More

    ಸಂಪಾದಕೀಯ: ಮಕ್ಕಳ ಆರೋಗ್ಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಅಗತ್ಯ

    ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ತಗ್ಗಿದೆ. ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಆನ್​ಲೈನ್ ತರಗತಿಗಳಿಗೆ ಸೀಮಿತವಾಗಿರುವ ಮಕ್ಕಳು ಈ ಕಲಿಕಾ ಹಂತದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಅಲ್ಲದೆ, ಆನ್​ಲೈನ್ ತರಗತಿಗಳಿಂದ ಕೆಲ ಅಡ್ಡಪರಿಣಾಮಗಳಾಗಿದ್ದು, ಮಕ್ಕಳು ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ್ದಿದೆ. ಭೌತಿಕ ತರಗತಿಗಳನ್ನು ಆರಂಭಿಸುವಂಥ ಸ್ಥಿತಿ ಇಲ್ಲದ್ದರಿಂದ ಅನಿವಾರ್ಯವಾಗಿ ಆನ್​ಲೈನ್ ಕಲಿಕೆಗೆ ಹೊಂದಿಕೊಳ್ಳಬೇಕಿತ್ತು. ದೀರ್ಘಾವಧಿಯಿಂದ ಶಾಲೆಗಳು ಇಲ್ಲದ್ದರಿಂದ ಬಾಲಕಾರ್ವಿುಕ ಪದ್ಧತಿ, ಬಾಲ್ಯವಿವಾಹದಂಥ ಪಿಡುಗು ಹೆಚ್ಚುತ್ತಿರುವ ಬಗ್ಗೆ ಡಾ.ದೇವಿಶೆಟ್ಟಿ ನೇತೖತ್ವದ ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಮಕ್ಕಳ, ಶಿಕ್ಷಕರ ಸುರಕ್ಷತೆ ಖಾತ್ರಿ ಪಡಿಸಿ, ಶೀಘ್ರ ಶಾಲೆಗಳನ್ನು ಆರಂಭಿಸುವುದು ಸೂಕ್ತ ಎಂಬ ಸಲಹೆಯನ್ನೂ ನೀಡಿದೆ. ಅನ್​ಲಾಕ್ ಪ್ರಕ್ರಿಯೆಯಲ್ಲಿ ವ್ಯಾಪಾರ-ವಹಿವಾಟು ಆರಂಭ ವಾಗಿದ್ದು, ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಶಾಲಾರಂಭದ ಬಗ್ಗೆ ಸೋಮವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಮತ್ತೊಂದೆಡೆ, ಮೂರನೇ ಅಲೆಯ ಭೀತಿ ಕಾಡುತ್ತಿರುವುದರಿಂದ ಸಂದಿಗ್ಧ ಸ್ಥಿತಿ ಸೃಷ್ಟಿಯಾಗಿದೆ.

    ಕರೊನಾ 3ನೇ ಅಲೆ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲಾ ತರಗತಿಗಳ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳು ಆರೋಗ್ಯ ವಿಮೆ ಹೊಂದುವುದನ್ನು ಕಡ್ಡಾಯ ಮಾಡಬೇಕೆಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದೆ. ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಸೇರಿದಂತೆ 77,041 ಶಾಲೆಗಳಿದ್ದು, ಇದರಲ್ಲಿ 1.03 ಕೋಟಿ ವಿದ್ಯಾರ್ಥಿಗಳು ಹಾಗೂ 4.21 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಇವರನ್ನು ವಿಮೆ ವ್ಯಾಪ್ತಿಗೆ ತರುವುದು ಹೇಗೆ? ಅದರ ಹೊಣೆಯನ್ನು ಯಾರು ವಹಿಸಿಕೊಳ್ಳಬೇಕು ಎಂಬ ಜಿಜ್ಞಾಸೆಯೂ ಕಾಡುತ್ತಿದೆ. ಕೆಲ ಪ್ರತಿಷ್ಠಿತ ಶಾಲೆಗಳು ಮಕ್ಕಳಿಗೆ ಆರೋಗ್ಯ/ಕರೊನಾ ವಿಮೆ ಮಾಡಿಸಿವೆಯಾದರೂ, ಎಲ್ಲರೂ ಈ ವ್ಯಾಪ್ತಿಗೆ ಬರಬೇಕಾದರೆ ಸರ್ಕಾರವೇ ಸೂಕ್ತ ವ್ಯವಸ್ಥೆ ರೂಪಿಸಬೇಕಾಗುತ್ತದೆ. ಕಾಲೇಜ್ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಬಳಿಕ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ.

    ಮಕ್ಕಳನ್ನು ಭೌತಿಕ ತರಗತಿಗಳಿಗೆ ಕಳುಹಿಸಲು ಪಾಲಕರಿಗೆ ಆತಂಕ. ಸುರಕ್ಷಿತ ಅಂತರ ಕಾಯ್ದುಕೊಂಡು, ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ. ಒಂದು ವೇಳೆ ಮಗು ಸೋಂಕಿಗೆ ಒಳಗಾದರೆ ಅದರ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಕರ ಎಂಬುದು ಪಾಲಕರ ಚಿಂತೆ. ಹಾಗಂತ, ಶಾಲೆಗಳನ್ನು ಆರಂಭಿಸದಿದ್ದರೆ ಈ ಶೈಕ್ಷಣಿಕ ವರ್ಷವೂ ಡೋಲಾಯಮಾನವಾಗಿ, ಮಕ್ಕಳು ಪರಿಣಾಮಕಾರಿ ಕಲಿಕೆಯಿಂದ ವಂಚಿತರಾಗುತ್ತಾರೆ. ಈ ನಿಟ್ಟಿನಲ್ಲಿ ತಜ್ಞರು ನೀಡಿರುವ ವರದಿಯಲ್ಲಿ ಪರಿಹಾರದ ಹಾದಿಯೂ ಇದೆ. ಮಕ್ಕಳು ಮತ್ತು ಶಿಕ್ಷಕರಿಗೆ ಸಾಮೂಹಿಕ ವಿಮೆ ಮಾಡಿಸಿದರೆ, ಅವರಲ್ಲಿ ಧೈರ್ಯ ಮೂಡಬಹುದು. ಈ ಮೂಲಕ ಶಾಲಾರಂಭಕ್ಕೆ ಇರುವ ಅಡ್ಡಿಯನ್ನೂ ನಿವಾರಿಸಿಕೊಳ್ಳಬಹುದು. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಜತೆಗೂ ಚರ್ಚೆ ನಡೆಸಿ, ಸೂಕ್ತ ಯೋಜನೆ ರೂಪಿಸುವುದು ಅಗತ್ಯ. ಏಕೆಂದರೆ, ಮಕ್ಕಳ ಆರೋಗ್ಯ ರಕ್ಷಣೆಯೇ ಮೊದಲ ಆದ್ಯತೆಯಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts