More

    ಈಚನೂರು ಕೆರೆ ಮಣ್ಣಿಗಾಗಿ ಸಂಘರ್ಷ ; ರೈತರು-ಗುತ್ತಿಗೆದಾರರ ನಡುವೆ ಗಲಾಟೆ; ತಾಲೂಕು ಆಡಳಿತದ ಮಧ್ಯ ಪ್ರವೇಶ

    ತಿಪಟೂರು : ಈಚನೂರು ಕೆರೆ ಮಣ್ಣಿನ ವಿಚಾರವಾಗಿ ರೈತರು ಮತ್ತು ಗುತ್ತಿಗೆದಾರ ನಡುವೆ ಸಂಘರ್ಷ ಏರ್ಪಟ್ಟಿದೆ.
    ಮಣ್ಣಿಗಾಗಿ ಹೋದ ಟ್ರ್ಯಾಕ್ಟರ್ ಚಾಲಕರ ಮೇಲೆ ಗುತ್ತಿಗೆದಾರರ ಕಡೆಯವರು ಶನಿವಾರ ಜೆಸಿಬಿ ಹರಿಸುವ ಬೆದರಿಕೆ ಹಾಕಿದ ಆರೋಪ, ಪ್ರತ್ಯಾರೋಪ ಬಗೆಹರಿಸುವ ಸಲುವಾಗಿ ಶಾಸಕ ಬಿ.ಸಿ.ನಾಗೇಶ್ ಉಪಸ್ಥಿತಿಯಲ್ಲಿ ಭಾನುವಾರ ಈಚನೂರಿನಲ್ಲಿ ರೈತರ ತುರ್ತು ಸಭೆ ಏರ್ಪಡಿಸಲಾಗಿತ್ತು.

    ಮಣ್ಣು ತುಂಬಿಸಿಕೊಳ್ಳುವ ವಿಚಾರವಾಗಿ ರೈತರು ಸತ್ಯ ಹರಿಶ್ಚಂದ್ರರೇ…ಎಂದು ಸಭೆಯಲ್ಲಿ ಪ್ರಶ್ನಿಸಿದ ಇಂಜಿನಿಯರ್ ವಿರುದ್ಧ ರೈತರು ವಾಗ್ವಾದಕ್ಕಿಳಿದಿದ್ದರಿಂದ ಪರಿಸ್ಥಿತಿ ತಿಳಿಗೊಳಿಸಲು ತಾಲೂಕು ಆಡಳಿತ ಮಧ್ಯ ಪ್ರವೇಶ ಮಾಡಬೇಕಾಯಿತು.
    ಸಭೆಯಲ್ಲಿ ರೈತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸೈಟ್ ಇಂಜಿನಿಯರ್‌ಗೆ ಶಾಸಕರು ಎಚ್ಚರಿಕೆ ನೀಡಿದ್ದಲ್ಲದೆ, ಮರಳನ್ನು ಖಾಸಗಿಯಾಗಿ ಮಾರಿದರೆ, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮದ ಜತೆಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

    ಗುತ್ತಿಗೆದಾರರ ಬೆಂಬಲಿಗರು ಕೆರೆಯಂಗಳದಲ್ಲಿ ಸಿಗುವ ಮರಳನ್ನು ಖಾಸಗಿಯಾಗಿ ಮಾರಿಕೊಳ್ಳುತ್ತಿದ್ದಾರೆ ಎಂದು ದೂರಿದ ರೈತರ ಮೇಲೆ ಸೇಡಿನ ಕ್ರಮವಾಗಿ ಕೆರೆ ಮಣ್ಣು ತೆಗೆದುಕೊಂಡು ಹೋಗಲು ಬಂದಿದ್ದ ರೈತರ ಮೇಲೆ ಜೆಸಿಬಿ ಹರಿಸುವ ಪ್ರಯತ್ನ ನಡೆದಿದೆ ಎಂಬುದು ರೈತರ ಆರೋಪ.

    ಕೆರೆ ಅಂಗಳಕ್ಕೆ ಮ್ಯಾಟ್ ಅಳವಡಿಕೆ ವಿಚಾರ: ಕಾಮಗಾರಿ ವೇಳೆ ಕೆರೆ ಅಂಗಳಕ್ಕೆ ರಬ್ಬರ್ ಮ್ಯಾಟ್ ಅಳವಡಿಸುವ ಕುರಿತು ಸಾಕಷ್ಟು ರೈತರು ತೀವ್ರ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಪ್ರಾಜೆಕ್ಟ್ ಇಂಜಿನಿಯರ್ ಸಿದ್ದನಂಜಯ್ಯ, ಈಚನೂರು ಕೆರೆಯ ಹಾಲಿ 72 ಎಂಸಿಎಫ್‌ಟಿ ನೀರಿನ ಸಾಮರ್ಥ್ಯವನ್ನು ಕೆರೆಯಲ್ಲಿ 12 ಅಡಿ ಹೂಳು ತೆಗೆಯುವ ಮೂಲಕ ಹೆಚ್ಚುವರಿ 68 ಎಂಸಿಎಫ್‌ಟಿಗೆ ಹೆಚ್ಚಿಸಿ, ನೀರು ಶೇಖರಣೆ ಹೆಚ್ಚಿಸುವ ಸಲುವಾಗಿ ಹೂಳೆತ್ತುವ ಕಾಮಗಾರಿ ಜಾರಿಯಲ್ಲಿದೆ. 232 ಎಕರೆ ವಿಸ್ತೀರ್ಣದ ಕೆರೆ ಪೈಕಿ 132 ಎಕರೆ ಪ್ರದೇಶದಲ್ಲಿ ಮಾತ್ರ ಕಾಮಗಾರಿ ನಡೆಸಲಾಗುತ್ತೆ. ಕೆರೆ ಅಂಗಳಕ್ಕೆ ನೀರು ಹರಿಯುವ ಏರಿ ಮತ್ತು ಏರಿಯ ಕೆಳಗಿನ 12 ಮೀಟರಿನಷ್ಟು ಪ್ರದೇಶದಲ್ಲಿ ನೀರು ಹರಿಯುವ ವೇಳೆ ಸವಕಳಿ ಉಂಟಾಗಿ ಮರಳು, ಮತ್ತು ಕಲ್ಲು ಮೇಲೆಳದಂತೆ ತಡೆಯಲು ಐಐಎಸ್‌ಸಿ ಮಾನದಂಡದ ಪ್ರಕಾರ, ಜಿಯೋ ಸಿಂಥೆಟಿಕ್ ಕ್ಲೇ ಮ್ಯಾಟ್ ಅಳವಡಿಸಲಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಕೆರೆ ಅಂಗಳದಲ್ಲಿ ಈ ರೀತಿ ಕಾಮಗಾರಿ ಕೈಗೊಳ್ಳಲ್ಲ ಎಂದು ರೈತರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದರು.

    ಕೆರೆ ಮಣ್ಣಿಗೆ ದುಡ್ಡು : ಕೆರೆ ಮಣ್ಣನ್ನು ಇಷ್ಟವಾದವರಿಗೆ ಮಾರಿಕೊಳ್ಳಲಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಶಾಸಕ ಬಿ.ಸಿ.ನಾಗೇಶ್, ಕೆರೆ ಮಣ್ಣನ್ನು ಯಾವುದೇ ನಿರ್ಬಂಧವಿಲ್ಲದೆ ರೈತರಿಗೆ ಕೊಡಬೇಕು, ಟ್ರ್ಯಾಕ್ಟರಿನಲ್ಲಿ ಸಾಗಿಸುವ ಮಣ್ಣು ಸಂಪೂರ್ಣ ಉಚಿತ, ಆದರೆ ಟಿಪ್ಪರ್‌ಗಳಲ್ಲಿ ಸಾಗಿಸುವ ಮಣ್ಣಿಗೆ ನಿಯಮಾನುಸಾರ 1.5 ಕಿ.ಮೀವರೆಗೂ ಉಚಿತ, ನಂತರದ ಪ್ರತಿ ಕಿ.ಮೀಗೆ 175 ರೂ. ರೈತರು ಭರಿಸಬೇಕು ಎಂದರು. ತಹಸೀಲ್ದಾರ್ ಆರ್.ಜಿ. ಚಂದ್ರಶೇಖರ್, ಡಿವೈಎಸ್‌ಪಿ ಎನ್.ಚಂದನ್ ಕುಮಾರ್, ನಗರಾಯುಕ್ತ ಉಮಾಕಾಂತ್, ಕೆ.ಯು.ಡಬ್ಲು,ಎಸ್, ಪ್ರಾಜೆಕ್ಟ್ ಇಂಜಿನಿಯರ್ ಸಿದ್ದನಂಜಯ್ಯ ಇತರರು ಇದ್ದರು.

    ಕೆರೆ ಏರಿ, ಮತ್ತು ನೀರು ಹರಿಯುವ ಜಾಗದ ರಕ್ಷಣೆಗಾಗಿ ನಿರ್ದಿಷ್ಟ ಪ್ರದೇಶದಲ್ಲಿ ಐಐಎಸ್‌ಸಿ ಮಾನದಂಡದ ಪ್ರಕಾರ ಜಿಯೋ ಸಿಂಥೆಟಿಕ್ ಕ್ಲೇ ಮ್ಯಾಟ್ ಹಾಕಲಾಗುತ್ತೆ. ರೈತರು ಅನಗತ್ಯ ಗೊಂದಲಕ್ಕೆ ಒಳಗಾಗುವುದು ಬೇಡ.
    ಸಿದ್ದನಂಜಯ್ಯ, ಕೆಯುಡಬ್ಲುಎಸ್‌ಎಸ್ ಪ್ರಾಜೆಕ್ಟ್ ಇಂಜಿನಿಯರ್

    ಪರಿಸ್ಥಿತಿ ವಿಷಮಗೊಳ್ಳಲು ಸೈಟ್ ಇಂಜಿನಿಯರ್ ಅಹಂಕಾರದ ಮಾತೇ ಕಾರಣ. ಶಾಸಕರು ಸೇರಿ ತಾಲೂಕು ಆಡಳಿತದ ಎದುರೇ ಈ ರೀತಿ ವರ್ತಿಸುವ ಇಂಜಿನಿಯರ್, ವರ್ತನೆ ಬದಲಾಯಿಸಿಕೊಳ್ಳದಿದ್ದರೆ ಕಾಮಗಾರಿ ಸುಖಾಂತ್ಯ ಕಾಣಲ್ಲ. ರಬ್ಬರ್ ಮ್ಯಾಟ್ ಅಳವಡಿಸಲ್ಲ ಎಂದು ಗ್ರಾಮ ಪಂಚಾಯಿತಿಗೆ ಬರೆದು ಕೊಡಲಿ.
    ಈಚನೂರು, ರೈತರು

    ಪರಿಸ್ಥಿತಿ ತಿಳಿಗೊಳ್ಳುತ್ತಿರುವ ಹೊತ್ತಿನಲ್ಲಿ ಸೈಟ್ ಇಂಜಿನಿಯರ್ ಇಲ್ಲದ ಗೊಂದಲ ಸೃಷ್ಟಿಸಬಾರದಿತ್ತು.
    ಎನ್.ಚಂದನ್ ಕುಮಾರ್, ಡಿವೈಎಸ್‌ಪಿ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts