More

    ಸಮಸ್ಯೆ ನಿವಾರಿಸಿ; ಶಾಸಕರು ಬದ್ಧತೆ ಪ್ರದರ್ಶಿಸಬೇಕು…

    ರಾಜ್ಯದ ರೈತರ ದೀರ್ಘಾವಧಿಯ ಬೇಡಿಕೆಗೆ ಕೊನೆಗೂ ಸರ್ಕಾರ ಸ್ಪಂದಿಸಿದೆ. ಬಗರ್​ಹುಕುಂ ಸಮಿತಿ ರಚನೆಯಾಗದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತಂತೆ ಆಯಾ ಕ್ಷೇತ್ರದ ಜನತೆ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದರಿಂದ, ಜನಪ್ರತಿನಿಧಿಗಳೂ ಸಮಸ್ಯೆ ಬೇಗ ಪರಿಹಾರವಾಗಲಿ ಎಂಬ ಆಶಯ ಹೊಂದಿದ್ದರು. ‘ಬಗರ್​ಹುಕುಂ ಸಮಿತಿ ರಚನೆಯಾಗದ ವಿಧಾನಸಭಾ ಕ್ಷೇತ್ರಗಳಿಗೆ ಇನ್ನು 15 ದಿನಗಳೊಳಗೆ ಸಮಿತಿ ರಚಿಸಲಾಗುತ್ತದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಸೋಮವಾರ ವಿಧಾನಸಭೆಯಲ್ಲಿ ಭರವಸೆ ನೀಡಿದ್ದು, ಮುಂದಿನ ಪ್ರಕ್ರಿಯೆಗಳ ಕುರಿತಾಗಿ ನಿರೀಕ್ಷೆ ಗರಿಗೆದರಿದೆ. ಸದನದಲ್ಲಿ ಹಲವು ಶಾಸಕರು ಪಕ್ಷಭೇದ ಮರೆತು ‘ನಮ್ಮ ಕ್ಷೇತ್ರಗಳಲ್ಲೂ ಬಗರ್​ಹುಕುಂ ಸಮಿತಿ ರಚನೆಯಾಗಿಲ್ಲ’ ಎಂದು ಹೇಳಿದ್ದು, ಸಮಸ್ಯೆಯ ತೀವ್ರತೆಗೆ ಸಾಕ್ಷಿ.

    ಈ ಸಮಸ್ಯೆ ಕುರಿತಂತೆ ಈ ಹಿಂದೆಯೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆದಿದ್ದೂ ಇದೆ, ಯಥಾಪ್ರಕಾರ ‘ಶೀಘ್ರ ಕ್ರಮ ಕೈಗೊಳ್ಳುತ್ತೇವೆ’ ಎಂಬ ಮಾತು ಪುನರುಚ್ಚರಿಸಿದ್ದೂ ಇದೆ. ಈ ಬಾರಿಯ ಆಶ್ವಾಸನೆಯೂ ಮತ್ತೆ ಸಮಯ ತಳ್ಳುವ ಸಬೂಬು ಆಗಬಾರದು. ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಬಗರ್​ಹುಕುಂ ಯೋಜನೆ ಅಡಿ ಸಾಗುವಳಿ ಭೂಮಿಯ ಸಕ್ರಮಕ್ಕೆ ಸರ್ಕಾರ ಮುಂದಾಗಿರುವುದು ಗೊತ್ತಿರುವಂಥದ್ದೇ. ಭೂ ಕಂದಾಯ ಕಾಯ್ದೆ ಪ್ರಕಾರ ತಾಲೂಕುವಾರು ಶಾಸಕರ ನೇತೃತ್ವದಲ್ಲಿ ಬಗರ್​ಹುಕುಂ ಸಮಿತಿ ರಚಿಸಿ ಅರ್ಜಿ ವಿಲೇವಾರಿ ಮಾಡಬೇಕು. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈವರೆಗೆ ಶಾಸಕರ ನೇತೃತ್ವದಲ್ಲಿ ಸಮಿತಿಯೇ ರಚನೆಯಾಗಿಲ್ಲ ಎಂಬುದು ಕಹಿಸತ್ಯ. ಪರಿಣಾಮ, ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗಿಲ್ಲ. ಇದರಿಂದ, ರೈತರು ಅತ್ತ ಹಕ್ಕುಪತ್ರ ಇಲ್ಲದೆ ಇತ್ತ ಸರ್ಕಾರಿ ಸೌಲಭ್ಯಗಳನ್ನೂ ಪಡೆಯಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾಗುವಳಿ ಭೂಮಿಯ ಸಕ್ರಮಕ್ಕೆ ಕಾದು ಸುಸ್ತಾಗಿರುವ ರೈತರು, ಈ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.

    ಅರ್ಜಿ ವಿಲೇವಾರಿ ಸಮಸ್ಯೆಯಿಂದಾಗಿ ರೈತರಿಗೆ ಸರ್ಕಾರಿ ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಲು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ಸೇರ್ಪಡೆ ಮಾಡಲು, ಎಪಿಎಂಸಿಯಲ್ಲಿ ಬೆಳೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಾಲವೂ ಸಿಗುತ್ತಿಲ್ಲ. ತಲೆಮಾರುಗಳಿಂದ ಉಳುಮೆ ಮಾಡುತ್ತಿದ್ದರೂ ಆ ಭೂಮಿ ಮೇಲೆ ಯಾವುದೇ ಹಕ್ಕಿಲ್ಲ ಎಂಬ ರೈತರ ನೋವನ್ನು ಸಂವೇದನೆ ಮೂಲಕ ಪರಿಶೀಲಿಸಿ, ಪರಿಹರಿಸಬೇಕಿದೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 1.20 ಲಕ್ಷ ಅರ್ಜಿಗಳು ವಿಲೇವಾರಿಯಾಗದೆ ಉಳಿದಿದ್ದು, ತುಮಕೂರು ಜಿಲ್ಲೆಯಲ್ಲಿ ಈ ಸಂಖ್ಯೆ 1.09 ಲಕ್ಷಕ್ಕಿಂತ ಅಧಿಕ. ಇನ್ನಾದರೂ ಈ ವಿಷಯದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆ ವಿಳಂಬವಿಲ್ಲದೆ ನಡೆಯಬೇಕು ಮತ್ತು ವಾರಕ್ಕೊಮ್ಮೆ ನಿಯಮಿತವಾಗಿ ಸಭೆ ನಡೆಸಿ, ಅರ್ಜಿಗಳನ್ನು ವಿಲೇವಾರಿಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts