More

    ಶೈಕ್ಷಣಿಕ ಚಟುವಟಿಕೆ ಚುರುಕುಗೊಳಿಸಲು ಶಾಲಾ ಸಂಚಲನ, ಸ್ಥಗಿತಗೊಂಡಿದ್ದ ಶೈಕ್ಷಣಿಕ ಕಾರ್ಯಕ್ರಮಕ್ಕೆ ವೇಗ

    ಉಡುಪಿ: ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಸ್ಥಗಿತವಾಗಿದ್ದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮತ್ತೆ ವೇಗ ನೀಡಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ‘ಶಾಲಾ ಸಂಚಲನ’ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

    ಜಿಲ್ಲೆಯಲ್ಲಿ ಫೆ.22ರಿಂದ ಪೂರ್ಣಾವಧಿ ತರಗತಿಗಳು ಆರಂಭಗೊಂಡು ವಿದ್ಯಾಗಮ-1, ಆನ್‌ಲೈನ್ ತರಗತಿಗಳು ಹಾಗೂ ವಿದ್ಯಾಗಮ-2 ಕಾರ್ಯಕ್ರಮ ಹಾಗೂ ಸಂವೇದ ಕಾರ್ಯಕ್ರಮದ ಮೂಲಕ ಚಂದನ ದೂರದರ್ಶನದ ಮೂಲಕ ವೀಡಿಯೋ ಪಾಠಗಳನ್ನು ಮತ್ತು ಆಕಾಶವಾಣಿ ಮೂಲಕ ಸಿದ್ಧ ಪಡಿಸಿದ ಪಾಠ ಪ್ರಸಾರ ಮಾಡಿದ್ದರೂ ಕಲಿಕೆಯಲ್ಲಿ ಪರಿಣಾಮ ಬೀರಿರಲಿಲ್ಲ. ಈ ನಿಟ್ಟಿನಲ್ಲಿ ಶಾಲಾ ಸಂಚಲನ ಕಾರ್ಯಕ್ರಮದ ಮೂಲಕ ಮಕ್ಕಳ ಕಲಿಕೆ, ಶಿಕ್ಷಕರ ಬೋಧನೆ, ಶಾಲೆ ಮೂಲ ಸೌಲಭ್ಯಗಳ ಬಗ್ಗೆ ಅವಲೋಕಿಸಿ ಅವರಿಗೆ ಶೈಕ್ಷಣಿಕ ಬೆಂಬಲ ನೀಡಿ, ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿರುವ ಶಿಕ್ಷಣ ಸಂಯೋಜಕರು, ಬಿಆರ್‌ಪಿಗಳು, ಸಿಆರ್‌ಪಿಗಳು, ಐಇಆರ್‌ಟಿಗಳನ್ನು ಒಳಗೊಂಡು ಬಿ.ಆರ್.ಸಿ.ಸಮನ್ವಯಾಧಿಕಾರಿ, ತಾಲೂಕು ದೈಹಿಕ ವಿಷಯ ಪರೀಕ್ಷಕರು ಮತ್ತು ಸಹಾಯಕ ನಿರ್ದೇಶಕರನ್ನು ಒಳಗೊಂಡ 10 ತಂಡಗಳನ್ನು ರಚನೆ ಮಾಡಲಾಗಿದೆ.

    ವಾರದಲ್ಲಿ ಒಂದು ದಿನದ ಕಾರ್ಯಕ್ರಮ
    ಶಾಲಾ ಸಂಚಲನ ಕಾರ್ಯಕ್ರಮ ಮಾ.31ರಿಂದ ಮೇ 31ರ ವರೆಗೆ ವಾರದಲ್ಲಿ ಒಂದು ದಿನ ಜರುಗಲಿದೆ. ಪ್ರತೀ ಬುಧವಾರ ಈ ಕಾರ್ಯಕ್ರಮದಡಿಯಲ್ಲಿ ಒಂದು ತಂಡ ಕನಿಷ್ಠ 2-3 ಶಾಲೆಗಳನ್ನು ಭೇಟಿ ನೀಡಲಿದೆ. ಸರ್ಕಾರಿ, ಅನುದಾನಿತ, ಮಾದರಿ, ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರು ಪಾಠಗಳನ್ನು ನೋಡಿ, ತಾವೂ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಶಿಕ್ಷಕರಿಂದ ಮಕ್ಕಳ ದತ್ತು ಪಡೆದು ಬೋಧನೆ
    ಆರು ಮತ್ತು ಏಳನೇ ತರಗತಿ ಮಕ್ಕಳನ್ನು ಕಲಿಕೆಯ ಆಧಾರದ ಮೇಲೆ ಎಬಿಸಿ ಎಂಬ ಮೂರು ತಂಡಗಳನ್ನು ರಚಿಸಲಾಗುವುದು. ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು, ಹೇಳಿದ್ದನ್ನು ಮೂರು ಭಾಷೆಗಳಲ್ಲಿ ಬರೆಯಲು ವಿಶೇಷ ಬೋಧನೆ ಹಮ್ಮಿಕೊಳ್ಳಲಾಗುತ್ತದೆ. ಈ ಯೋಜನೆಯಲ್ಲಿ ಆರು ಮತ್ತು 7ನೇ ತರಗತಿ ಬಿ ಮತ್ತು ಸಿ ಗುಂಪಿನ ಮಕ್ಕಳನ್ನು ಎಲ್ಲ ಶಿಕ್ಷಕರು ದತ್ತು ಪಡೆಯಲಿದ್ದಾರೆ. ಒಟ್ಟು ಮಕ್ಕಳ ವೈಯಕ್ತಿಕ ಕಡತ ನಿರ್ವಹಣೆ, ಈ ತರಗತಿಯ ಮಕ್ಕಳಿಗೆ ಶಾಲಾ ಅವಧಿಯ ಮೊದಲು ಒಂದು ಗಂಟೆ ವಿಶೇಷ ತರಗತಿ ಹಾಗೂ ತರಗತಿಯ ಅನಂತರ ಒಂದು ಗಂಟೆ ಮಕ್ಕಳನ್ನು ಗುಂಪಿನಲ್ಲಿ ವಿಂಗಡಿಸಿ ಸ್ವ ಅಧ್ಯಯನ ನಡೆಸಲಾಗುತ್ತದೆ.

    ಶಾಲಾ ಸಂಚಲನ ಕಾರ್ಯಕ್ರಮ ಯೋಜನೆ ಮಕ್ಕಳಿಗೆ ಅತ್ಯುತ್ತಮ ಶೈಕ್ಷಣಿಕ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಶಿಕ್ಷಕರೊಂದಿಗೆ ಬೆರೆತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಈಗಾಗಲೆ ಕಲಿಕೆಯ ಆಧಾರದ ಮೇಲೆ ಮಕ್ಕಳನ್ನು ವಿಂಗಡಿಸಿ ಶಿಕ್ಷಣ ನೀಡುತ್ತಿರುವುದು ಪ್ರೌಢಶಾಲೆ ಹಂತದಲ್ಲಿ ಯಶಸ್ಸು ಕಂಡಿದ್ದೇವೆ.
    ಎನ್.ಎಚ್.ನಾಗೂರ, ಉಪ ನಿರ್ದೇಶಕ, ಶಿಕ್ಷಣ ಇಲಾಖೆ. ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts