More

    ಪರಿವರ್ತನೆಯ ಪ್ರಬಲ ಅಸ್ತ್ರ: ರಾಜಕೀಯ ರಂಗದತ್ತ ಯುವ ಸಮುದಾಯದ ಒಲವು ಹೆಚ್ಚಲಿ

    ರಾಜಕೀಯ ರಂಗ ಎಂದಾಕ್ಷಣ ಸಮಾಜದಲ್ಲಿ ನಕಾರಾತ್ಮಕ ಸಂಗತಿಗಳ ಚರ್ಚೆಯೇ ಎದ್ದುಕಾಣುತ್ತದೆ. ‘ಒಳ್ಳೆಯವರಿಗೆ ರಾಜಕೀಯ ಆಗಿಬರುವುದಿಲ್ಲ’, ‘ನಮಗ್ಯಾಕೆ ರಾಜಕೀಯದ ಉಸಾಬರಿ’ ಎಂಬರ್ಥದ ಮಾತುಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತವೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾಗುವ ಹಣಬಲ, ಜಾತಿಬಲ, ಅಧಿಕಾರಕ್ಕಾಗಿ ನಡೆಯುವ ಕಿತ್ತಾಟ ಇದೆಲ್ಲವನ್ನೂ ಕಂಡು ಈ ಕ್ಷೇತ್ರದ ಬಗ್ಗೆ ಜನರಲ್ಲಿ ಒಂದು ಬಗೆಯ ಅಸಡ್ಡೆ ಮನೆಮಾಡಿರುವುದು ಸುಳ್ಳಲ್ಲ. ಇದೆಲ್ಲ ಏನೇ ಇದ್ದರೂ, ರಾಜನೀತಿ-ರಾಜಕೀಯ ಎಂಬುದು ವ್ಯವಸ್ಥೆಗೆ ಅನಿವಾರ್ಯ ಮತ್ತು ಅದು ಪರಿವರ್ತನೆಯ ಪ್ರಬಲ ಅಸ್ತ್ರ ಎಂಬುದನ್ನು ಮರೆಯುವಂತಿಲ್ಲ. ಈ ಕ್ಷೇತ್ರದಲ್ಲಿ ಸಕ್ರಿಯವಾದರೆ ಸಮಾಜದ ವಿವಿಧ ಕ್ಷೇತ್ರಗಳನ್ನು ಸಬಲೀಕರಣ ಮಾಡುವ, ನಿಜಾರ್ಥದಲ್ಲಿ ಜನಸೇವೆ ಮಾಡುವ ಅವಕಾಶ ದಕ್ಕುತ್ತದೆ.

    ಯಾವುದೇ ಕ್ಷೇತ್ರ ಒಳ್ಳೆಯ ಅಂಶಗಳು ಮತ್ತು ನಕಾರಾತ್ಮಕ ಸಂಗತಿ ಎರಡನ್ನೂ ಒಳಗೊಂಡಿರುತ್ತದೆ. ಹಾಗೆಂದ ಮಾತ್ರಕ್ಕೆ, ಒಳ್ಳೆಯದನ್ನೆಲ್ಲ ಗೌಣವಾಗಿಸಿ, ಬರೀ ಸಮಸ್ಯೆ ಅಥವಾ ಅನನುಕೂಲಗಳ ಬಗ್ಗೆಯೇ ಗಮನ ಕೇಂದ್ರೀಕರಿಸಿದರೆ, ಅಂಥ ಕ್ಷೇತ್ರಗಳ ಸಬಲೀಕರಣ ಹೇಗೆ ಸಾಧ್ಯ? ರಾಜಕೀಯದ ವಿಷಯದಲ್ಲೂ ಇದನ್ನು ಮನಗಾಣಬೇಕು. ಪ್ರಬಲ ಇಚ್ಛಾಶಕ್ತಿ ಮತ್ತು ಪರಿವರ್ತನೆಯ ತುಡಿತ ಹೊಂದಿದ ಅದೆಷ್ಟೋ ಮಂದಿ ಅಸಾಧಾರಣ ಬದಲಾವಣೆ ತಂದ ನಿದರ್ಶನಗಳಿಗೆ ನಮ್ಮಲ್ಲಿ ಕೊರತೆಯೇನಿಲ್ಲ. ಮುಖ್ಯವಾಗಿ, ಮಾನಸಿಕತೆಯಲ್ಲಿ ಒಂದಿಷ್ಟು ಬದಲಾವಣೆಯ ಅಗತ್ಯವಿದೆ. ಯುವಕ-ಯುವತಿಯರು, ಉಚ್ಚ ಶಿಕ್ಷಿತರು, ಸರ್ಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು, ಕ್ರೀಡಾಪಟುಗಳು, ನಟರು-ಹೀಗೆ ಬೇರೆ ಬೇರೆ ಕ್ಷೇತ್ರದವರು ರಾಜಕೀಯ ಪ್ರವೇಶಿಸಿ, ಜನಪ್ರತಿನಿಧಿಗಳಾಗಿ ಗಮನ ಸೆಳೆದ ನಿದರ್ಶನಗಳಿವೆ.

    ಇದನ್ನೂ ಓದಿ: ಧೋನಿಯನ್ನು ಹೊಗಳಿದ್ದಕ್ಕೆ ಸಕ್ಲೇನ್ ಮುಷ್ತಾಕ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಟ್ಟಾಗಿದ್ದೇಕೆ?

    ವ್ಯವಸ್ಥೆಯಲ್ಲಿ ದೋಷಗಳು, ಲೋಪಗಳು ದೊಡ್ಡ ಸಂಖ್ಯೆಯಲ್ಲಿವೆ ಎಂಬುದೇನೋ ನಿಜ. ಆದರೆ, ಬಹುತೇಕ ಮಂದಿ ಈ ಬಗ್ಗೆ ಚರ್ಚೆ ಮಾಡುತ್ತಲೇ, ಬದಲಾವಣೆ ಸಾಧ್ಯವಿಲ್ಲ ಎಂಬ ಹಳಹಳಿಕೆಯನ್ನು ಹರಡಿ ಬಿಡುತ್ತಾರೆ. ಕೆಲವು ಮಂದಿ ಅದನ್ನೇ ಸವಾಲಾಗಿ ಸ್ವೀಕರಿಸಿ, ವ್ಯವಸ್ಥೆಯನ್ನು ಬದಲಿಸೋಣ, ಜನರ ಒಳಿತಿಗಾಗಿ ಶ್ರಮಿಸೋಣ ಎಂದು ಸಂಕಲ್ಪಿಸಿ, ಸಾಧನೆಗಳಿಗೆ ಮುನ್ನುಡಿ ಬರೆಯುತ್ತಾರೆ. ಭಾರತದಲ್ಲಂತೂ ರಾಜಕೀಯ/ರಾಜನೀತಿಯ ಶುದ್ಧೀಕರಣ ಪ್ರಕ್ರಿಯೆ ಹಂತಹಂತವಾಗಿ, ಪರಿಣಾಮಕಾರಿಯಾಗಿ ನಡೆದುಕೊಂಡು ಬಂದಿದೆ. ಚುನಾವಣೆ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು, ಜನಪ್ರತಿನಿಧಿಗಳ ಉತ್ತರದಾಯಿತ್ವ ಅದಕ್ಕೆ ಸಾಕ್ಷಿ. ಈ ನಿಟ್ಟಿನಲ್ಲಿ ಆಗಬೇಕಾದ್ದು ಇನ್ನೂ ಇದೆ ಎಂಬುದು ಖರೆ. ಈ ನಡುವೆ, ಐಎಎಸ್, ಐಪಿಎಸ್ ಅಧಿಕಾರಿಗಳು ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಸಕ್ರಿಯವಾಗುತ್ತಿರುವುದು ಗಮನಾರ್ಹ ಬೆಳವಣಿಗೆ.

    ಇದನ್ನೂ ಓದಿ: VIDEO: ಷಟ್ಲರ್​ ಪಿವಿ ಸಿಂಧು ವಿಶ್ವ ಚಾಂಪಿಯನ್​ ಪಟ್ಟಕ್ಕೆ ಒಂದು ವರ್ಷ..!

    ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿ ಎಂಬ ವರ್ಚಸ್ಸು ಪಡೆದ, ಕಳೆದ ವರ್ಷ ರಾಜೀನಾಮೆ ನೀಡಿ ಸಾಮಾಜಿಕ ಬದುಕಿನತ್ತ ಹೊರಳಿದ ಅಣ್ಣಾಮಲೈ ಮಂಗಳವಾರ ಬಿಜೆಪಿಗೆ ಸೇರ್ಪಡೆ ಆಗಿರುವುದು ಇದಕ್ಕೆ ತಾಜಾ ನಿದರ್ಶನ. ಅವರು ಈ ರಂಗದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಕಾದುನೋಡಬೇಕಾದ ವಿಚಾರ. ಈ ಹಿಂದೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಜಮ್ಮು-ಕಾಶ್ಮೀರದ ಶಾಹ್ ಫೈಸಲ್ ಸಹ ರಾಜಕೀಯ ರಂಗಕ್ಕೆ ಬಂದಿದ್ದರಾದರೂ, ಸದ್ಯ ದೂರವುಳಿದಿದ್ದಾರೆ. ಅದೇನೆ ಇದ್ದರೂ, ಯುವ ಸಮುದಾಯ ರಾಜಕೀಯ ರಂಗವನ್ನು ಸಾರಾಸಗಟಾಗಿ ದೂರೀಕರಿಸದೆ ಸಮಾಜದ ಸಬಲೀಕರಣಕ್ಕೆ ಈ ರಂಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿ, ಅವರ ಸಕ್ರಿಯ ಸಹಭಾಗಿತ್ವ ಹೆಚ್ಚಲಿ. ಅದರೊಟ್ಟಿಗೆ, ರಾಜಕಾರಣದ ಇಮೇಜ್ ಕೂಡ ಬದಲಾಗಲಿ.

    ಟೋಲ್​ ಫೀಯಲ್ಲಿ ಶೇಕಡ 50 ಡಿಸ್ಕೌಂಟ್ ಬೇಕಾ- ಫಾಸ್ಟ್ಯಾಗ್ ಅಳವಡಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts