More

    ಹಕ್ಕು ಮತ್ತು ಕರ್ತವ್ಯ: ಸಾರ್ವಜನಿಕ ಆಸ್ತಿ ಹಾನಿ ಪ್ರತಿಭಟನಾಕಾರರಿಗೆ ದಂಡ

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್​ಆರ್​ಸಿ) ವಿರುದ್ಧ ಪ್ರತಿಭಟನೆ ಕೈಗೊಂಡು ಹಿಂಸಾಚಾರ ನಡೆಸಿದ್ದ ಪ್ರತಿಭಟನಾಕಾರರಿಗೆ ಉತ್ತರ ಪ್ರದೇಶದ ನ್ಯಾಯಮಂಡಳಿಯೊಂದು ವಿಶಿಷ್ಟ ರೂಪದ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಉತ್ತರಪ್ರದೇಶದಲ್ಲಿ ಜಾರಿಗೊಳಿಸಲಾದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಾತಿ ಕಾಯ್ದೆ 2020ರ ಅಡಿ ತೀರ್ಪು ನೀಡಲಾಗಿರುವ ಮೊದಲ ಪ್ರಕರಣ ಕೂಡ ಇದಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಕ್ಕಾಗಿ 4,27,439 ರೂಪಾಯಿ ಪಾವತಿಸುವಂತೆ ಪ್ರತಿಭಟನಾಕಾರರಿಗೆ ಕೋರ್ಟ್ ಆದೇಶಿಸಿದೆ.

    ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ವಸೂಲಾತಿ ಕಾಯ್ದೆಯನ್ನು 2020ರಲ್ಲಿ ಉತ್ತರ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದು ಸಾಬೀತಾದರೆ ಈ ನಷ್ಟವನ್ನು ಪ್ರತಿಭಟನಾಕಾರರಿಂದಲೇ ಭರ್ತಿ ಮಾಡಿಕೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರನುಸಾರವಾಗಿಯೇ, ಉತ್ತರ ಪ್ರದೇಶದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಮರುಪಡೆಯುವಿಕೆ ಕ್ಲೇಮ್ಸ್ ನ್ಯಾಯಮಂಡಳಿಯ ಮೀರತ್ ವಿಭಾಗವು 2019 ರಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ಹಾನಿ ಕಾರಣಕ್ಕಾಗಿ 86 ವ್ಯಕ್ತಿಗಳಿಂದ ದಂಡ ಪಾವತಿಸಿಕೊಳ್ಳುವಂತೆ ಆದೇಶ ನೀಡಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮುಸ್ಲಿಮೇತರ ಧಾರ್ವಿುಕ ಸಮುದಾಯಗಳ ನಿರಾಶ್ರಿತರಿಗೆ ಪೌರತ್ವ ಒದಗಿಸುವುದಕ್ಕೆ ಸಂಬಂಧಿಸಿದ ಕಾನೂನು ಸಿಎಎ. ಇಂತಹ ನಿರಾಶ್ರಿತರು ಆರು ವರ್ಷಗಳ ಕಾಲ ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು 2014 ಡಿಸೆಂಬರ್ 31 ರೊಳಗೆ ದೇಶವನ್ನು ಪ್ರವೇಶಿಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

    ಈ ಕಾಯ್ದೆ ಜಾರಿಯ ಜತೆಯಲ್ಲಿಯೇ, ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿರುವ ವಿದೇಶಿಯರನ್ನು ಗುರುತಿಸುವ ಉದ್ದೇಶದಿಂದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್​ಆರ್​ಸಿ) ಆರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಉತ್ತರಪ್ರದೇಶದ ಸೇರಿ ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ನಡೆದವು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅನೇಕ ಕಡೆಗಳಲ್ಲಿ ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡುವ ಮೂಲಕ ಹಿಂಸಾಚಾರ ನಡೆಸಿದರು. ಈ ಹಿನ್ನೆಲೆಯಲ್ಲಿ ಆಸ್ತಿ ನಷ್ಟ ಭರ್ತಿ ಮಾಡಿಕೊಳ್ಳುವ ವಿಶಿಷ್ಟ ಕಾಯ್ದೆ ರೂಪಿಸಿದ ಉತ್ತರಪ್ರದೇಶ ಸರ್ಕಾರವು, ಈ ಕಾಯ್ದೆಯಡಿ ಪ್ರಕರಣಗಳ ತ್ವರಿತ ವಿಚಾರಣೆಯ ಉದ್ದೇಶದಿಂದ ಮೀರತ್, ಲಖನೌ ಮತ್ತು ಪ್ರಯಾಗ್​ರಾಜ್​ನಲ್ಲಿ ಮೂರು ವಿಭಾಗೀಯ ನ್ಯಾಯಮಂಡಳಿಗಳನ್ನು ಕೂಡ ಸ್ಥಾಪಿಸಿದೆ. ಭಾರತದ ಸಂವಿಧಾನದ ಅನುಸಾರ ಪ್ರತಿಭಟನೆ ಮಾಡುವ ಹಕ್ಕು ಎಲ್ಲ ನಾಗರಿಕರಿಗೂ ಇದೆ. ಆದರೆ, ಅದನ್ನು ಶಾಂತಿಯುತ ರೀತಿಯಲ್ಲಿ ಮಾಡಬೇಕಾದ ಕರ್ತವ್ಯವೂ ಇದೆ.

    ಹಕ್ಕು ಎಂಬುದು ಸ್ವೇಚ್ಛಾಚಾರ ಆಗಬಾರದು. ಸಾರ್ವಜನಿಕ ಆಸ್ತಿ ನಷ್ಟದಿಂದ ಯಾರಿಗೂ ಲಾಭವಿಲ್ಲ. ಹಿಂಸಾಚಾರದ ಸಂದರ್ಭದಲ್ಲಿ ಅಮಾಯಕರ ಸಾವು ಸಂಭವಿಸಿದರಂತೂ ಆ ನಷ್ಟ ತುಂಬಲು ಯಾರಿಂದಲೂ ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಜಾರಿಗೊಳಿಸಿರುವ ಕಾಯ್ದೆ ಹಾಗೂ ಅದರ ಅಧಾರದ ಮೇಲೆ ನ್ಯಾಯಮಂಡಳಿ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಬಂದ್ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯಾದಲ್ಲಿ ಬಂದ್​ಗೆ ಕರೆಕೊಟ್ಟವರಿಂದಲೇ ವಸೂಲು ಮಾಡಬೇಕೆಂಬ ಚರ್ಚೆ ಸಹ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

    ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

    ನಿಧಿ ಇದೆ ಎಂದು ಕನಸಲ್ಲಿ ಬಂದು ಹೇಳಿದ ದೇವರು!; ಹಾಗೆಂದು ಕಾಡಲ್ಲಿ ಬಾವಿ ತೋಡಲು ಹೋದರು.. ಆಮೇಲಾಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts