More

    ತಳಹದಿಗೆ ಬಲ: ಪಂಚಾಯಿತಿ ಚುನಾವಣೆ ಸನಿಹ

    ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಮೊದಲ ಹಂತದಲ್ಲಿ ಡಿ.22ರಂದು ಮತದಾನ ನಡೆಯಬೇಕಿದ್ದು, ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಹೀಗಾಗಿ ಕಣದಲ್ಲಿ ಯಾರ್ಯಾರಿದ್ದಾರೆ ಎಂಬ ಚಿತ್ರಣ ದೊರಕಿದಂತಾಗಿದೆ. ಎರಡನೇ ಹಂತದ ಮತದಾನ ಡಿ.27ರಂದು ನಡೆಯಲಿದ್ದು, 30ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರವು ಒಂದೆಡೆ ಕೇಂದ್ರೀಕೃತವಾಗಿರಬಾರದು, ಹೆಚ್ಚು ಜನರು ಭಾಗವಹಿಸಲು ಅನುವಾಗುವಂತೆ ವಿಕೇಂದ್ರೀಕರಣ ಇರಬೇಕು ಎಂಬ ಪರಿಕಲ್ಪನೆಯ ಭಾಗವಾಗಿ ಪಂಚಾಯತ್ ವ್ಯವಸ್ಥೆಯನ್ನು ನಮ್ಮಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದಾಗಿ ಸುಮಾರು ಶೇ.50ರಷ್ಟು ಸಂಖ್ಯೆಯಲ್ಲಿ ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ದೊರೆತಿರುವುದು ನಮ್ಮ ದೇಶದ ಹೆಗ್ಗಳಿಕೆ. ಹೀಗಾಗಿ ಲಕ್ಷಾಂತರ ಮಹಿಳೆಯರು ಅವಕಾಶ ಪಡೆದಿರುವುದು ವಿಶೇಷ. 3 ಹಂತಗಳ ಪಂಚಾಯಿತಿ ವ್ಯವಸ್ಥೆಯು ಅನೇಕ ಕುಂದುಕೊರತೆಗಳು, ಟೀಕೆಟಿಪ್ಪಣಿಗಳ ನಡುವೆಯೇ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ಕಾಲಕಾಲಕ್ಕೆ ಚುನಾವಣೆಗಳು ನಡೆಯಬೇಕು ಮತ್ತು ಸರ್ಕಾರದಿಂದಲೂ ಪ್ರೋತ್ಸಾಹ ಹಾಗೂ ನೆರವು ಸಿಗಬೇಕು. ಈಚಿನ ವರ್ಷಗಳಲ್ಲಿ ಪಂಚಾಯಿತಿಗಳು ಸ್ವಾವಲಂಬಿ ಆಗಬೇಕು ಎಂಬ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಡೀಕರಣದ ಜವಾಬ್ದಾರಿಯನ್ನು ಅವಕ್ಕೇ ವಹಿಸಲಾಗುತ್ತಿದೆ. ಹೀಗಿದ್ದರೂ, ಹಣಕಾಸಿನ ಅಡಚಣೆ ಇದ್ದೇ ಇದೆಯೆಂಬುದನ್ನು ಅಲ್ಲಗಳೆಯಲಾಗದು.

    ತಳಹದಿಗೆ ಬಲ: ಪಂಚಾಯಿತಿ ಚುನಾವಣೆ ಸನಿಹ

    ಕೆಲವೆಡೆ ಹರಾಜು ಹಾಗೂ ಅವಿರೋಧ ಆಯ್ಕೆಯ ಕಾರಣಕ್ಕೆ ಈ ಸಲದ ಗ್ರಾಪಂ ಚುನಾವಣೆ ಸ್ವಲ್ಪ ಹೆಚ್ಚೇ ಸುದ್ದಿ ಮಾಡಿತ್ತು. ಚುನಾವಣಾ ಕಣದಲ್ಲಿ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ಎಲ್ಲರೂ ಸಹಮತದಿಂದ ಅವಿರೋಧ ಆಯ್ಕೆಗೆ ನಿರ್ಧಾರ ಕೈಗೊಂಡಿದ್ದರೆ ಆ ಮಾತು ಬೇರೆ. ಆದರೆ, ಚುನಾವಣಾ ನೀತಿಸಂಹಿತೆಯನ್ನು ಉಲ್ಲಘಿಸಿ ಇಂಥ ಆಯ್ಕೆಗಳು ನಡೆದಲ್ಲಿ, ತನಿಖೆ ನಡೆಸಿ ಇದು ಸಾಬೀತಾದಲ್ಲಿ ಅಂಥವರ ಸದಸ್ಯತ್ವ ರದ್ದುಪಡಿಸುವುದಾಗಿ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆಯನ್ನು ಕೂಡ ನೀಡಿದೆ. ಕೆಲವೆಡೆ ಒಂದೊಂದು ಸ್ಥಾನಕ್ಕೆ ಲಕ್ಷಾಂತರ ಹಣ ಕೂಗಿ ಆಯ್ಕೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಹರಾಜಿನಂಥ ಅಭ್ಯಾಸಗಳು ಪ್ರಜಾಪ್ರಭುತ್ವದ ತಳಹಂತಕ್ಕೆ ಹೊಂದುವುದಿಲ್ಲ. ಅಲ್ಲದೆ, ಇದರಿಂದ, ಧನಬಲವುಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬಹುದೆಂಬ ಕಾರಣಕ್ಕೆ ಇದಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿರುವುದನ್ನು ಗಮನಿಸಬೇಕು. ಚುನಾವಣೆಯು ಸಮಾನಾವಕಾಶ ಒದಗಿಸಬೇಕು. ಇದು ಪಕ್ಷಾಧಾರಿತವಾಗಿ ನಡೆಯುವುದಿಲ್ಲವಾದ್ದರಿಂದ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಕೆಲ ಮಾರ್ಗಸೂಚಿಗಳನ್ನು ಸಲಹೆ ಮಾಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯು ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಜನರ ಸಕ್ರಿಯ ಸಹಭಾಗಿತ್ವ ಮಹತ್ವದ್ದಾಗುತ್ತದೆ. ಹಾಗೆಂದಾಕ್ಷಣ ಚುನಾವಣೆಯು ಪಕ್ಷಗಳು ಅಥವಾ ಸಿದ್ಧಾಂತದ ಭಿನ್ನತೆ ಹೆಸರಿನಲ್ಲಿ ಗ್ರಾಮಗಳಲ್ಲಿ ಕಂದಕ ನಿರ್ವಿುಸುವುದಕ್ಕೆ ಅವಕಾಶ ಮಾಡಿಕೊಡಬಾರದು. ಚುನಾವಣೆ ಎಂಬುದು ನ್ಯಾಯಸಮ್ಮತ ಆಯ್ಕೆಗೆ ವ್ಯವಸ್ಥೆ ಒದಗಿಸಿದ ಒಂದು ಅವಕಾಶವೇ ಹೊರತು ನಂತರದಲ್ಲಿ ಅದು ಗ್ರಾಮದಲ್ಲಿ ಭಿನ್ನಾಭಿಪ್ರಾಯಕ್ಕೆ ಅಥವಾ ವಾತಾವರಣ ಕೆಡುವುದಕ್ಕೆ ಆಸ್ಪದ ಮಾಡಬಾರದು. ಹಾಗೇನಾದರೂ ಆದಲ್ಲಿ ಮೂಲೋದ್ದೇಶಕ್ಕೇ ಧಕ್ಕೆ ಮಾಡಿದಂತಾಗುತ್ತದೆ. ಒಟ್ಟಿನಲ್ಲಿ ಪಂಚಾಯಿತಿ ವ್ಯವಸ್ಥೆ ಮೂಲಕ ಪ್ರಜಾತಂತ್ರ ಬಲವಾಗುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು; ತಂತಮ್ಮ ಪಾತ್ರವನ್ನು ನಿಭಾಯಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts