More

    ಅಂಗನವಾಡಿಗೆ ಮೊಟ್ಟೆ ಹೊರೆ: ಹಣ ಪಾವತಿಸಬೇಕಾದ ದುಸ್ಥಿತಿಯಲ್ಲಿ ಕಾರ್ಯಕರ್ತರು

    ಗೋಪಾಲಕೃಷ್ಣ ಪಾದೂರು ಉಡುಪಿ
    ಅಂಗನವಾಡಿ ಕೇಂದ್ರಗಳಲ್ಲಿ 3ರಿಂದ 6 ವರ್ಷದ ನೋಂದಾಯಿತ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ. ಒಂದು ಮೊಟ್ಟೆಗೆ ಇಲಾಖೆ 5 ರೂ. ನೀಡುತ್ತದೆ. ಆದರೆ ಜಿಲ್ಲೆಯಲ್ಲಿ ಮೊಟ್ಟೆಯ ಹೋಲ್‌ಸೇಲ್ ದರ ಏರಿಕೆಯಾಗಿ ಎರಡು ವರ್ಷಗಳಿಂದ ಹೆಚ್ಚುವರಿ ದರವನ್ನು ಅಂಗನವಾಡಿ ಕಾರ್ಯಕರ್ತರೇ ಭರಿಸುವ ಸ್ಥಿತಿ ಇದೆ.
    ಹೆಚ್ಚಿನ ದರದಲ್ಲಿ ಮೊಟ್ಟೆ ಖರೀದಿಸಿದರೆ ಉಳಿದ ಮೊತ್ತವನ್ನು ಸ್ಥಳೀಯ ಪಂಚಾಯಿತಿಯೇ ನೀಡಬೇಕೆಂಬುದು ಸರ್ಕಾರದ ಆದೇಶ. ಆದರೆ ಪಂಚಾಯಿತಿಗಳು ಅನುದಾನ ಇಲ್ಲವೆಂಬ ಕಾರಣ ನೀಡಿ ಕೈ ಚೆಲ್ಲಿದೆ. ಅಂಗನವಾಡಿ ಕಾರ್ಯಕರ್ತರು ತಮ್ಮ ಕೈಯಿಂದಲೇ ತಿಂಗಳಿಗೆ 700 – 800 ರೂ.ಹಣ ನೀಡಿ ಮೊಟ್ಟೆ ಖರೀದಿ ಮಾಡಬೇಕಾಗಿದೆ.

    7 ಲಕ್ಷಕ್ಕೂ ಅಧಿಕ ಮೊಟ್ಟೆ ಅಗತ್ಯ: ಜಿಲ್ಲೆಯಲ್ಲಿ 1,192 ಅಂಗನವಾಡಿ ಕೇಂದ್ರಗಳಿವೆ. ತಿಂಗಳಿಗೆ 7 ಲಕ್ಷಕ್ಕೂ ಅಧಿಕ ಮೊಟ್ಟೆ ಬೇಕಾಗುತ್ತದೆ. ಟೆಂಡರ್ ನೀಡಿದರೆ ಕಳಪೆ ಮೊಟ್ಟೆ ಸಹಿತ ದಾಸ್ತಾನು ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಆಯಾ ಅಂಗನವಾಡಿ ಕಾರ್ಯಕರ್ತರೇ ಸ್ಥಳೀಯವಾಗಿ ಮೊಟ್ಟೆ ಖರೀದಿಸಿ ನೀಡುತ್ತಿದ್ದಾರೆ. ಈ ಮೊತ್ತವನ್ನು ಇಲಾಖೆ ಬಾಲವಿಕಾಸ ಸಮಿತಿ ಮೂಲಕ ಪಾವತಿಸುತ್ತದೆ. ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೌಷ್ಟಿಕ ಆಹಾರಕ್ಕಾಗಿ ಒಟ್ಟು 31.25 ಕೋಟಿ ರೂ.ವೆಚ್ಚ ಭರಿಸಲಾಗಿದೆ. 3 ವರ್ಷದವರೆಗಿನ 30,108 ಮಕ್ಕಳು, 3ರಿಂದ 6 ವರ್ಷದ 29,641 ಮಕ್ಕಳಿದ್ದಾರೆ. 87 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 6072 ಗರ್ಭಿಣಿಯರು, 5413 ಬಾಣಂತಿಯರಿದ್ದಾರೆ.

    ಪೌಷ್ಟಿಕ ಆಹಾರ ಸೌಲಭ್ಯ: ಅಂಗನವಾಡಿ ಕೇಂದ್ರಗಳ ಮೂಲಕ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ತಿಂಗಳಲ್ಲಿ 25 ದಿನದ ಪೌಷ್ಟಿಕ ಆಹಾರ ಪದಾರ್ಥಗಳನ್ನು 15 ದಿನಗಳಿಗೊಮ್ಮೆ ಮನೆಗೆ ನೀಡಲಾಗುತ್ತಿದೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 3 ದಿನ ತಲಾ ಒಂದು ಮೊಟ್ಟೆ ವಿತರಿಸಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾಗಿರುವ ಗರ್ಭಿಣಿ ಹಾಗೂ ಬಾಣಂತಿಯರಿಗೆ ತಿಂಗಳಲ್ಲಿ 25 ದಿನಕ್ಕೆ ಬೇಕಾದ ಹಾಲು, ಮೊಟ್ಟೆ ಒಳಗೊಂಡ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುತ್ತಿದೆ.

    ದ.ಕ.ಜಿಲ್ಲೆಯಲ್ಲೂ ಇದೇ ಸ್ಥಿತಿ: ಮಂಗಳೂರು: ಸದ್ಯ ಮೊಟ್ಟೆಗೆ ಹೋಲ್‌ಸೇಲ್‌ನಲ್ಲಿ 5.70 ರೂ., ರೀಟೇಲ್‌ನಲ್ಲಿ 6.50 ರೂ.ಇದೆ. ಆದರೆ ಇಲಾಖೆ ಪಾವತಿಸುವುದು 5 ರೂ. ಮಾತ್ರ. ಬಹುತೇಕ ಪಂಚಾಯಿತಿಗಳು ಹೆಚ್ಚುವರಿ ಮೊತ್ತ ಪಾವತಿಸುತ್ತಿಲ್ಲ. ಇನ್ನೊಂದೆಡೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಂಗನವಾಡಿಗಳಿಗೆ ಗ್ರಾಪಂಗಳು ಹಣ ನೀಡಬೇಕೆಂಬ ಆದೇಶ ಇಲ್ಲ. ಹೀಗಾಗಿ ಕಾರ್ಯಕರ್ತೆಯರೇ ಹಣ ಹಾಕಿ ಮೊಟ್ಟೆ ಖರೀದಿ ಮಾಡಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್. ತಿಳಿಸಿದ್ದಾರೆ. ಸಾಗಾಟ ವೆಚ್ಚವೂ ಸೇರಿ ಮೊಟ್ಟೆಗೆ 7 ರೂ.ಪಾವತಿಸಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಒಂದು ಬಿಲ್ ಪಂಚಾಯಿತಿಗೆ, ಒಂದು ಬಿಲ್ ಇಲಾಖೆಗೆ ನೀಡಿ ಹಣ ಪಡೆಯುವ ಬದಲು, ಇಲಾಖೆಯೇ ಪೂರ್ಣ ಮೊತ್ತ ಪಾವತಿ ಮಾಡುವಂತಾಗಬೇಕು ಎನ್ನುವುದು ಅವರ ಆಗ್ರಹ.

    ದ.ಕ.ಜಿಲ್ಲೆಯಲ್ಲಿ 2,108 ಅಂಗನವಾಡಿಗಳಿವೆ. 47 ಅಪೌಷ್ಟಿಕ ಮಕ್ಕಳಿಗೆ ಪ್ರತಿ ನಿತ್ಯ, ಉಳಿದಂತೆ ಸಾಮಾನ್ಯ ಮಕ್ಕಳಿಗೆ ವಾರದಲ್ಲಿ ಎರಡು ದಿನ, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಖರೀದಿಗೆ ಸಂಬಂಧಿಸಿ ಹೆಚ್ಚುವರಿ ಮೊತ್ತ ಪಾವತಿಸುವಂತೆ, ಎಲ್ಲ ಪಂಚಾಯಿತಿಗಳಿಗೆ ಸಿಇಒ ಪತ್ರ ಮೂಲಕ ಸೂಚನೆ ನೀಡಿದ್ದಾರೆ. ನಗರ ಪ್ರದೇಶದ ಅಂಗನವಾಡಿ ಕುರಿತು ಆದೇಶ ಇಲ್ಲ.
    ಟಿ.ಪಾಪಾ ಭೋವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶ, ದ.ಕ

    ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆಗೆ ತಗಲುವ ಹೆಚ್ಚುವರಿ ಶುಲ್ಕವನ್ನು ಆಯಾ ಪಂಚಾಯಿತಿ ನಿಧಿಯಿಂದ ಭರಿಸಲು ಜಿಪಂ ಸಿಇಒ ಸೂಚನೆ ನೀಡಿದ್ದಾರೆ. ಈಗ ಮತ್ತೊಮ್ಮೆ ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಹಣೆ ಅಧಿಕಾರಿಗಳು ಪೂರಕ ನಿರ್ದೇಶನ ನೀಡಿದ್ದಾರೆ.
    -ಶೇಷಪ್ಪ
    ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts