More

    ಸಂಪಾದಕೀಯ |ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗಲಿ

    ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಅಲ್ಲಿ ವ್ಯಾಸಂಗ ಮುಗಿಸಿದವರಿಗೆ ಉತ್ತಮ ಉದ್ಯೋಗ ದೊರೆಯುತ್ತದೆಯೇ ಎಂಬ ಅನುಮಾನದ ಬೆನ್ನೇರಿ ಸರ್ಕಾರಿ ಶಾಲೆಗಳಿಂದ ವಿಮುಖರಾಗುತ್ತಿರುವವರ ಸಂಖ್ಯೆಯೇ ಅಧಿಕ. ಕರ್ನಾಟಕದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಈಗಾಗಲೇ ಬಾಗಿಲು ಹಾಕಿವೆ. ಆದರೆ ಒಂದಿಷ್ಟು ಉತ್ತೇಜನ ನೀಡಿ, ಹೊಸ ಕ್ರಮಗಳನ್ನು ಪ್ರೋತ್ಸಾಹಿಸಿದರೆ ಶೈಕ್ಷಣಿಕ ರಂಗದಲ್ಲೇ ಹೊಸ ಸಂಚಲನ ಮೂಡಿಸಬಹುದು ಎಂಬುದಕ್ಕೆ ತಮಿಳುನಾಡಿನ ವಿದ್ಯಮಾನವೊಂದು ಸಾಕ್ಷಿಯಾಗಿದೆ. ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (ನೀಟ್) ಪಾಸಾದ ತಮಿಳುನಾಡು ಸರ್ಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜ್ ಪ್ರವೇಶದಲ್ಲಿ ಶೇಕಡ 7.5 ಮೀಸಲು ಕಲ್ಪಿಸುವ ಮಸೂದೆಗೆ ಅಲ್ಲಿನ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಇದು ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗಲಿದೆ.

    ಸರ್ಕಾರಿ ಕಾಲೇಜ್​ಗಳಲ್ಲಿ ಕಲಿತು ನೀಟ್ ಪಾಸಾದ 300 ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜ್ ಸೇರುವ ಹಾದಿ ಹೊಸ ಕಾನೂನಿನಿಂದ ಸುಗಮವಾಗಲಿದೆ. ಇವರೆಲ್ಲ ಬಹುತೇಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಶೋಷಿತ ವಿಭಾಗಗಳಿಗೆ ಸೇರಿದವರಾಗಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜ್​ಗಳಲ್ಲಿ ಅವರಿಗೆ ಪ್ರವೇಶ ಸಿಗಲಿದೆ. ಮಹತ್ವದ ಸಂಗತಿ ಎಂದರೆ ಸರ್ಕಾರಿ ಶಾಲೆ ಅಥವಾ ಸಂಸ್ಥೆಗಳಲ್ಲಿ ಓದಿದ ಸಾಮಾನ್ಯ ಜನರ ಪಾಲಿಗೆ ಇಂಥ ಕ್ರಮ ಭರವಸೆಯಾಗಿ ಕಾಣುತ್ತಿದೆ. ವೈದ್ಯಕೀಯ ಪ್ರವೇಶಕ್ಕೆ ನಿಗದಿತ ಮೀಸಲಾತಿ ಪ್ರಾಪ್ತವಾಗುವುದು ಸಾಮಾನ್ಯ ಸಂಗತಿಯೇನಲ್ಲ. ಸರ್ಕಾರಿ ಶಾಲೆಗಳ ವಿಲೀನ, ಮುಚ್ಚುವಿಕೆ ಬಗ್ಗೆಯೇ ಚರ್ಚೆ ನಡೆಸುವುದಕ್ಕಿಂತ ಕರ್ನಾಟಕ ಸೇರಿ ಉಳಿದ ರಾಜ್ಯಗಳು ಕೂಡ ಇಂಥ ಉತ್ತೇಜನಕಾರಿ ಕ್ರಮಗಳ ಅನುಷ್ಠಾನದ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಬೇಕು. ಆ ಮೂಲಕ ಸರ್ಕಾರಿ ಶಾಲೆಗಳ ಬಗೆಗಿನ ಮನೋಭಾವ ಬದಲಾಗಬೇಕು.

    ಕರ್ನಾಟಕದಲ್ಲೂ ಅದೆಷ್ಟೋ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ತೋರಿದ್ದು, ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆದಿವೆ. ಆದರೆ, ವ್ಯವಸ್ಥೆಯ ಧೋರಣೆ ಬಡವರಿಗೊಂದು, ಶ್ರೀಮಂತರ ಮಕ್ಕಳಿಗೊಂದು ಶಿಕ್ಷಣ ಎಂಬಂತೆ ಆಗಿದೆ. ಶಾಲೆ ಇರಬೇಕಾದ ರೀತಿಯಲ್ಲಿದ್ದರೆ ಅಲ್ಲಿ ಮಕ್ಕಳ ಕೊರತೆಯಾಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ಇದಕ್ಕೆ ನಿದರ್ಶನ. ಕೆಲ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪೈಪೋಟಿ ಇದೆ ಎಂಬುದು ವಾಸ್ತವ. ಮತ್ತೊಂದಡೆ, ರಾಜ್ಯದಲ್ಲಿ ಶೇಕಡ 40ಕ್ಕೂ ಹೆಚ್ಚು ಶಾಲೆಗಳಲ್ಲಿ ಶೌಚಗೃಹ ವ್ಯವಸ್ಥೆಯಿಲ್ಲ. ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಕೊಠಡಿಯ ಕೊರತೆಯಿದೆ ಎಂಬುದು ಅಪ್ರಿಯ ಸತ್ಯ. ಮೂಲಸೌಕರ್ಯದ ವಿಸ್ತರಣೆ, ಗುಣಮಟ್ಟದ ಶಿಕ್ಷಣದ ಜತೆಗೆ ಇಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಒಂದಿಷ್ಟು ಪ್ರಮಾಣದ ಮೀಸಲಾತಿಯೋ ಅಥವಾ ಇತರ ಪ್ರೋತ್ಸಾಹದಾಯಕ ನೀತಿಗಳನ್ನೋ ಕಲ್ಪಿಸಿದರೆ ಶೈಕ್ಷಣಿಕ ರಂಗದಲ್ಲಿ ಹೊಸ ಸುಧಾರಣೆ ತರಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts