More

    ಖಾಸಗಿ ಲಾಬಿಗೆ ಮಣಿದಿಲ್ಲ, ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಲೆ ಶುರುವಾಗಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್

    ಬೆಂಗಳೂರು: ಜುಲೈ 1ರಿಂದ ಶಾಲೆ ಶುರುಮಾಡುವ ಪ್ರಸ್ತಾವಿತ ದಿನಾಂಕವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದ್ದರಿಂದಾಗಿ ರಾಜ್ಯಾದ್ಯಂತ ಈ ಬಗ್ಗೆ ತೀವ್ರ ಚರ್ಚೆ ಶುರುವಾಗಿತ್ತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆ ಮತ್ತು ಶಿಕ್ಷಣ ಇಲಾಖೆ ಪ್ರಕಟಿಸಿದ ಸುತ್ತೋಲೆ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದಿದೆ ಎಂಬ ಭಾವನೆ ಪಾಲಕರಲ್ಲಿ ಮೂಡಿತ್ತು. ಈ ಭಾವನೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಸಚಿವ ಸುರೇಶ್ ಕುಮಾರ್ ಅವರು ಫೇಸ್​ಬುಕ್​ ಪೋಸ್ಟ್ ಅಪ್ಡೇಟ್ ಮಾಡಿದ್ದಾರೆ. ಅದರ ಯಥಾವತ್ ಮಾಹಿತಿ ಹೀಗಿದೆ-

    ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಆರೋಗ್ಯಕರ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ “ಖಾಸಗಿ ಲಾಬಿ ಪ್ರಭಾವಕ್ಕೆ ಮಣಿದಿರುವ ಸರ್ಕಾರ” ಎಂಬಂತೆ ಬಿಂಬಿತವಾಗಿರುವುದು ಅತ್ಯಂತ ದುರ್ದೈವದ ಸಂಗತಿ.
    ಎಲ್ಲಾ ಪೋಷಕರ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಜೂನ್ 10, 11 ಮತ್ತು 12 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ (ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳೂ ಸೇರಿದಂತೆ) ಪೋಷಕರ ಸಭೆ ಕರೆದು ಕೆಳ ಕಂಡ 3 ಅಂಶಗಳ ಕುರಿತು ಅಭಿಪ್ರಾಯ ಸಂಗ್ರಹಿಸಬೇಕೆಂದು 1.6.2020 ರ ಸುತ್ತೋಲೆಯ ಮೂಲಕ ಸೂಚಿಸಿದೆ.
    ಅ) ಶಾಲೆಗಳನ್ನು ಯಾವಾಗ (ಎಂದಿನಿಂದ) ಪ್ರಾರಂಭ ಮಾಡಬೇಕು?
    * ನರ್ಸರಿ ಮತ್ತು ಪ್ರಾಥಮಿಕ‌ ತರಗತಿಗಳು.
    * ಉನ್ನತ ಪ್ರಾಥಮಿಕ ತರಗತಿಗಳು.
    * ಪ್ರೌಢಶಾಲಾ ತರಗತಿಗಳು.
    ಆ) ಕೊರೋನಾ ನಂತರದ ದಿನಗಳಲ್ಲಿ ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತರಗತಿಗಳನ್ನು ನಡೆಸುವ ಬಗ್ಗೆ.
    ಇ) ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಸುರಕ್ಷತಾ ಕ್ರಮಗಳು.
    #ಶಾಲೆಗಳನ್ನು_ತರಾತುರಿಯಲ್ಲಿ_ಪ್ರಾರಂಭ_ಮಾಡುವ_ಯಾವುದೇ_ನಿರ್ಧಾರವನ್ನು_ರಾಜ್ಯ_ಸರ್ಕಾರ_ಕೈಗೊಳ್ಳುವುದಿಲ್ಲ. ಮಕ್ಕಳ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡುತ್ತದೆ.
    ಮಕ್ಕಳಲ್ಲಿ ಕಲಿಕೆಯನ್ನು ನಿರಂತರವಾಗಿ ಇಡಲು ದೂರದರ್ಶನದ ಪ್ರತ್ಯೇಕ ಶಿಕ್ಷಣ ಚಾನೆಲ್ ಪ್ರಾರಂಭಿಸುವುದೂ ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಶೋಧಿಸುತ್ತಿದೆ. ಈ ಅಂಶಗಳನ್ನು ಅರ್ಥೈಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲ‌ ಮಾಧ್ಯಮಗಳಲ್ಲಿ ಬರುತ್ತಿರುವ ಟೀಕೆಗಳನ್ನು ಗಮನಿಸಿದ್ದೇನೆ.
    ಎಳೆಯ ಮಕ್ಕಳ ಕುರಿತ ಪೋಷಕರ ಕಾಳಜಿಯನ್ನು ನಾನು ಸಂಪೂರ್ಣವಾಗಿ ಅರಿತಿದ್ದೇನೆ ಮತ್ತು ಆ ಕಾಳಜಿಗೆ ಅಗತ್ಯ ಮನ್ನಣೆ ನೀಡುತ್ತೇನೆ. ಆ ಮಕ್ಕಳಿಗೆ ಮತ್ತು ಪೋಷಕರಿಗೆ ಕಿಂಚಿತ್ ಆಪತ್ತು ತರುವ ಯಾವುದೇ ಕಾರ್ಯ ನಮ್ಮಿಂದ ಆಗುವುದಿಲ್ಲ.
    ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹಿಸುವ ಅತಿ ದೊಡ್ಡ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.‌ ಈ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಸರಕಾರದ ಪ್ರತಿ ಹೆಜ್ಜೆ ಸಂವೇದನಾಶೀಲತೆಯಿಂದ ಕೂಡಿರುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ.
    ಎಸ್​. ಸುರೇಶ್​ ಕುಮಾರ್​, ಶಿಕ್ಷಣ ಸಚಿವರು

    ಜುಲೈ 1ರಿಂದಲೇ ಹಂತ ಹಂತವಾಗಿ ಶಾಲೆ ಶುರು? : ಸಂದೇಹ ಮೂಡಿಸಿದೆ ಶಿಕ್ಷಣ ಇಲಾಖೆ ಸುತ್ತೋಲೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts