More

    ಸಂಪಾದಕೀಯ|ಕೃಷಿಗೆ ಮತ್ತಷ್ಟು ಬಲ-ನವೋದ್ಯಮಗಳಿಂದ ಹಲವು ಪ್ರಯೋಜನ

    ಭೂ ಸುಧಾರಣೆ, ಎಪಿಎಂಸಿ ವಿಧೇಯಕಗಳ ತಿದ್ದುಪಡಿ ಬಗ್ಗೆ ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಭರ್ಜರಿ ಮುಂಗಾರಿನಿಂದ ರಾಜ್ಯ, ದೇಶದಲ್ಲಿ ಈ ಬಾರಿ ಬೇಸಾಯ ಪ್ರಮಾಣ ಹೆಚ್ಚಿದೆ. ಕೃಷಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ ಎಂಬ ಕಳವಳದ ಮಧ್ಯೆಯೇ ಯುವಸಮುದಾಯ ಕೃಷಿಯತ್ತ ಒಲವು ತೋರುತ್ತಿದೆ. ಕರೊನಾ ಸೋಂಕಿನ ಹಾವಳಿ ಮತ್ತು ಅದನ್ನು ತಡೆಗಟ್ಟಲು ಕೆಲ ತಿಂಗಳು ವಿಧಿಸಲಾದ ಲಾಕ್​ಡೌನ್ ಹಲವು ಸ್ಥಿತ್ಯಂತರಗಳನ್ನು ಸೃಷ್ಟಿಸಿತು. ನಗರಪ್ರದೇಶಗಳಲ್ಲಿ ಅಭದ್ರತೆಯ ಭಾವದಲ್ಲಿ ಬದುಕು ಸಾಗಿಸುವುದಕ್ಕಿಂತ ಕೃಷಿಯನ್ನು ನಂಬಿ, ಊರುಗಳಲ್ಲಿ ನೆಮ್ಮದಿಯ ನಾಳೆಗಳನ್ನು ಕಂಡುಕೊಂಡರಾಯಿತು ಎಂದು ಸಾಕಷ್ಟು ಯುವಕರು ಗ್ರಾಮಗಳತ್ತ ಮರಳಿದ್ದಾರೆ.

    ಅಷ್ಟೇ ಅಲ್ಲ, ಕೃಷಿಯಲ್ಲಿ ಹೊಸ ಪ್ರಯೋಗಗಳ ಸಾಹಸಕ್ಕೂ ಮುಂದಾಗಿದ್ದಾರೆ. ಸಾಂಪ್ರದಾಯಿಕ ಪದ್ಧತಿಗಳನ್ನೇ ನೆಚ್ಚಿಕೊಳ್ಳುವುದಕ್ಕಿಂತ ಆದಾಯ ಹೆಚ್ಚಿಸುವ ಕ್ರಮಗಳತ್ತಲೂ ಗಮನ ಹರಿಸುತ್ತಿದ್ದಾರೆ. ಆದರೆ, ಕೃಷಿಯಲ್ಲಿ ನವೋದ್ಯಮ ಆರಂಭಿಸುವ ಅದ್ಭುತ ಅವಕಾಶಗಳಿದ್ದರೂ, ಅದಕ್ಕೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ ಎಂಬ ಕೊರಗು ಯುವಸಮುದಾಯದಲ್ಲಿತ್ತು. ಇದನ್ನು ನಿವಾರಿಸಲು ಮಹತ್ವದ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರ ‘ಕೃಷಿ ನವೋದ್ಯಮ ನೀತಿ’ಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಗ್ರಾಮೀಣ ಕರ್ನಾಟಕದ ಪಾಲಿಗೆ ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು, ಉದ್ಯೋಗಾವಕಾಶ ಸೃಷ್ಟಿಸಲು ಆ ಮೂಲಕ ನಗರಗಳಿಗೆ ವಲಸೆ ಪ್ರಮಾಣ ತಗ್ಗಿಸಲು ಇದರಿಂದ ಸಾಧ್ಯವಾಗಲಿದೆ.

    ಕೃಷಿ ಹೊಸ ಸಾಧ್ಯತೆಗಳತ್ತ ತೆರೆದುಕೊಳ್ಳಬೇಕು ಎಂಬ ಆಶಯಕ್ಕೆ ಇದು ಪೂರಕವಾಗಿದೆ. ‘ಆತ್ಮನಿರ್ಭರ ಭಾರತ’ದ ಕನಸನ್ನು ಸಾಕಾರಗೊಳಿಸಲು ಕೃಷಿಕ್ಷೇತ್ರದ ಕೊಡುಗೆ ಮಹತ್ವದ್ದು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸ್ವಾವಲಂಬನೆಗೆ ಕರೆ ನೀಡಿದ್ದರು. ರಾಜ್ಯದಲ್ಲಿ ಕೃಷಿ ಯಂತ್ರೋಪಕರಣ, ಕೃಷಿ ಉತ್ಪನ್ನಗಳ ಆನ್​ಲೈನ್ ಮಾರಾಟ, ಸೂಕ್ಷ್ಮ ನೀರಾವರಿ, ತಂತ್ರಜ್ಞಾನ ಪೂರೈಕೆ, ಸಾವಯವ ಕೃಷಿ, ಸಿರಿಧಾನ್ಯಗಳು, ಮಾರುಕಟ್ಟೆ ತಂತ್ರಜ್ಞಾನ, ಆಹಾರ ಸಂಸ್ಕರಣೆ ಸೇರಿ ಹಲವು ವಿಭಾಗಗಳಲ್ಲಿ ನವೋದ್ಯಮ ಸ್ಥಾಪನೆ ಆಗಲಿವೆ. ಕೃಷಿ ನವೋದ್ಯಮ ನೀತಿ ರಚನೆಗಾಗಿ ಸರ್ಕಾರ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಪತಿ ಡಾ. ಎಸ್. ಅಯ್ಯಪ್ಪನ್ ನೇತೃತ್ವದಲ್ಲಿ 11 ಜನರ ಸಮಿತಿ ರಚಿಸಿದ್ದು, ಎರಡು ತಿಂಗಳಲ್ಲಿ ವರದಿ ಸಲ್ಲಿಸಬೇಕಿದೆ. ‘ಪ್ರಯೋಗಾಲಯದಿಂದ ಜಮೀನಿಗೆ’ ಎಂಬ ಪರಿಕಲ್ಪನೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಉದ್ಯಮಗಳ ಸ್ಥಾಪನೆಗೆ ಪೂರಕ ಪರಿಸರ ನಿರ್ಮಾಣ ಮಾಡುವುದು ಹಾಗೂ ಅದಕ್ಕೆ ಪೂರಕವಾಗಿ ಅಗ್ರಿ ಇನ್​ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ, 2ನೇ ಹಂತದ ನಗರಗಳಲ್ಲಿ ಈ ನವೋದ್ಯಮಗಳನ್ನು ಆರಂಭಿಸಲು ಮುಂದಾಗಿರುವುದು ಸೂಕ್ತ ನಡೆಯಾಗಿದೆ.

    ನವೋದ್ಯಮಗಳ ಮೂಲಕ ಗ್ರಾಮೀಣಿಗರ, ಕೃಷಿಕರ ಆದಾಯ ಹೆಚ್ಚಲಿದೆ. ಅಲ್ಲದೆ, ಅವರಲ್ಲಿ ಆತ್ಮವಿಶ್ವಾಸವನ್ನೂ ತುಂಬಲಿದೆ. ಗ್ರಾಮಗಳಿಗೆ ಮರಳುವವರ ಸಂಖ್ಯೆಯೂ ಹೆಚ್ಚಲಿದ್ದು, ಹಳ್ಳಿಗಳು ‘ವೃದ್ಧಾಶ್ರಮ’ ಎಂಬ ಹಳೆಪಟ್ಟಿ ಕಳಚಿಕೊಂಡು, ಅಭಿವೃದ್ಧಿ ಪ್ರಕ್ರಿಯೆಯ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿ. ಹೊಸ ನೀತಿ ಸಮರ್ಪಕವಾಗಿ ಜಾರಿಗೆ ಬರಲಿ.

    ಜಾಮೀನಿಗೆ ಅರ್ಜಿ ಹಾಕುವುದಿಲ್ಲ, ನನ್ನನ್ನು ಗಲ್ಲಿಗೇರಿಸಿದರೂ ಸರಿ: ಉಮಾಭಾರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts