More

  ಸಂಪಾದಕೀಯ; ಸೂಕ್ತ ನಿರ್ಧಾರ 

  ಗ್ರಾಮೀಣ ಪ್ರದೇಶ ಹತ್ತುಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ನಿಜ. ಅದೆಷ್ಟೋ ಹಳ್ಳಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲ ಎಂಬುದು ಕಹಿವಾಸ್ತವ. ಕುಡಿಯುವ ನೀರಿಗಾಗಿ ಪರದಾಟ, ನೀರು ತರಲೆಂದೇ ಕಿಲೋಮೀಟರಗಳಷ್ಟು ಅಲೆದಾಟ, ಸಮರ್ಪಕ ರಸ್ತೆ ಇಲ್ಲದಿರುವುದು, ಸಾರಿಗೆ ಸಂಪರ್ಕದ ತೀವ್ರ ಕೊರತೆ ಅಲ್ಲದೆ ಮುಖ್ಯವಾಗಿ ವೈದ್ಯಕೀಯ ಸೌಕರ್ಯಗಳು ಇಲ್ಲದಿರುವುದು.

  ಹೀಗೆ, ಸಮಸ್ಯೆಗಳ ಸ್ವರೂಪ ಮತ್ತು ಅವುಗಳ ತೀವ್ರತೆ ಹೇಳತೀರದ್ದು. ಜನಪ್ರತಿನಿಧಿಗಳು ಚುನಾವಣೆ ಬಂದಾಗಲಷ್ಟೇ ಹಳ್ಳಿಗಳತ್ತ ಮುಖ ಮಾಡುತ್ತಾರೆ, ಆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಮರಳಿದರೆ ಮತೆôದು ವರ್ಷ ಗ್ರಾಮಗಳನ್ನು ಮರೆತುಬಿಡುತ್ತಾರೆ ಎಂಬ ಆರೋಪ, ಆಕ್ಷೇಪ ಬಹುದಿನಗಳಿಂದ ಇದ್ದೇ ಇದೆ.

  ಅಲ್ಲದೆ, ಸ್ಥಳೀಯವಾಗಿ ಪರಿಹಾರವಾಗಬಹುದಾದಂಥ ಸಣ್ಣಪುಟ್ಟ ಸಮಸ್ಯೆಗಳಿಗೆ ಸಂಬಂಧಿಸಿಯೂ ಬೆಂಗಳೂರಿಗೆ ಎಡತಾಕಬೇಕು ಎಂಬ ಧೋರಣೆ ಸರಿಯಲ್ಲ. ಕೆಲ ಉನ್ನತ ಅಧಿಕಾರಿಗಳು ಸ್ವಇಚ್ಛೆ ಮತ್ತು ಕಳಕಳಿಯಿಂದ ಹಳ್ಳಿಗಳಿಗೆ ಹೋಗಿ ಅಹವಾಲು ಸ್ವೀಕರಿಸುತ್ತಾರೆ ಎಂಬುದನ್ನು ಬಿಟ್ಟರೆ, ಬಹುತೇಕ ಅಧಿಕಾರಿಗಳು ಹಳ್ಳಿಗಳತ್ತ ಮುಖ ಮಾಡುವುದಿಲ್ಲ.

  ಹಾಗಾಗಿಯೇ, ಹಳ್ಳಿಯತ್ತ ಆಡಳಿತವನ್ನು ಕೊಂಡೊಯ್ಯಲು ರಾಜ್ಯ ಸರ್ಕಾರ ಮನಸ್ಸು ಮಾಡಿರುವುದು ಸೂಕ್ತವಾಗಿದೆ. ಇಂಥ ಕ್ರಮದ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ.

  ಬುಧವಾರ ಕಂದಾಯ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ, ತಿಂಗಳಲ್ಲಿ ಒಂದು ದಿನ (ಮೂರನೇ ಶನಿವಾರ) ಹಳ್ಳಿಗಳಿಗೆ ತೆರಳಿ ಅಹವಾಲು ಸ್ವೀಕರಿಸಿ, ಪರಿಹರಿಸುವಂತೆ ಸೂಚಿಸಿದ್ದಾರೆ. ಈ ಭೇಟಿ ವೇಳೆ ಜಿಲ್ಲಾಧಿಕಾರಿ ಜತೆ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಇರಲಿದ್ದಾರೆ.

  ರಾಜ್ಯದಲ್ಲಿ ಒಟ್ಟು 30 ಸಾವಿರ ಹಳ್ಳಿಗಳಿದ್ದು, ಈ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಸಾವಿರ ಹಳ್ಳಿಗಳನ್ನು ತಲುಪಬಹುದಾಗಿದೆ. ಮುಂಬರುವ ಮೂರು ವರ್ಷಗಳಲ್ಲಿ ಎಲ್ಲ ಹಳ್ಳಿಗಳ ಕನಿಷ್ಠ ಅಗತ್ಯದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂಬ ಆಶಯ ಸರ್ಕಾರದ್ದು.

  ಕಳೆದ ಹಲವು ವರ್ಷಗಳಿಂದ ಬಾಕಿ ಇರುವ ಪೌತಿ ಖಾತೆಯ 10 ಲಕ್ಷ ಅರ್ಜಿಗಳ ಇತ್ಯರ್ಥ, ಪಹಣಿ ಕಲಂನಲ್ಲಿ ವ್ಯತ್ಯಾಸ ನಿವಾರಣೆ, ಅಕ್ರಮ-ಸಕ್ರಮ ಹಕ್ಕುಪತ್ರ ಹಂಚಿಕೆ, ಸ್ಮಶಾನಭೂಮಿ ಸಮಸ್ಯೆಗೆ ಪರಿಹಾರ ಸೇರಿ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

  ಸರ್ಕಾರದ ಈ ನಿರ್ಧಾರ ಸೂಕ್ತವಾಗಿದೆ. ಅಧಿಕಾರಿಗಳ ಸ್ಪಂದನೆ, ಪ್ರಭುತ್ವದ ಕಾಳಜಿಯಿಂದ ಗ್ರಾಮೀಣ ಭಾಗದ ಸಮಸ್ಯೆಗಳು ಪರಿಹಾರದ ದಾರಿ ಕಾಣುವಂತಾದರೆ ಅದು ದೊಡ್ಡ ಬದಲಾವಣೆಯೇ. ಆದರೆ, ಇದು ಬರೀ ಆಶ್ವಾಸನೆಯಾಗಿ ಉಳಿಯಬಾರದು ಅಥವಾ ಆರಂಭೋತ್ಸಾಹಕ್ಕೆ ಸೀಮಿತವಾಗಬಾರದು.

  ಆಡಳಿತವನ್ನು ಹಳ್ಳಿಗೆ ಕೊಂಡೊಯ್ಯುವ, ಆ ನಿಟ್ಟಿನಲ್ಲಿ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ಭೇಟಿ ನೀಡುವ ಚಿಂತನೆ ಹೊಸದೇನಲ್ಲ. ಆಗಾಗ, ಇದು ಚರ್ಚೆಯ ಮುನ್ನೆಲೆಗೆ ಬಂದಿದೆಯಾದರೂ, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ‘ಗ್ರಾಮವಾಸ್ತವ್ಯ’ ಮಾಡಿದರಾದರೂ, ಮುಂದಿನ ದಿನಗಳಲ್ಲಿ ಆ ಗ್ರಾಮಗಳ ಸ್ಥಿತಿಯೇನೂ ಸುಧಾರಿಸಲಿಲ್ಲ.

  ಆದ್ದರಿಂದ, ಈಗಿನ ಸರ್ಕಾರ ಕೇವಲ ಭರವಸೆಗೆ ಸೀಮಿತವಾಗಿ ಉಳಿಯಬಾರದು. ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡುವ ಮೂಲಕ ಸರ್ಕಾರಿ ಸೌಲಭ್ಯಗಳು ಅಲ್ಲಿ ತಲುಪಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts