More

    ಸಂಪಾದಕೀಯ | ಸ್ಥಳೀಯತೆಗೆ ಒತ್ತು – ದೀಪಾವಳಿ ಆರ್ಥಿಕತೆಗೂ ಉತ್ತೇಜನ ನೀಡಲಿ

    ಸಂಭ್ರಮದಿಂದ ಅಷ್ಟೇ ವಿಶಿಷ್ಟವಾಗಿ ಆಚರಿಸಲ್ಪಡುವ ಮಹಾಪರ್ವ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು. ಕರೊನಾದ ಹಾವಳಿ ಸಂಪೂರ್ಣ ತಗ್ಗಿಲ್ಲವಾದರೂ, ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿರುವುದರಿಂದ ಸರ್ಕಾರದ ನಿಯಮ, ಮಾರ್ಗಸೂಚಿ ಅನ್ವಯ ಹಬ್ಬ ಆಚರಿಸಲು ಯಾವುದೇ ಅಡ್ಡಿ ಇಲ್ಲ. ಕೆಡುಕಿನ ವಿರುದ್ಧ ಜಯದ ಪ್ರತೀಕವಾಗಿರುವ, ಅಂಧಕಾರವನ್ನು ಕಳೆದು ಪ್ರಕಾಶವನ್ನು ಬೆಳಗಿಸುವ ಈ ಪರ್ವ ಆರ್ಥಿಕತೆಗೂ ಉತ್ತೇಜನ ನೀಡುವಂತಾಗಲು ಸ್ಥಳೀಯತೆಗೆ ಒತ್ತು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ಸಕಾಲಿಕವಾಗಿಯೇ ಇದೆ. ಈ ಹಬ್ಬದ ನಿಮಿತ್ತ ದೇಶಾದ್ಯಂತ ಖರೀದಿಯ ಭರಾಟೆ ಹೆಚ್ಚುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹೊತ್ತಲ್ಲಿ ಸ್ಥಳೀಯ ಉತ್ಪನ್ನಗಳ ಖರೀದಿ, ಬಳಕೆ ಹೆಚ್ಚಿದರೆ, ಅದರಿಂದ ‘ವೋಕಲ್ ಫಾರ್ ಲೋಕಲ್’ ಅಭಿಯಾನ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಇಲ್ಲಿಯ ಗೃಹೋದ್ಯಮ, ಸಣ್ಣ ಕೈಗಾರಿಕೆಗೂ ಹೊಸ ಬಲ ಬಂದಂತೆ ಆಗುತ್ತದೆ.

    ‘ಪ್ರತಿಯೊಬ್ಬರೂ ಸ್ಥಳೀಯ ಉತ್ಪನ್ನವನ್ನು ಹೆಮ್ಮೆಯಿಂದ ಖರೀದಿಸಬೇಕು. ಅದರ ಬಗ್ಗೆ ಹೆಚ್ಚೆಚ್ಚು ಪ್ರಚಾರ ಕೊಡಬೇಕು. ಉಳಿದವರೂ ಸ್ಥಳೀಯ ಉತ್ಪನ್ನ ಖರೀದಿಸುವಂತೆ ಪ್ರೇರೇಪಿಸಬೇಕು’ ಎಂಬ ಪ್ರಧಾನಿಯವರ ಕಳಕಳಿಯಲ್ಲಿ ಎಲ್ಲರ ಹಿತವೂ ಇದೆ. ದೀಪಾವಳಿಗಾಗಿ ಹಣತೆಯಿಂದ ಹಿಡಿದು ಅಲಂಕಾರಿಕ ವಸ್ತುಗಳ ಮತ್ತು ಬಟ್ಟೆಗಳ ಖರೀದಿ ನಡೆಯುತ್ತದೆ. ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳನ್ನೇ ಕೊಂಡರೆ, ಅದರ ತಯಾರಕರ ಬದುಕಿನಲ್ಲೂ ದೀಪಾವಳಿ ಸಂಭ್ರಮ ಆವರಿಸಿಕೊಳ್ಳುತ್ತದೆ. ಇದಕ್ಕಾಗಿ ದೊಡ್ಡ ಪ್ರಯತ್ನವೇನೂ ಹಾಕಬೇಕಿಲ್ಲ, ಜನರ ಒಂದು ದೃಢ ನಿರ್ಧಾರ ಆರ್ಥಿಕತೆಗೇ ಶಕ್ತಿ ತುಂಬಬಲ್ಲದು. ಆ ಮೂಲಕ ಆತ್ಮನಿರ್ಭರ ಭಾರತದ ಆಶಯ ವಿವಿಧ ರಂಗಗಳಿಗೆ ಆವರಿಸಿಕೊಂಡು, ಸ್ವಾವಲಂಬನೆಯ ಕನಸು ನನಸಾಗಿಸಲು ನೆರವಾಗುವುದು.

    ಕರೊನಾ ಸೋಂಕು ಪ್ರಸರಣ ಹೆಚ್ಚಳವಾಗಬಹುದು ಎಂಬ ಭೀತಿಯಿಂದ ಹಲವೆಡೆ ಪಟಾಕಿಗೆ ನಿಷೇಧ ಹೇರಲಾಗಿದೆ. ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿರುವುದರಿಂದ ಅಲ್ಲಂತೂ ಈ ನಿರ್ಣಯ ಅನಿವಾರ್ಯ ಎಂಬಂತಾಗಿದೆ. ಪರಿಸರಕ್ಕೆ ಹಾನಿ ಮಾಡದ ಹಸಿರು ಪಟಾಕಿಗೆ ಕರ್ನಾಟಕದಲ್ಲಿ ಅವಕಾಶ ನೀಡಲಾಗಿದೆ. ಪಟಾಕಿ ತಯಾರಿಕೆ ಮತ್ತು ಮಾರಾಟದೊಂದಿಗೆ ಲಕ್ಷಾಂತರ ಜನರ ಜೀವನ ಬೆಸೆದುಕೊಂಡಿದೆ ಎಂಬುದೇನೋ ಸರಿಯೇ. ಆದರೆ, ಈ ವರ್ಷದ ಪರಿಸ್ಥಿತಿ ಸಾಮಾನ್ಯವಾಗಿಲ್ಲ. ಕರೊನಾಗೆ ಹೆದರಿ ಚಟುವಟಿಕೆಗಳನ್ನು ಪೂರ್ತಿ ಸ್ತಬ್ಧಗೊಳಿಸುವಂತಿಲ್ಲ; ಹಾಗಂತ ಮೈಮರೆತರೆ ಅಪಾಯವೂ ಉಂಟು. ಜನರ ಜೀವವೂ ಉಳಿಯಬೇಕು, ಜೀವನವೂ ಮುಂದೆ ಸಾಗಬೇಕು ಎಂಬ ಮಾರ್ಗ ಈಗಿನ ಸ್ಥಿತಿಗೆ ಅವಶ್ಯ, ಅನಿವಾರ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಇದನ್ನೇ ಪ್ರತಿಪಾದಿಸಿವೆ. ಹಾಗಂತ ಸಾಂಪ್ರದಾಯಿಕ ಆಚರಣೆ, ಸಂಭ್ರಮಕ್ಕೆ ಯಾವುದೇ ಚ್ಯುತಿ ಇಲ್ಲ. ಹಬ್ಬದ ಮೂಲ ತಿರುಳೇ ಸಂತಸ ಪಡುವುದು. ಹಾಗಾಗಿ, ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತ, ಎಲ್ಲರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts