More

    ಸಂಪಾದಕೀಯ| ಕಳವಳದ ಸಂಗತಿ

    ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ದಶಕಗಳ ವಿವಾದಗಳನ್ನು, ಸೂಕ್ಷಾ್ಮತಿಸೂಕ್ಷ್ಮ ಪ್ರಕರಣಗಳನ್ನು ವಿವೇಚನೆಯಿಂದ ಇತ್ಯರ್ಥಗೊಳಿಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆ ನೆಲೆಸಲು ನ್ಯಾಯಾಲಯಗಳ ಕೊಡುಗೆ ಅಸಾಧಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ದೇಶದ 600ಕ್ಕೂ ಹೆಚ್ಚು ವಕೀಲರು ‘ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ ನಡೆಯುತ್ತಿದೆ, ಇದನ್ನು ತಡೆಯಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಮಾರ್ಚ್ 26ರಂದು ಬರೆದ ಪತ್ರ ತೀವ್ರ ಚರ್ಚೆಯನ್ನೂ, ಕಳವಳವನ್ನೂ ಹುಟ್ಟುಹಾಕಿದೆ.

    ಪ್ರಸಕ್ತ ಸನ್ನಿವೇಶದಲ್ಲಿ ಕಂಡುಬಂದಿರುವ ಸನ್ನಿವೇಶಗಳು, ಚಿಂತೆಗೆ ಕಾರಣವಾಗಿರುವ ಸಂಗತಿಗಳ ಕುರಿತಂತೆ ವಕೀಲರು ದನಿ ಎತ್ತಿರುವುದು ಸೂಕ್ತವಾಗಿಯೇ ಇದೆ. ಪ್ರಜಾತಂತ್ರದ ವ್ಯವಸ್ಥೆ ಶಕ್ತಿಶಾಲಿಯಾಗಿರಬೇಕಾದರೆ, ಆಯಾ ಕಾಲಘಟ್ಟದಲ್ಲಿ ಎದುರಾಗುವ ಅಪಸವ್ಯಗಳನ್ನು ನಿವಾರಿಸಿಕೊಳ್ಳಲೇ ಬೇಕು. ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರವನ್ನು ಕಂಡು ಹಿಡಿದು, ಕೊರತೆಗಳನ್ನು ಹೊಗಲಾಡಿಸಬೇಕು.

    ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಯತ್ನಿಸುವ ಯಾವುದೇ ಪ್ರಯತ್ನಗಳು ಸಮರ್ಥನೀಯವಲ್ಲ. ಇದರಿಂದ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸಿದಂತಾಗುತ್ತದೆ ಮತ್ತು ಜನಸಾಮಾನ್ಯರು ನ್ಯಾಯಾಂಗದ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಒದಗಿದಂತಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಕೀಲರು ದನಿ ಎತ್ತಿರುವುದರಿಂದ, ಅವರ ಕಳಕಳಿಯನ್ನು ಅರ್ಥ ಮಾಡಿಕೊಳ್ಳಬೇಕು.

    ‘ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು ಹುರುಳಿಲ್ಲದ ತರ್ಕ ಮತ್ತು ಹಳಸಿಹೋಗಿರುವ ರಾಜಕೀಯ ಕಾರ್ಯಸೂಚಿಯನ್ನು ಆಧಾರವಾಗಿ ಇರಿಸಿಕೊಂಡು ನ್ಯಾಯಾಂಗದ ಮೇಲೆ ಒತ್ತಡ ತರಲು, ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಹಾಗೂ ನಮ್ಮ ನ್ಯಾಯಾಲಯಗಳಿಗೆ ಕೆಟ್ಟ ಹೆಸರು ತರಲು ನಡೆಸಿರುವ ಯತ್ನದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ’ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ, ವಕೀಲರ ಪರಿಷತ್ತಿನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಹಿರಿಯ ವಕೀಲ ಉದಯ ಹೊಳ್ಳ, ಚೇತನ್ ಮಿತ್ತಲ್, ಆದೀಶ್ ಅಗರ್ವಾಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್ ಮತ್ತು ಸ್ವರುಪಮಾ ಚತುರ್ವೆದಿ ಸೇರಿದಂತೆ ಅನೇಕ ಹಿರಿಯ ನ್ಯಾಯವಾದಿಗಳ ಸಹಿಯುಳ್ಳ ಪತ್ರದಲ್ಲಿ ವಿವರಿಸಲಾಗಿದೆ. ‘ರಾಜಕೀಯ ಪ್ರಕರಣಗಳಲ್ಲಿ, ಅದರಲ್ಲೂ ಮುಖ್ಯವಾಗಿ ರಾಜಕಾರಣಿಗಳು ಭ್ರಷ್ಟಾಚಾರ ಆರೋಪ ಹೊತ್ತಿರುವ ಪ್ರಕರಣಗಳಲ್ಲಿ, ಒತ್ತಡ ತರುವ, ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಯತ್ನ ನಡೆಯುತ್ತದೆ ಎಂದೂ ಪತ್ರದಲ್ಲಿ ವಿವರಿಸಲಾಗಿದೆ.

    ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬೇರೊಬ್ಬರನ್ನು ಬೆದರಿಸುವ ಕೆಲಸ ಮಾಡುವುದು ಹಿಂದಿನಿಂದಲೂ ಬಂದಿರುವ ಕಾಂಗ್ರೆಸ್ ಸಂಸ್ಕೃತಿ’ ಎಂದು ಟೀಕಿಸಿದ್ದಾರೆ. ಅದೇನೆ ಇದ್ದರೂ, ಇಂಥ ವಿಷಯಗಳು ರಾಜಕೀಯ ಮೇಲಾಟಗಳಿಗೆ ವೇದಿಕೆ ಆಗಬಾರದು. ರಾಜಕೀಯ ವ್ಯಕ್ತಿಗಳನ್ನು ರಕ್ಷಿಸುವ ಯತ್ನ ಸರಿಯಲ್ಲ. ನ್ಯಾಯಾಂಗ ಮುಕ್ತವಾಗಿ, ಸಮರ್ಪಕವಾಗಿ, ಘನತೆಯಿಂದ ಕಾರ್ಯನಿರ್ವಹಿಸುವಂಥ ವಾತಾವರಣವನ್ನು ಉಳಿಸುವುದು, ಬೆಳೆಸುವುದು ಈ ಕಾಲದ ತುರ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts