More

    ಗೊಂದಲ ನಿವಾರಿಸಿ.. ಸಮನ್ವಯದಿಂದ ಕಾರ್ಯನಿರ್ವಹಿಸಬೇಕು…

    ಕರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಕಳೆದ ಕೆಲ ದಿನಗಳಿಂದ ದೇಶದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸೂಚಿಸಿದ್ದಾರೆ. ಪರೀಕ್ಷೆ ಹೆಚ್ಚಿಸುವ, ಸೋಂಕಿತರ ಸಂರ್ಪತರನ್ನು ಪತ್ತೆ ಹಚ್ಚುವ ಜತೆಗೆ, ರಾಜ್ಯಗಳು ವಿವೇಚನಾಧಿಕಾರ ಬಳಸಿ ರಾತ್ರಿ ಕರ್ಫ್ಯೂ ವಿಧಿಸುವ ಕುರಿತಂತೆ ಒತ್ತು ನೀಡಿದ್ದಾರೆ. ಕರ್ನಾಟಕದ 8 ಕಡೆಗಳಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ.

    ಏಪ್ರಿಲ್ 11ರಿಂದ 14ರವರೆಗೆ ಲಸಿಕಾ ಅಭಿಯಾನವನ್ನು ಆಂದೋಲನದ ಸ್ವರೂಪದಲ್ಲಿ ನಡೆಸುವಂತೆ, ವಿವಿಧ ವರ್ಗದಡಿ ಬರುವ ಅರ್ಹರಿಗೆ ಲಸಿಕೆ ಹಾಕಲು ತ್ವರಿತ ಕ್ರಮ ಕೈಗೊಳ್ಳುವಂತೆಯೂ ಪ್ರಧಾನಿ ಸೂಚಿಸಿದ್ದಾರೆ. ಈಗಿನ ಸಂಕಷ್ಟದ ಪರಿಸ್ಥಿತಿಯೊಂದಿಗೆ ಹೋರಾಡಲು ಈ ಎಲ್ಲ ಕ್ರಮಗಳು ಅವಶ್ಯ, ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಲಸಿಕೆ ಸಂಗ್ರಹ ಖಾಲಿಯಾಗುತ್ತಿದೆ, ಅಭಿಯಾನ ತೀವ್ರ ಪ್ರಮಾಣದಲ್ಲಿ ನಡೆಸುವಷ್ಟು ಲಸಿಕೆ ಲಭ್ಯವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ, ವಿವಿಧ ರಾಜ್ಯಗಳಿಗೆ ಸೂಕ್ತ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಆಗುತ್ತಿಲ್ಲ, ಇಲ್ಲೂ ರಾಜಕೀಯ ನಡೆಯುತ್ತಿದೆ, ಬಿಜೆಪಿ ಆಡಳಿತ ರಾಜ್ಯಗಳಿಗೆ ಹೆಚ್ಚು, ಉಳಿದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ ಎಂಬ ಆರೋಪ-ಪ್ರತ್ಯಾರೋಪಗಳು ಗರಿಗೆದರಿವೆ. ‘ಕೇಂದ್ರ ಸರ್ಕಾರ ಪಕ್ಷಪಾತ ಮಾಡದೆ ಎಲ್ಲ ರಾಜ್ಯಗಳಿಗೂ ಸಮಾನವಾಗಿ ನೆರವು ನೀಡಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

    ಹಲವು ರಾಜ್ಯಗಳ ಸ್ಥಿತಿ ಅವಲೋಕಿಸಿದರೆ ಅಲ್ಲಿ ಕೆಲವೇ ದಿನಗಳಿಗಾಗುವಷ್ಟು ಲಸಿಕೆ ಡೋಸ್ ಲಭ್ಯ ಇವೆ. ಕೆಲವೆಡೆ, ಲಸಿಕೆ ಲಭ್ಯ ಇದ್ದರೂ, ನೀಡಿಕೆಯ ಪ್ರಮಾಣ ಅತಿ ನಿಧಾನ ಮತ್ತು ವಿಳಂಬದಿಂದ ಕೂಡಿದ್ದು, ಡೋಸ್​ಗಳು ವ್ಯರ್ಥವಾಗುತ್ತಿವೆ. ಆರೋಗ್ಯ ಇಲಾಖೆ ಅಂಕಿಅಂಶಗಳ ಪ್ರಕಾರ ರಾಜ್ಯಗಳ ಬಳಿ ಸರಾಸರಿ 5.5 ದಿನಗಳಿಗಾಗುವಷ್ಟು ಡೋಸ್ ಲಭ್ಯ ಇವೆ. ಆಂಧ್ರಪ್ರದೇಶದಲ್ಲಿ 1.2 (1.4 ಲಕ್ಷ ಡೋಸ್) ಮತ್ತು ಬಿಹಾರದಲ್ಲಿ 1.6 ದಿನಗಳಿಗಾಗುವಷ್ಟು (2.6 ಲಕ್ಷ ಡೋಸ್) ಮಾತ್ರ ಲಸಿಕೆ ಉಪಲಬ್ಧ ಇದ್ದು, ಲಸಿಕೆ ಅಭಿಯಾನ ಆಂದೋಲನ ಸ್ವರೂಪದಲ್ಲಿ ನಡೆಸಲು ಹೇಗೆ ಸಾಧ್ಯ? ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನಕ್ಕೆ ಲಸಿಕೆ ಡೋಸ್​ಗಳ ಮತ್ತೊಂದು ಕಂತು ಶೀಘ್ರದಲ್ಲೇ ತಲುಪಲಿದೆ ಎಂದು ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದೆ. ಇದೊಂದು ಸಂಕಷ್ಟದ ಸ್ಥಿತಿಯಾಗಿದ್ದು, ಸಮನ್ವಯ, ಸಹಕಾರ ಭಾವದಿಂದ ಹೋರಾಟ ಕೈಗೊಳ್ಳಬೇಕಿದೆ. ಇಂಥ ವಿಷಯಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ನುಸುಳಬಾರದು ಎಂಬ ಎಚ್ಚರಿಕೆಯನ್ನು ಎಲ್ಲ ಪಕ್ಷಗಳೂ ವಹಿಸಬೇಕು. ಎಲ್ಲಿ ಲಸಿಕೆಯ ಕಡಿಮೆ ಸಂಗ್ರಹವಿದೆಯೋ, ಅಲ್ಲಿ ಕೂಡಲೇ ತಲುಪಿಸುವ ಕೆಲಸ ಆಗಬೇಕು. ಕರೊನಾ ಸೋಂಕಿನ ಪ್ರಸರಣ ತಡೆಯುವಲ್ಲಿ ಲಸಿಕಾ ಅಭಿಯಾನ ಪ್ರಮುಖ ಮಾರ್ಗ ಎಂಬುದನ್ನು ಮರೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts