More

    ಸಂಪಾದಕೀಯ| ಜೀವ ಅಮೂಲ್ಯ; ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತ

    ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು. ಅಂದಾಗ ಪ್ರಯಾಣ ಸುಗಮವಾಗುವುದಲ್ಲದೆ, ಇಂಧನ ಉಳಿತಾಯವೂ ಆಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ ನಿರ್ವಣಕ್ಕೆ ಹೆಚ್ಚು ಒತ್ತು ನೀಡುತ್ತವೆ. ಆದರೆ, ಈ ನಡುವೆ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ.

    ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ತಗ್ಗಿಸುವ ಮತ್ತು ಸುಗಮ ಸಂಚಾರದ ಅನುಭವ ನೀಡಲೋಸುಗ ನಿರ್ವಿುಸಲಾದ ದಶಪಥ ಹೆದ್ದಾರಿಯಲ್ಲಿ, ಅದು ಸಾರ್ವಜನಿಕ ಬಳಕೆಗೆ ಮುಕ್ತಗೊಂಡ ನಂತರದಲ್ಲಿ ನಿತ್ಯವೂ ಎಂಬಂತೆ ಅಪಘಾತಗಳು ನಡೆಯುತ್ತಿರುವುದು ಮತ್ತು ಸಾವುನೋವುಗಳು ಸಂಭವಿಸುತ್ತಿರುವುದು ಇದಕ್ಕೊಂದು ಉದಾಹರಣೆಯಾಗಿದ್ದು, ಇದು ಖೇದದ ಸಂಗತಿ.

    ಈ ಅಪಘಾತಗಳಲ್ಲಿ ಈವರೆಗೆ ನೂರೈವತ್ತಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿದ್ದು, ದುರಂತದ ಭೀಕರತೆಯನ್ನು ಸೂಚಿಸುವಂತಿದೆ. ಇದಕ್ಕೆ ಕಾರಣಗಳನ್ನು ಕಂಡುಹಿಡಿದು ಪರಿಹಾರೋಪಾಯಗಳನ್ನು ಹುಡುಕುವ ಕೆಲಸ ಜರೂರಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಸಾರಿಗೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕಕುಮಾರ್ ಅವರು ಈ ಹೆದ್ದಾರಿಯ ಅಪಘಾತ ವಲಯಗಳಲ್ಲಿ ಪರಿಶೀಲನೆ ನಡೆಸಿ, ಸುರಕ್ಷತೆಗೆ ಸಂಬಂಧಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹೆದ್ದಾರಿ ಕರ್ತವ್ಯದಲ್ಲಿರುವ ಪೊಲೀಸರು ಸಮವಸ್ತ್ರ್ರಲ್ಲಿರಬೇಕು; ಅಂದಾಗ ಚಾಲಕರು ಸಂಚಾರ ನಿಯಮ ಪಾಲನೆಯತ್ತ ಜಾಗರೂಕರಾಗಿರುತ್ತಾರೆ ಎಂದು ಅವರು ಹೇಳಿರುವುದು ಸೂಕ್ತವಾಗಿದೆ.

    ಒಂದು ನಿಯಂತ್ರಣ ವ್ಯವಸ್ಥೆ ಇಲ್ಲದಿದ್ದರೆ ನಿಯಮಪಾಲನೆಯತ್ತ ಜನರ ಗಮನ ಅಷ್ಟು ಹೋಗುವುದಿಲ್ಲ ಎಂಬುದರಲ್ಲಿ ಅಚ್ಚರಿಯೇನಿಲ್ಲ. ಇದರ ಜತೆಗೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ಇನ್ನು ಮೇಲೆ ಸ್ಪೀಡ್ ರೆಡಾರ್ ವಾಹನ ಕಣ್ಗಾವಲಿಡಲಿದೆ. ನಿಗದಿತ ಮಿತಿ ಮೀರುವ ವಾಹನಗಳನ್ನು ಗುರುತಿಸಿ ದಂಡ ಹಾಕಲಾಗುತ್ತದೆ. ಈ ರಸ್ತೆ ನಿರ್ವಣದಲ್ಲಿ ಕೆಲವು ಲೋಪಗಳಾಗಿವೆ ಎಂದು ಸಹ ಕೆಲವರು ಆರೋಪಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಪರಿಶೀಲನೆ ನಡೆಸಿ, ಹಾಗೇನಾದರೂ ಕಂಡುಬಂದಲ್ಲಿ ಕೂಡಲೇ ಸರಿಪಡಿಸುವ ಕಾರ್ಯಮಾಡಬೇಕಿದೆ.

    ದೇಶದ ಹಲವು ನಗರಗಳಲ್ಲಿ ಸಹ ಹೆದ್ದಾರಿಗಳ ನಿರ್ಮಾಣ ವೇಗ ಪಡೆದಿದೆ. ಇದರಿಂದ ಪ್ರಯಾಣದ ದೂರ ಮತ್ತು ಅವಧಿ ಕಡಿಮೆಯಾಗಿ ಅಂತಾರಾಜ್ಯ ಸಂಪರ್ಕ ತ್ವರಿತವಾಗಿ ಆಗುವಂತಾಗಿದೆ. ಆದರೆ ಇಂಥ ಅನೇಕ ರಸ್ತೆಗಳಲ್ಲಿ ಅಪಘಾತಗಳು ನಡೆಯುತ್ತಿದ್ದು, ಅಪಾರ ಪ್ರಾಣಹಾನಿಯಾಗುತ್ತಿದೆ. ಮಂಗಳವಾರ ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಟ್ರಕ್ ಹೋಟೆಲ್​ಗೆ ನುಗ್ಗಿ 15 ಜನರು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಜೀವಹಾನಿ ಒಂದೆಡೆಯಾದರೆ, ಗಂಭೀರ ಗಾಯಗೊಂಡವರಲ್ಲಿ ಅನೇಕರು ಜೀವನಪರ್ಯಂತ ಈ ನೋವು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ.

    ಅಪಘಾತ ಸಂತ್ರಸ್ತರ ಕುಟುಂಬಕ್ಕೆ ಮಾತ್ರವಲ್ಲದೆ, ಒಟ್ಟಾರೆಯಾಗಿ ದೇಶಕ್ಕೂ ಆರ್ಥಿಕಹಾನಿಯಾಗುತ್ತದೆ. ಜಾಗತಿಕವಾಗಿ ಹೆಚ್ಚು ಅಪಘಾತಗಳು ನಡೆಯುವ ಮತ್ತು ಹೆಚ್ಚು ಸಾವುನೋವಾಗುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದು ವಿಷಾದದ ವಿಚಾರ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಂಥ ವಿಷಯದಲ್ಲಿ ಸರ್ಕಾರಗಳು ಕಟ್ಟುನಿಟ್ಟಾಗಿರಬೇಕು; ಅದೇ ಸಂದರ್ಭದಲ್ಲಿ ಸಾರ್ವಜನಿಕರು ಸಹ ಸಂಚಾರ ನಿಯಮಪಾಲನೆ ಮಾಡುತ್ತ, ಅತಿವೇಗದ ಗೊಡವೆಗೆ ಹೋಗದೆ ವಾಹನ ಚಲಾಯಿಸಬೇಕು. ಅಂದಾಗ, ಕೆಲಮಟ್ಟಿಗಾದರೂ ಅಪಘಾತಗಳನ್ನು ತಡೆಯಲು ಸಾಧ್ಯವಿದೆ.

    ವಿಧಾನಮಂಡಲದ ಅಧಿವೇಶನವು ಜುಲೈ 21ರವರೆಗೆ ಮುಂದುವರಿಕೆ: ಸಭಾಧ್ಯಕ್ಷ ಯು.ಟಿ.ಖಾದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts