More

    ಭಯೋತ್ಪಾದನೆಗೆ ಕಡಿವಾಣ; ಕಾಶ್ಮೀರದಲ್ಲಿ ತಗ್ಗಿದ ಉಗ್ರ ಚಟುವಟಿಕೆ

    ಕರೊನಾ ಹಾವಳಿಯ ನಡುವೆಯೇ ಭಾರತಕ್ಕೆ ಸ್ವಲ್ಪ ಸಮಾಧಾನಕರವಾದ ಸುದ್ದಿಯೊಂದು ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2020ರಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಗಣನೀಯವಾಗಿ ಇಳಿಮುಖವಾಗಿವೆ. ಒಂದು ವರ್ಷದ ಅವಧಿಯಲ್ಲಿ ಹೋಲಿಕೆಯಲ್ಲಿ ಶೇ.64ರಷ್ಟು ಉಗ್ರ ಚಟುವಟಿಕೆ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ಕಾರ್ಯನಿರ್ವಹಣೆಯ ದಾಖಲೆಯಲ್ಲಿ ಉಲ್ಲೇಖವಾಗಿದೆ. ಇದೇ ಸಂದರ್ಭದಲ್ಲಿ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭದ್ರತಾ ಸಿಬ್ಬಂದಿ ಸಾವಿನ ಪ್ರಮಾಣ ಶೇ.29ರಷ್ಟು ತಗ್ಗಿದೆ ಮತ್ತು ನಾಗರಿಕರ ಪ್ರಾಣಹಾನಿ ಪ್ರಮಾಣವೂ ಶೇ.14ರಷ್ಟು ತಗ್ಗಿದೆ ಎಂದು ಗೃಹ ಸಚಿವಾಲಯದ ವರದಿ ತಿಳಿಸಿದೆ. ಹೀಗೆ ಉಗ್ರರ ಉಪಟಳ ಕಡಿಮೆಯಾಗುವಲ್ಲಿ ಹಾಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಬಿಗಿ ನೀತಿ ಮುಖ್ಯ ಕಾರಣ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

    ಸರ್ಕಾರದ ಅಪೇಕ್ಷೆಗೆ ತಕ್ಕಂತೆ ಸೇನೆ ಸಹ ಕಾರ್ಯನಿರ್ವಹಿಸುತ್ತಿರುವುದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಲು ನೆರವಾಗಿದೆ. ಭಯೋತ್ಪಾದನೆಯಿಂದ ಹೆಚ್ಚು ಬಾಧೆಗೊಳಗಾದ ದೇಶಗಳಲ್ಲಿ ಭಾರತವೂ ಒಂದು. ಪಾಕಿಸ್ತಾನವು ತನ್ನ ನೆಲದಿಂದ ಉಗ್ರರಿಗೆ ಪ್ರೋತ್ಸಾಹ, ನೆರವು ನೀಡುತ್ತಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಹೀಗಾಗಿಯೇ ಪಾಕಿಸ್ತಾನವನ್ನು ಅಂತಾ ರಾಷ್ಟ್ರೀಯ ರಂಗದಲ್ಲಿ ಏಕಾಂಗಿಯಾಗಿಸಲು ಭಾರತ ಸತತವಾಗಿ ಪ್ರಯತ್ನಗಳನ್ನು ನಡೆಸುತ್ತಿದ್ದು, ಈ ಕಾರ್ಯದಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನೂ ಕಂಡಿದೆ. ಹೀಗಾಗಿ, ಚೀನಾವನ್ನು ಹೊರತುಪಡಿಸಿ ಅನ್ಯ ದೇಶಗಳ ನೆರವಿಲ್ಲದೆ ಪಾಕಿಸ್ತಾನ ಕಂಗಾಲಾಗಿದೆ. ಆದರೂ, ಭಾರತದ್ವೇಷದಿಂದಾಗಿ ಅದು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ಕುಕೃತ್ಯವನ್ನು ನಿರಂತರವಾಗಿ ಜಾರಿಯಲ್ಲಿಟ್ಟಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಬೇಕೆಂಬುದು ಬಿಜೆಪಿಯ ಬಹುದಿನಗಳ ಬೇಡಿಕೆಯಾಗಿತ್ತು. 2019ರಲ್ಲಿ ಕೇಂದ್ರದಲ್ಲಿ ಸತತ ಎರಡನೇ ಸಲ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಆದ್ಯತೆಯ ಮೇಲೆ ಈ ವಿಷಯ ಕೈಗೆತ್ತಿಕೊಂಡು, ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತು. ಇದರಿಂದಾಗಿ, ಅಲ್ಲಿ ಸಹಜವಾಗಿಯೇ ಒಂದಷ್ಟು ಬದಲಾವಣೆಗಳು ಆದವು. ಇದು ಕೂಡ ಭಯೋತ್ಪಾದನೆಯನ್ನು ತಹಬಂದಿಗೆ ತರುವುದಕ್ಕೆ ಸಹಾಯಕವಾಯಿತು.

    ಇದರ ಜತೆಗೆ, ಸೇನೆಗೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿರುವುದು ಸಹ ಪರಿಸ್ಥಿತಿ ಸುಧಾರಣೆಗೆ ಒಂದು ಮುಖ್ಯ ಕಾರಣ. ಒಂದಿಡೀ ಪ್ರದೇಶವನ್ನು ಇಂಚಿಂಚೂ ಬಿಡದಂತೆ ಜಾಲಾಡಿ ಉಗ್ರರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಸೇನೆ ದೊಡ್ಡ ಪ್ರಮಾಣದಲ್ಲಿ ಕೈಗೊಂಡಿದ್ದು ಪರಿಸ್ಥಿತಿ ಮೇಲೆ ನಿಯಂತ್ರಣ ಸಾಧಿಸುವದಕ್ಕೆ ಅನುಕೂಲವಾಯಿತು. ಈಗ ಸನ್ನಿವೇಶ ಸ್ವಲ್ಪ ಪರವಾಗಿಲ್ಲ ಎಂದು ಮೈಮರೆಯುವ ಹಾಗಿಲ್ಲ. ಚಳಿಯ ವಾತಾವರಣವನ್ನು ಬಳಸಿಕೊಂಡು ಪಾಕ್ ಸೈನಿಕರು ಗಡಿ ದಾಟಿ ಒಳಬಂದಿದ್ದು ಕಾರ್ಗಿಲ್ ಸಮರಕ್ಕೆ ಕಾರಣವಾಗಿತ್ತು ಎಂಬುದನ್ನು ಮರೆಯಲಾಗದು. ಇನ್ನೊಂದೆಡೆ, ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ ನಿರ್ದೇಶನದ ಮೇರೆಗೆ ಪಾಕಿಸ್ತಾನ ಉಗ್ರ ಸಂಘಟನೆಗಳು ಮತ್ತು ಅವುಗಳ ನಾಯಕರ ಮೇಲೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮೇಲ್ನೋಟಕ್ಕೆ ಭಾಸವಾದರೂ ನಿಜವಾಗಿಯೂ ಭಯೋತ್ಪಾದನೆಯನ್ನು ನಿಗ್ರಹಿಸುತ್ತದೆಯೇ ಎಂಬುದು ಶಂಕಾಸ್ಪದ. ಅದರಲ್ಲಿಯೂ, ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್ ಮೇಲೆ ದಾಳಿ ನಡೆಸಿದ ನಂತರವಂತೂ ಪಾಕ್ ಸೇನೆ, ಐಎಸ್​ಐ ಮತ್ತು ಉಗ್ರ ಸಂಘಟನೆಗಳವರು ಮತ್ತಷ್ಟು ಹತಾಶರಾಗಿದ್ದಾರೆ. ಹೀಗಾಗಿ, ಭಾರತದ ಕಟ್ಟೆಚ್ಚರ ಸದಾ ಇರಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts