More

    ಸವಾಲುಗಳ ದಶಕ: ಕೋವಿಡ್ ಸಾಂಕ್ರಾಮಿಕ ಸಂಕಷ್ಟ ನಡುವೆಯೂ ಒಂದಿಷ್ಟು ಪ್ರಗತಿ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಇಂದು ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಿದೆ. ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ ಅಳವಡಿಕೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾದ ಸಮಸ್ಯೆ ಎದುರಿಸಲು ಆತ್ಮನಿರ್ಭರ ಭಾರತಕ್ಕೆ ಕರೆ, ಕಲ್ಯಾಣ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ನೇರ ವರ್ಗಾವಣೆ, ಗಡಿಗಳಲ್ಲಿ ಆಕ್ರಮಣ ಸೇರಿದಂತೆ ಹಲವಾರು ಮಹತ್ವದ ಘಟನೆಗಳಿಗೆ ಈ ಅವಧಿ ಸಾಕ್ಷಿಯಾಗಿದೆ. 2014ರ ಮೇ 26ರಂದು ಸ್ಪಷ್ಟ ಬಹುಮತ ಪಡೆದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ನಂತರ ನಾಲ್ಕನೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕರಾಗಿದ್ದಾರೆ. ಮೊದಲ ಮೂವರು ಕಾಂಗ್ರೆಸ್ ಪಕ್ಷದವರಾಗಿದ್ದರೆ, ಮೋದಿಯವರು ಮಾತ್ರ ದೀರ್ಘಕಾಲ ಪ್ರಧಾನಿಯಾದ ಕಾಂಗ್ರೆಸ್ಸೇತರ ನಾಯಕ ಎಂಬುದು ಗಮನಾರ್ಹ ಸಂಗತಿಯಾಗಿದೆ.

    2019ರಲ್ಲಿ ಬ್ರಿಟನ್ನನ್ನು ಹಿಂದಿಕ್ಕುವ ಮೂಲಕ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊರಹೊಮ್ಮಿರುವುದು ಈ ಅವಧಿಯಲ್ಲಿ ಅತಿದೊಡ್ಡ ಸಾಧನೆ ಎನ್ನಬಹುದು. ಆದರೂ ಇತ್ತೀಚಿನ ವರ್ಷಗಳಲ್ಲಿ ಭಾರತದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆಯು ಸಮರೂಪವಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಕೋವಿಡ್ ಸಾಂಕ್ರಾಮಿಕ. 2016-17 ರಲ್ಲಿ ಆರ್ಥಿಕ ಬೆಳವಣಿಗೆಯು ಶೇ. 8ರ ತಲುಪಿದ ನಂತರದ ವರ್ಷಗಳಲ್ಲಿ, ಕೋವಿಡ್ ಕಾಣಿಸಿಕೊಳ್ಳುವ ಮುಂಚಿತವಾಗಿಯೇ ಈ ದರವು ಕೆಳಮುಖದ ಹಾದಿಯಲ್ಲಿತ್ತು. ರೂ 1,000 ಮತ್ತು ರೂ 500 ಮುಖಬೆಲೆಯ ಕರೆನ್ಸಿ ನೋಟುಗಳ ಅಮಾನ್ಯೀಕರಣವನ್ನು ಕಂಡ ವರ್ಷ 2017-18 ರಲ್ಲಿ ಆರ್ಥಿಕ ಬೆಳವಣಿಗೆಯ ದರವು ಶೇ. 6.8, 2018-19 ರಲ್ಲಿ ಶೇ. 6.45, 2019-20 ರಲ್ಲಿ ಶೇ. 3.87 ಕ್ಕೆ ಸೀಮಿತವಾಯಿತು. ಆದರೆ, ಕೋವಿಡ್ ಲಾಕ್​ಡೌನ್ ಸಮಯದಲ್ಲಿ (ಹಣಕಾಸು ವರ್ಷ 2020-21) ಈ ದರವು ಋಣಾತ್ಮಕವಾಗಿ ಶೇ.5.83ರಷ್ಟು ಇಳಿಕೆ ಕಂಡಿತು. ಆದರೂ, ಇದು 2021-22 ರಲ್ಲಿ ಶೇ. 9.05 ಹಾಗೂ 2022-23ರಲ್ಲಿ ಶೇ.7ರಷ್ಟು ಬೆಳವಣಿಗೆ ಕಂಡಿದ್ದು ವಿಶೇಷ. ಭಾರತೀಯರ ತಲಾದಾಯವು ಜಿಡಿಪಿ ಅನುಸಾರವೇ ಏರಿಳಿತ ಕಂಡಿತು.

    ಕಳೆದ ಒಂಬತ್ತು ವರ್ಷಗಳಲ್ಲಿ ಮೂಲಸೌಕರ್ಯವು ಮೋದಿ ಸರ್ಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ. ರಸ್ತೆ, ರೈಲು ಮಾರ್ಗ, ವಿಮಾನ ನಿಲ್ದಾಣ, ಮೂಲಸೌಕರ್ಯ ಯೋಜನೆಗಳು ಸಂಖ್ಯೆ ಮತ್ತು ಗಾತ್ರದಲ್ಲಿ ವ್ಯಾಪಕ ಹೆಚ್ಚಳ ಕಂಡಿವೆ. ದೇಶದ ಒಟ್ಟು ಹೆದ್ದಾರಿಗಳ ಉದ್ದವು 2014-15 ರಲ್ಲಿ 97,830 ಕಿಮೀಗಳಿಂದ 2022ರ ಡಿಸೆಂಬರ್ ಅಂತ್ಯದ ವೇಳೆಗೆ 1,44,955 ಕ್ಕೆ ಏರಿದೆ. ಹೆದ್ದಾರಿ ನಿರ್ವಣದಲ್ಲಿ ಇದು ಬಹುದೊಡ್ಡ ಯಶೋಗಾಥೆಯೇ ಆಗಿದೆ.

    ಕಳೆದ ಒಂಬತ್ತು ವರ್ಷಗಳಲ್ಲಿ ಎನ್​ಡಿಎ ಸರ್ಕಾರ ಎದುರಿಸಿದ ದೊಡ್ಡ ಸವಾಲು ಎಂದರೆ ಕೋವಿಡ್ ಸಾಂಕ್ರಾಮಿಕ ರೋಗ. ಆದರೂ ಆರೋಗ್ಯ ವೆಚ್ಚವು (ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ) ದೊಡ್ಡ ಬದಲಾವಣೆಯನ್ನು ಕಂಡಿಲ್ಲ ಎಂಬುದನ್ನು ಅಂಕಿ-ಅಂಶಗಳು ಸೂಚಿಸುತ್ತವೆ. ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿರುವುದರ ಫಲಿತ ಇದಾಗಿದೆ.

    ಆರೋಗ್ಯ ವೆಚ್ಚದಂತೆಯೇ ಶಿಕ್ಷಣದ ವೆಚ್ಚವೂ ಕಡಿಮೆಯಾಗಿದೆ. ಹೊಸ ಶಿಕ್ಷಣ ನೀತಿಯ ಪರಿಚಯದೊಂದಿಗೆ ಶಿಕ್ಷಣ ಕ್ಷೇತ್ರವು ದೊಡ್ಡ ಸುಧಾರಣೆಗೆ ಸಾಕ್ಷಿಯಾಗಿದ್ದರೂ, ಕಳೆದ ಒಂಬತ್ತು ವರ್ಷಗಳಲ್ಲಿ ಶಿಕ್ಷಣದ ಮೇಲಿನ ವೆಚ್ಚವು (ಜಿಡಿಪಿಯ ಶೇಕಡಾವಾರು) 2.8-2.9 ಪ್ರತಿಶತ ವ್ಯಾಪ್ತಿಯಲ್ಲಿಯೇ ಉಳಿದಿದೆ.

    ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎನ್​ಆರ್​ಇಜಿಎಸ್) ಫಲಾನುಭವಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಸಂಕಷ್ಟದ ಸಂಕೇತವಾಗಿದೆ. 2014-15 ರಲ್ಲಿ 4.14 ಕೋಟಿ ಕುಟುಂಬಗಳು ಗ್ರಾಮೀಣ ಉದ್ಯೋಗ ಯೋಜನೆಯನ್ನು ಪಡೆದುಕೊಂಡಿದ್ದರೆ, ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕ ವಲಸಿಗರು ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದರಿಂದ ಈ ಸಂಖ್ಯೆ ಉತ್ತುಂಗಕ್ಕೇರಿ 2020-21ರಲ್ಲಿ 7.55 ಕೋಟಿಗೆ ತಲುಪಿತು. 2021-22 ರಲ್ಲಿ 7.25 ಕೋಟಿಗೆ ಸ್ವಲ್ಪ ಇಳಿಮುಖವಾಯಿತು. ಆದರೂ ಇದು 2022-23ರಲ್ಲಿ 6.18 ಕೋಟಿಗೆ ತಲುಪಿದೆ.

    ಜನ್-ಧನ್, ಆಧಾರ್, ಮೊಬೈಲ್ ಆಧರಿಸಿದ ನೇರ ಲಾಭ ವರ್ಗಾವಣೆ ಯೋಜನೆಗಳನ್ನು ಜಾರಿಗೊಳಿಸಿತು. 2014 ಮತ್ತು 2023ರ ನಡುವೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ 49 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಜತೆಗೆ, ಸ್ವಚ್ಛ ಭಾರತ್ ಮಿಷನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಗಳಂತಹ ಕಲ್ಯಾಣ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವ ಪ್ರಮಾಣದಲ್ಲಿ ಅನುಷ್ಠಾನ ಕಂಡಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಆಹಾರಧಾನ್ಯಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದಾಗಿ ನೇರ ಫಲಾನುಭವಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ.

    ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts