More

    ಉತ್ತಮ ನಿರ್ಧಾರ: ಹೊರಗುತ್ತಿಗೆಯಲ್ಲಿನ ಅವ್ಯವಹಾರಗಳು ನಿಲ್ಲಬೇಕು

    ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಗ್ರಾಮ ಪಂಚಾಯಿತಿ ನೌಕರರ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ವರ್ಷದ ಫೆಬ್ರವರಿಯಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದ್ದರು. ಆ ಬಳಿಕವೂ ಸರ್ಕಾರದ ಮೇಲೆ ಒತ್ತಡ ಹೇರುತ್ತ ಬಂದಿದ್ದರು. ಕನಿಷ್ಠ ವಿದ್ಯಾರ್ಹತೆ ನಿಯಮ ಕೈಬಿಟ್ಟು, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಾನ, ಸ್ವಚ್ಛತಾಗಾರರು, ನೀರುಗಂಟಿ ಸೇರಿ 11,543 ಸಿಬ್ಬಂದಿ ನೇಮಕಕ್ಕೆ ಘಟನೋತ್ತರ ಅನುಮೋದನೆ ನೀಡಿರುವ ಸರ್ಕಾರ, 2017ಕ್ಕಿಂತ ಮುಂಚೆ ನೇಮಕಗೊಂಡಿರುವ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಲಿದೆ. ಈ ನಿರ್ಧಾರದಿಂದ ಸಿಬ್ಬಂದಿಗೆ ಉದ್ಯೋಗಭದ್ರತೆ, ಜೀವನಭದ್ರತೆ ಕಲ್ಪಿಸಿದಂತಾಗಿದೆ. ಗ್ರಾಮೀಣ ಜನರಿಗೆ ಸರ್ಕಾರದ ಸೌಲಭ್ಯಗಳನ್ನು, ಮೂಲಸೌಕರ್ಯಗಳನ್ನು, ಯೋಜನೆಗಳನ್ನು ತಲುಪಿಸುವಲ್ಲಿ ಈ ಸಿಬ್ಬಂದಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

    ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಇತರ ಇಲಾಖೆಗಳಲ್ಲಿ ಕೂಡ ಇದೆ. ಮುಖ್ಯವಾಗಿ, ಪೌರಕಾರ್ವಿುಕರು ಈ ನಿಟ್ಟಿನಲ್ಲಿ ದನಿ ಎತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿನ ಸಿ ಮತ್ತು ಡಿ ಹಂತದ ಸಿಬ್ಬಂದಿಯನ್ನು ಕ್ರಮೇಣವಾಗಿ ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೂಕ್ತವೇ. ಹೊರಗುತ್ತಿಗೆ ಆಧಾರದ ನೇಮಕಾತಿಗಳಲ್ಲಿನ ಭ್ರಷ್ಟಾಚಾರ, ಅವ್ಯವಹಾರ, ಶೋಷಣೆಯ ವಿವಿಧ ಮುಖಗಳು ಆಗಾಗ ಅನಾವರಣಗೊಳ್ಳುತ್ತಲೇ ಬಂದಿವೆ ಎಂಬುದು ಗಮನಾರ್ಹ. ಸರ್ಕಾರಕ್ಕೂ ವಂಚಿಸಿ, ನೌಕರರಿಗೂ ಅನ್ಯಾಯ ಮಾಡುವ ಇಂಥ ದಂಧೆಗಳಿಂದ ವ್ಯವಸ್ಥೆ ನಷ್ಟವನ್ನೇ ಅನುಭವಿಸಿದೆ. ಕಡಿಮೆ ಸಿಬ್ಬಂದಿಯನ್ನು ನೇಮಿಸಿಕೊಂಡು, ಲೆಕ್ಕದಲ್ಲಿ ಮಾತ್ರ ಹೆಚ್ಚು ಸಿಬ್ಬಂದಿಯನ್ನು ತೋರಿಸಿ. ಇರುವವರಿಂದಲೇ ಜಾಸ್ತಿ ಕೆಲಸ ಮಾಡಿಸುವುದು, ಸಕಾಲಕ್ಕೆ ವೇತನ ಕೊಡದೆ ಸತಾಯಿಸುವುದು, ಸಮರ್ಪಕವಾದ ಸೌಲಭ್ಯಗಳನ್ನು ಒದಗಿಸದಿರುವುದು ಹೀಗೆ ಹಲವು ಅಪಸವ್ಯಗಳು ಬೆಳಕಿಗೆ ಬಂದಿವೆ. ಇದರಿಂದ ನೌಕರರು ಅನುಭವಿಸುತ್ತಿರುವ ಕಷ್ಟಗಳು ಒಂದೇರಡಲ್ಲ.

    ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿಯಲ್ಲಿನ ಅಕ್ರಮ ತಡೆಗಟ್ಟಲು ಸರ್ಕಾರ ಕೆಲ ನಿಯಮಗಳನ್ನು ಬಿಗಿಗೊಳಿಸಿದೆಯಾದರೂ, ಅದರಿಂದ ಪ್ರಯೋಜನ ವಾಗಿಲ್ಲ. ಹೊರಗುತ್ತಿಗೆ ನೇಮಕಾತಿಗಳಲ್ಲಿ ಸರ್ಕಾರ ಆರ್ಥಿಕ ಸಂಪನ್ಮೂಲವನ್ನು ವ್ಯಯಿಸಬೇಕಾಗುತ್ತದೆಯಾದರೂ, ಅದರಿಂದ ದೊರೆಯುವ ಉತ್ಪಾದಕತೆಯ ಪ್ರಮಾಣ ಕಡಿಮೆ. ಹಾಗಾಗಿ, ಹೊರಗುತ್ತಿಗೆ ನೇಮಕಾತಿಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯ ಇದೆ. ಅದಕ್ಕೆ ಪರ್ಯಾಯವಾಗಿ ಇಂಥ ಸಿಬ್ಬಂದಿಯನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಕೆಲಸ ಹಂತಹಂತವಾಗಿ ನಡೆಯಬೇಕಿದೆ. ಈ ಬದಲಾವಣೆಯು ವ್ಯವಸ್ಥೆಯನ್ನು ಕೆಳಹಂತದಲ್ಲಿ ಬಲಗೊಳಿಸುವ ಸಾಧನವಾಗ ಬೇಕು. ಒಟ್ಟಾರೆ, ಸ್ವಚ್ಛತಾ ಸಿಬ್ಬಂದಿ, ಪೌರಕಾರ್ವಿುಕರು ಸೇರಿದಂತೆ ಶ್ರಮಜೀವಿಗಳು ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಎಂಬ ಕಾಳಜಿ ಮುಖ್ಯ.

    ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

    ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts