More

    ಜಿಪಂ, ತಾಪಂ ಚುನಾವಣೆ ಕ್ಷೇತ್ರಗಳ ಮರು ವಿಂಗಡಣೆ

    ಪುತ್ತೂರು: ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕೆಲವೇ ತಿಂಗಳಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರಗಳ ಮರು ವಿಂಗಡಣೆಗೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸುತ್ತೋಲೆ ಹೊರಡಿಸಿದೆ. ಇದರಿಂದ ಪುತ್ತೂರು, ಕಡಬ ತಾಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾನ ಹೆಚ್ಚಳವಾಗಲಿದ್ದು, ತಾಲೂಕು ಪಂಚಾಯಿತಿ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ.

    ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರು ವಿಂಗಡನೆ ಆಗಲಿದ್ದು, ಪ್ರತಿ ತಾಲೂಕಿಗೆ ಸ್ಥಾನಗಳ ಸಂಖ್ಯೆ ನಿಗದಿಪಡಿಸಿ ಇದರನ್ವಯ ಯಾವ್ಯಾವ ಕ್ಷೇತ್ರ ಹೊಸದಾಗಿ ರಚಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಪ್ರಸ್ತುತ ಪುತ್ತೂರು ತಾಲೂಕಿನಲ್ಲಿ 3, ಕಡಬ ತಾಲೂಕಿನಲ್ಲಿ 3 ಜಿಪಂ ಕ್ಷೇತ್ರಗಳಿದ್ದು, ಮರು ವಿಂಗಡಣೆ ನಂತರ ಎರಡು ತಾಲೂಕಿನಲ್ಲಿ ತಲಾ ಒಂದು ಜಿಪಂ ಸ್ಥಾನ ಹೆಚ್ಚಾಗಲಿದೆ. ಪುತ್ತೂರು ತಾಪಂನಲ್ಲಿ ಪ್ರಸ್ತುತ 14 ಸ್ಥಾನಗಳಿದ್ದು, 11ಕ್ಕೆ ಇಳಿಯಲಿದೆ. ಕಡಬದಲ್ಲಿ 12ರಿಂದ 9ಕ್ಕೆ ಇಳಿಯಲಿದೆ.

    ಕಡಬ ಹೊಸ ತಾಪಂ ಆಗಿ ರೂಪು: 2016ರ ಚುನಾವಣೆ ಸಂದರ್ಭ ಪುತ್ತೂರು ತಾಪಂ ವ್ಯಾಪ್ತಿಗೆ ಕಡಬ ಒಳಪಟ್ಟಿತ್ತು. ಆಗ ಒಟ್ಟು 24 ಸದಸ್ಯ ಸ್ಥಾನವಿತ್ತು. ಕಡಬ ಹೊಸ ತಾಪಂ ಆಗಿ ರೂಪುಗೊಂಡ ಬಳಿಕ ಪುತ್ತೂರು ತಾಪಂನ 24 ಸ್ಥಾನಗಳ ಪೈಕಿ 10 ಸ್ಥಾನ ಕಡಬಕ್ಕೆ ಸೇರಿತು. ಇದರಿಂದ ಪುತ್ತೂರಿನ ಸ್ಥಾನ ಬಲ 14ಕ್ಕೆ ಇಳಿದಿತ್ತು. ಹೊಸದಾಗಿ ಕ್ಷೇತ್ರ ರಚನೆ ಸಂದರ್ಭ ಮತ್ತೆ 3 ಸ್ಥಾನ ಇಳಿಕೆ ಕಂಡು 11ಕ್ಕೆ ತಲುಪಲಿದೆ. ಜಿಪಂ ಕ್ಷೇತ್ರ ಸಂಬಂಧಿಸಿ ಈ ಹಿಂದಿನ ಅವಧಿಯಲ್ಲಿ ಪುತ್ತೂರು, ಕಡಬ ತಾಲೂಕು ಒಟ್ಟು 6 ಸ್ಥಾನ ಹೊಂದಿತ್ತು. ಈಗ ಅದರ ಸಂಖ್ಯೆ 8ಕ್ಕೆ ಏರಿಯಾಗಲಿದೆ.

    ಗ್ರಾಮದ ಹೆಸರಲ್ಲಿ ನಾಮಕರಣ: ಮರು ವಿಂಗಡಿತ ತಾಪಂ, ಜಿಪಂ ಕ್ಷೇತ್ರಕ್ಕೆ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದ ಹೆಸರು ಇಡಲಾಗುತ್ತದೆ. ತಾಪಂ ಕ್ಷೇತ್ರ ರಚನೆ ಸಂದರ್ಭ ಜಿಪಂ ಕ್ಷೇತ್ರದೊಳಗೆ ಎಷ್ಟು ತಾಪಂ ಕ್ಷೇತ್ರಗಳನ್ನು ರಚಿಸಬಹುದೋ ಅಷ್ಟು ಕ್ಷೇತ್ರಗಳನ್ನು ಆ ಜಿಪಂ ಕ್ಷೇತ್ರದ ವ್ಯಾಪ್ತಿಯೊಳಗೆ ರಚಿಸುವುದು, ಪೂರ್ಣ ಗ್ರಾಪಂ ಒಗ್ಗೂಡಿಸಿ ಕ್ಷೇತ್ರ ರಚಿಸುವುದು, ಅದು ಸಾಧ್ಯವಾಗದಿದ್ದರೆ ಕಂದಾಯ ಗ್ರಾಮ ಬೇರ್ಪಡಿಸದೆ ಗುಂಪು ಮಾಡುವುದು, ಒಂದು ತಾಪಂ ಕ್ಷೇತ್ರ ಎರಡು ಜಿಪಂ ವ್ಯಾಪ್ತಿಯೊಳಗೆ ಸೇರದಂತೆ ಗಮನ ಹರಿಸುವ ಬಗ್ಗೆ ಸೂಚಿಸಲಾಗಿದೆ.

    ತಾಪಂ ಕ್ಷೇತ್ರ ರಚಿಸಲು 12.5 ಸಾವಿರದಿಂದ 15 ಸಾವಿರ ಜನಸಂಖ್ಯೆ ಅಗತ್ಯವಿದ್ದರೆ, ಜಿಪಂ ಕ್ಷೇತ್ರ ರಚಿಸಲು 35ರಿಂದ 40 ಸಾವಿರ ಜನಸಂಖ್ಯೆಯ ಅವಶ್ಯಕತೆ ಇದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರು ವಿಂಗಡಣೆ ಆಗಲಿದೆ. ಆಯೋಗ ಸುತ್ತೋಲೆಯಲ್ಲಿ ಸೂಚಿಸಿದ ಪ್ರಕಾರದಲ್ಲಿ ಮರು ವಿಂಗಡಣೆ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ.
    – ನಾಗೇಶ್, ಪುತ್ತೂರು ಚುನಾವಣಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts