More

    ಸಂಪಾದಕೀಯ | ಮುನ್ನೆಚ್ಚರಿಕೆ ಅಗತ್ಯ; ಕರೊನಾ ತೀವ್ರತೆ ಹೆಚ್ಚುವ ಮುನ್ನವೇ ಸೋಂಕು ಪ್ರಸರಣ ತಡೆಯೋಣ

    ದೆಹಲಿ, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ಇದು ನಾಲ್ಕನೇ ಅಲೆಯನ್ನು ತಂದೊಡ್ಡಬಹುದೇ ಎಂಬ ಆತಂಕವೂ ಶುರುವಾಗಿದೆ. ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದ ಪರಿಣಾಮ ಮೂರನೇ ಅಲೆ ಭಾರತಕ್ಕೆ ಅಷ್ಟೇನು ಹಾನಿ ಮಾಡಲಿಲ್ಲ. ಆದರೆ, ಈ ಬಾರಿ ಸೌಮ್ಯ ಲಕ್ಷಣಗಳು ಮುಂದುವರಿಯಲಿವೆಯೇ ಅಥವಾ ಎರಡನೇ ಅಲೆ ಹೊತ್ತಿನ ಸ್ಥಿತಿ ಮರುಕಳಿಸಲಿದೆಯೇ ಎಂಬುದು ಸ್ಪಷ್ಟಗೊಂಡಿಲ್ಲ. ಅದೇನಿದ್ದರೂ, ಆರಂಭದ ಹಂತದಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಸಂಭಾವ್ಯ ಅಪಾಯವನ್ನು ತಗ್ಗಿಸಬಹುದು.

    ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಕರೊನಾ ನಾಲ್ಕನೇ ಅಲೆ ಕಟ್ಟಿಹಾಕಲು ಪತ್ತೆ, ಪರೀಕ್ಷೆ, ನಿಗಾ, ಚಿಕಿತ್ಸೆ- ಈ ನಾಲ್ಕಂಶದ ಸೂತ್ರ ಪಾಲಿಸಲು ಪ್ರಧಾನಿ ಕರೆ ನೀಡಿದ್ದಾರೆ. ಮುಖ್ಯವಾಗಿ, ಆರ್ಥಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಇತ್ತೀಚೆಗಷ್ಟೇ ಹಳಿಗೆ ಮರಳುತ್ತಿರುವುದರಿಂದ ಅನಗತ್ಯ ನಿರ್ಬಂಧಗಳನ್ನು ಹೇರದಂತೆ ಸೂಚಿಸಿದ್ದಾರೆ. ಈ ಮೂಲಕ ಆರ್ಥಿಕ ಆರೋಗ್ಯಕ್ಕೂ ಸರ್ಕಾರ ಸಮಾನ ಆದ್ಯತೆ ನೀಡಿದೆ. 12 ವರ್ಷದವರೆಗಿನ ಎಳೆಯರಿಗೆ ಲಸಿಕೆ ನೀಡುವ ಅಭಿಯಾನ ತೀವ್ರಗೊಳಿಸುವಂತೆಯೂ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಸನ್ನದ್ಧ ಸ್ಥಿತಿ, ಅಗತ್ಯ ಆರೋಗ್ಯ ಪರಿಕರಗಳ ವ್ಯವಸ್ಥೆ ಈಗಿನ ಅಗತ್ಯ.

    ಕರ್ನಾಟಕದಲ್ಲಿಯೂ ಪ್ರತಿದಿನ 30 ಸಾವಿರ ಟೆಸ್ಟಿಂಗ್​ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಠಿಣ ನಿರ್ಬಂಧ ಹೇರದೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಮುಂದಾಗಿದ್ದು, ಮುಖಗವಸು ಧರಿಸುವುದನ್ನು, ಸುರಕ್ಷಿತ ಅಂತರ ಪಾಲನೆಯನ್ನು ಮತ್ತೆ ಕಡ್ಡಾಯಗೊಳಿಸಲಾಗಿದೆ. ಕರೊನಾದ ಹೊಸ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಹಿಂದಿನ ಅನುಭವಗಳೇ ಪ್ರಮುಖ ಆಧಾರವಾಗಿವೆ.

    ಸಾರಾಸಗಟು ನಿರ್ಬಂಧ ಹೇರುವ ಬದಲು ನಿರ್ದಿಷ್ಟ ಪ್ರದೇಶಕ್ಕೆ ನಿಯಂತ್ರಣ ಕ್ರಮಗಳನ್ನು ಅನ್ವಯಿಸಿ ಸೋಂಕು ಹೆಚ್ಚು ಹರಡದಂತೆ ನೋಡಿಕೊಳ್ಳಲು ಪ್ರಾಶಸ್ಱ ನೀಡಿರುವುದು ಒಳ್ಳೆಯ ಕ್ರಮ. ಕರೊನಾ ಸೋಂಕಿನ ಹೊಸ ತಳಿಗಳು ತೀವ್ರ ಸ್ವರೂಪ ಪಡೆದಾಗ, ಪ್ರಸರಣ ಹೆಚ್ಚುತ್ತದೆ ಎಂಬುದನ್ನು ತಜ್ಞರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಇದು ಕೊನೆಯ ಅಲೆ ಆಗುವುದೇ ಅಥವಾ ಭವಿಷ್ಯದಲ್ಲಿ ಇನ್ನುಷ್ಟು ಅಲೆಗಳು ಬರಲಿವೆಯೇ ಎಂಬದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಕರೊನಾದ ಮೂರು ಅಲೆಗಳು ವೈದ್ಯಕೀಯ ವ್ಯವಸ್ಥೆ ಹೇಗೆ ಸನ್ನದ್ಧವಾಗಿ ಇರಬೇಕು ಎನ್ನುವ ಜತೆಗೆ ಜನಸಾಮಾನ್ಯರು ವಹಿಸಬೇಕಾದ ಎಚ್ಚರಿಕೆಗಳನ್ನು ಸಹ ಕಲಿಸಿಕೊಟ್ಟಿವೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ನಿಷ್ಕಾಳಜಿಯಂತೂ ಬೇಡವೇ ಬೇಡ. ದೇಶದಲ್ಲಿ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದಿರುವುದರಿಂದ ಕರೊನಾ ಕಟ್ಟಿ ಹಾಕಲು ಸಾಧ್ಯವಾಗಿದೆ. ಎಳೆಯರಿಗೆ ನೀಡಲಾಗುತ್ತಿರುವ ಲಸಿಕೆ ಮತ್ತು ಬೂಸ್ಟರ್ ಡೋಸ್ ಅಭಿಯಾನವು ತನ್ನ ಗುರಿ ತಲುಪಲಿ. ಸರ್ಕಾರದ ಕ್ರಮಗಳೊಂದಿಗೆ ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts