More

    ಮಹತ್ವದ ನಿರ್ಧಾರಗಳು; ಈಗಿನ ಸ್ಥಿತಿಯಲ್ಲಿ ಕೋವಿಡ್ ಕರ್ಫ್ಯೂ ಅನಿವಾರ್ಯ

    ಸೋಮವಾರ ನಡೆದ ರಾಜ್ಯ ಸಚಿವ ಸಂಪುಟದ ಸಭೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಅದರಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಶಿಕ್ಷಕರ ವರ್ಗಾವಣೆ ನಿಟ್ಟಿನಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ದೊರೆತಿದೆ. ಈ ಮೂಲಕ ವರ್ಗಾವಣೆಗೆ ಕಾಯುತ್ತಿದ್ದ ಸಾವಿರಾರು ಶಿಕ್ಷಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ, ಎಲ್ಲ ಬಗೆಯ ಚುನಾವಣೆಗಳನ್ನು ಮುಂದೂಡಲು ಶಿಫಾರಸು ಮಾಡಲು ತೀರ್ವನಿಸಲಾಗಿದೆ. ಲಸಿಕೆಗೆ ಸಂಬಂಧಪಟ್ಟ ಗೊಂದಲಕ್ಕೂ ತೆರೆ ಎಳೆಯಲಾಗಿದೆ. 45 ವರ್ಷಕ್ಕೂ ಮೇಲ್ಪಟ್ಟ ನಾಗರಿಕರಿಗೆ ಕೇಂದ್ರ ಸರ್ಕಾರ ಈಗಾಗಲೇ ಉಚಿತವಾಗಿ ಲಸಿಕೆ ನೀಡುತ್ತಿದೆ. ಮೇ 1ರಿಂದ 18ರಿಂದ 45 ವರ್ಷ ವಯಸ್ಸಿನ ನಾಗರಿಕರಿಗೆ ಉಚಿತ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿನ ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

    ಕರೊನಾ ಎರಡನೇ ಅಲೆಯ ಆರ್ಭಟ ಮುಂದುವರಿದಿದೆ. ಕರ್ನಾಟಕದಲ್ಲಿನ ಸ್ಥಿತಿ ಮಹಾ ರಾಷ್ಟ್ರವನ್ನೂ ಮೀರಿಸುವಂತಿದೆ ಎಂಬ ವಾಸ್ತವವನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಈ ನಿಟ್ಟಿನಲ್ಲಿ ಇಂದು ರಾತ್ರಿ 9 ಗಂಟೆಯಿಂದ ಮೇ 10ರವರೆಗೆ ಕೋವಿಡ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಅಂದರೆ ಜೀವನಾವಶ್ಯಕ ವಸ್ತುಗಳು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಸ್ತಬ್ಧವಾಗಲಿವೆ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ದಿನಸಿ, ಹಾಲು, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಸರ್ಕಾರಿ ಸಾರಿಗೆ ಬಸ್​ಗಳು ಸೇರಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಕರೊನಾ ಸೋಂಕಿನ ಪ್ರಸರಣದ ವೇಗವನ್ನು ತಗ್ಗಿಸಲು ಕನಿಷ್ಠ ಎರಡು ವಾರಗಳ ಲಾಕ್​ಡೌನ್ ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದರು. ಬೆಂಗಳೂರುವೊಂದರಲ್ಲೇ ಪ್ರತಿನಿತ್ಯ 15 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ, ಮೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡವೂ ಜಾಸ್ತಿಯಾಗಲಿದೆ. ಎರಡು ವಾರ ಲಾಕ್​ಡೌನ್ ಮಾಡದಿದ್ದರೆ ಪರಿಸ್ಥಿತಿ ನಿಯಂತ್ರಿಸುವುದು ತುಂಬ ಕಷ್ಟ ಎಂಬ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

    ಮತ್ತೆ ಜನಜೀವನ ಸ್ತಬ್ಧವಾಗಬಾರದು; ಕಳೆದ ವರ್ಷದ ಲಾಕ್​ಡೌನ್​ನಿಂದ ಸಾಕಷ್ಟು ಹಾನಿ ಸಂಭವಿಸಿದೆ ಎಂಬ ಕಾಳಜಿಯಿಂದಲೇ ಸರ್ಕಾರ ಮೊದಲು ಕೆಲ ನಿಯಂತ್ರಣ ಕ್ರಮಗಳನ್ನು ಘೋಷಿಸಿತು, ಬಳಿಕ ಬಿಗಿ ನಿಯಮಗಳನ್ನು ಜಾರಿಗೆ ತಂದಿತು. ಆದರೆ, ಸೋಂಕಿನ ಎರಡನೇ ಅಲೆ ಸೃಷ್ಟಿಸುತ್ತಿರುವ ಹಾನಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು 14 ದಿನಗಳ ಕೋವಿಡ್ ಕರ್ಫ್ಯೂ ಘೋಷಿಸಲಾಗಿದೆ. ನಿಸ್ಸಂಶಯವಾಗಿ ವ್ಯಾಪಾರ-ವಹಿವಾಟಿಗೆ ತೊಂದರೆ ಆಗಲಿದೆ. ಆದರೆ, ಜನರ ಪ್ರಾಣರಕ್ಷಣೆಗೆ ಮೊದಲ ಆದ್ಯತೆ ನೀಡಿ ಇಂಥದ್ದೊಂದು ನಿರ್ಣಯಕ್ಕೆ ಬರಲಾಗಿದೆ. ಅಷ್ಟಕ್ಕೂ ಪರಿಸ್ಥಿತಿ ಕೈಮೀರಿದ ಮೇಲೆ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಪ್ರಯೋಜನವಿಲ್ಲ. ಹಾಗಾಗಿ, ಜನರು ಈಗಿನ ಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡು, ನಿಯಮಗಳನ್ನು ಪಾಲಿಸುವುದು ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts