಕ್ಷೇತ್ರದ ರಾಜಕೀಯ ಪಡಸಾಲೆಯಲ್ಲಿ ವ್ಯಕ್ತವಾಗುವ ವದಂತಿಗಳಿಗೆ ದಯಮಾಡಿ ಕಿವಿಗೊಡಬೇಡಿ. ನಾನು ಎಂತಹ ಕಠಿಣ ಸಂದರ್ಭದಲ್ಲೂ ಕಣದಿಂದ ಹಿಂದೆ ಸರಿಯುವುದಿಲ್ಲ. ನಿಷ್ಠೆ, ನಿಯತ್ತಿನಿಂದ ಸಮಾಜ ಸೇವೆ ಮಾಡಿರುವ ಕುಟುಂಬ ನಮ್ಮದು. ಆದರೆ ನಮ್ಮ ಬಳಿ ಹಣವಿಲ್ಲ, ಜನರಿಗೆ ಮೋಸ ಮಾಡಿ ಬದುಕುವುದು ನಮ್ಮ ಜಾಯಮಾನವಲ್ಲ. ಕ್ಷೇತ್ರದ ಜನತೆ ನನ್ನನ್ನು ನಂಬಿ ಬೆಂಬಲಿಸಿದರೆ ಸದಾ ನಿಮ್ಮ ಜತೆ ಇದ್ದು, ಕಾರ್ಯನಿರ್ವಹಿಸುತ್ತೇನೆ. ನಮ್ಮ ಕುಟುಂಬವನ್ನು ಪೋಷಿಸುವ ಹೊಣೆಗಾರಿಕೆ ಕ್ಷೇತ್ರದ ಜನರದ್ದು ಎಂದು ಕಣ್ಣೀರು ಹಾಕಿದರು.
    ದೇವರ ಆಶೀರ್ವಾದ ಹಾಗೂ ಜನತೆಯ ಬೆಂಬಲದ ಶಕ್ತಿ ಮಾತ್ರ ನನಗಿದೆ. ನನಗೆ ಸ್ವಂತ ನಿವೇಶನ ಅಥವಾ ಮನೆಯಿಲ್ಲ, ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. 2 ಎಕರೆ ಜಮೀನು ನನ್ನ ಹೆಸರಿನಲ್ಲಿದೆ. ಅದು ಚಿಕ್ಕಪ್ಪನಿಗೆ ಸೇರಬೇಕಾದ ಆಸ್ತಿ. ಕ್ಷೇತ್ರದ ಮತದಾರರ ಕಾಲಿಗೆ ಬಿದ್ದು, ಕೈ ಮುಗಿದು, ಆಶೀರ್ವದಿಸುವಂತೆ ಮನವಿ ಮಾಡುತ್ತೇನೆ. ಮತದಾರರು ಸ್ವಾಭಿಮಾನಿ ಪಡೆಯ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ, ಮತದಾರರು ಹಾಗೂ ನಮ್ಮೊಳಗಿರುವ ಕೆಲ ಮುಖಂಡರಿಗೆ ಆಮಿಷ ತೋರುವ, ಬೆದರಿಸುವ ಕೆಲಸ ನಡೆಯುತ್ತಿದೆ. ಅದು ಅಸಾಧ್ಯದ ಮಾತು. ನಾನು ಮತ್ತು ತಿಮ್ಮೇಗೌಡ ಬಸರಾಳು ಹೋಬಳಿಗೆ, ಎಚ್.ಎನ್.ಯೋಗೇಶ್ ಕಸಬಾ ಹೋಬಳಿಗೆ, ಅಭ್ಯರ್ಥಿ ವಿಜಯಾನಂದ್ ಕೆರಗೋಡು ಹೋಬಳಿ ಮತ್ತು ಶಾಸಕ ಎಂ.ಶ್ರೀನಿವಾಸ್ ಮಂಡ್ಯ ನಗರ ವ್ಯಾಪ್ತಿಗೆ ನಾಯಕತ್ವ ವಹಿಸಿ ಚುನಾವಣೆ ಮಾಡುತ್ತೇವೆ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.
    ಸಭೆಯಲ್ಲಿ ಮುಖಂಡರಾದ ಬಿ.ಲೋಕೇಶ್, ಬಸರಾಳು ತಿಮ್ಮೇಗೌಡ, ಎಂ.ಆರ್.ಎಂ. ಮಂಜು, ಜಯಶೀಲಮ್ಮ ಇತರರಿದ್ದರು.
    ನಾಗಮಂಗಲ ತಂತ್ರಕ್ಕೆ ಮೊರೆ: ವಿಜಯಾನಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಅಲರ್ಟ್ ಆಗಿರುವ ದಳಪತಿಗಳು ಎರಡನೇ ಹಂತದ ಮುಖಂಡರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಕಳೆದ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಬಳಸಿದ್ದ ಅಸವನ್ನು ಇದೀಗ ಹೂಡುತ್ತಿದ್ದಾರೆ. ಅದೆಂದರೆ ನಾಗಮಂಗಲ ಚುನಾವಣೆ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಖುದ್ದು ಮುಖಂಡರಿಗೆ ಕರೆ ಮಾಡಿ ಚುನಾವಣೆ ಮಾಡುವಂತೆ ಮನವಿ ಮಾಡಿದ್ದರು. ದೇವೇಗೌಡರೇ ಕರೆ ಮಾಡಿದ್ದರಿಂದ ಮುಖಂಡರು ಸ್ವಯಂಪ್ರೇರಿತರಾಗಿ ಚುನಾವಣೆ ಮಾಡಿದ್ದರು.
    ಇದೀಗ ಕುಮಾರಸ್ವಾಮಿ ಹಾಗೂ ನಿಖಿಲ್‌ಕುಮಾರಸ್ವಾಮಿ ಅವರೇ ಖುದ್ದು ಎರಡನೇ ಹಂತದ ಮುಖಂಡರಿಗೆ ಕರೆ ಮಾಡಿ ಪಕ್ಷದ ಅಭ್ಯರ್ಥಿ ಪರ ಚುನಾವಣೆ ಮಾಡುವಂತೆ ಹೇಳುತ್ತಿದ್ದಾರೆ. ಅದರಂತೆ ಕೆಲವರು ಈಗಾಗಲೇ ಪಕ್ಷದ ಪರವಾಗಿ ನಿಲ್ಲುವಂತೆ ಮಾಡಿದೆ. ಆದರೆ ಈ ನಡುವೆ ಕೆವಿಎಸ್ ಹಾಗೂ ಎಂ.ಶ್ರೀನಿವಾಸ್ ಹಿತೈಷಿಗಳು ಮಾತ್ರ ಸ್ಪಂದಿಸುತ್ತಿಲ್ಲ.
    ಈ ನಡುವೆ ವಿಜಯಾನಂದ ಹೆಸರು ಘೋಷಣೆಯಾಗುತ್ತಿದ್ದಂತೆ ಹಲವರು ವೇದಿಕೆಯಲ್ಲಿಯೇ ಚುನಾವಣೆ ಖರ್ಚಿಗೆಂದು ಆರ್ಥಿಕ ನೆರವು ನೀಡಿದರು. ಮಾತ್ರವಲ್ಲದೆ ಬೇರೆ ಕ್ಷೇತ್ರದ ಮುಖಂಡರು ಕೂಡ ಬೂತ್ ವಹಿಸಿಕೊಂಡು ಚುನಾವಣೆ ಮಾಡುವುದಾಗಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ.
    ಕೆಎಸ್‌ವಿಗೆ ಡೈಮಂಡ್ ಚಿಹ್ನೆ: ಪಕ್ಷೇತರ ಅಭ್ಯರ್ಥಿ ವಿಜಯಾನಂದ ಅವರಿಗೆ ಡೈಮಂಡ್ ಚಿಹ್ನೆ ನೀಡಲಾಗಿದೆ. ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಸೇವೆಯ ಮೂಲಕವೇ ನಿತ್ಯಸಚಿವರೆನ್ನಿಸಿಕೊಂಡಿದ್ದ ಶಂಕರಗೌಡ ಅವರು ಡೈಮಂಡ್‌ನಂತೆ ಹೊಳೆಯುತ್ತಿದ್ದರು. ಇದೀಗ ಅವರ ಮೊಮ್ಮಗನಿಗೆ ಡೈಮಂಡ್ ಚಿಹ್ನೆ ಸಿಕ್ಕಿರುವುದು ವಿಶೇಷ ಎಂದು ಬೆಂಬಲಿಗರು ಅಭಿಪ್ರಾಯಪಡುತ್ತಿದ್ದಾರೆ. ಜತೆಗೆ ರಾಜಕೀಯದ ಬಹುದೊಡ್ಡ ನಿರ್ಧಾರವನ್ನು ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ತೆಗೆದುಕೊಂಡಿರುವುದರಿಂದ ಒಳ್ಳೆಯದೇ ಆಗಲಿದೆ ಎನ್ನುವ ವಿಮರ್ಶೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts