More

    ಸಂವೇದನೆ ಮುಖ್ಯ; ಕಾಳಜಿ ಹೊಂದಿದ ಯೋಜನೆ

    138 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂಥ ಬೃಹತ್ ದೇಶಕ್ಕೆ ಸಾಮಾಜಿಕ ಕಲ್ಯಾಣ ಯೋಜನೆ, ಕಾರ್ಯಕ್ರಮಗಳ ಅಗತ್ಯ ತುಂಬ ಇದೆ. ಕಾಲಕಾಲಕ್ಕೆ ಸರ್ಕಾರಗಳು ಇಂಥ ಯೋಜನೆಗಳನ್ನು ತರುತ್ತಿವೆ. ಸಮಾಜದ ದುರ್ಬಲ, ಆರ್ಥಿಕವಾಗಿ ಹಿಂದುಳಿದ, ನಿರಾಶ್ರಿತ ವರ್ಗಕ್ಕೆ ಇಂಥ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಿದಾಗ ಸಾಮಾಜಿಕ ನ್ಯಾಯದ ಆಶಯ ಈಡೇರಲು ಸಾಧ್ಯವಾಗುತ್ತದೆ. ಮಕ್ಕಳು, ಮಹಿಳೆಯರು, ನಿರ್ಗತಿಕರಿಗಾಗಿ ಹಲವು ಯೋಜನೆಗಳು ಈಗಾಗಲೇ ಅನುಷ್ಠಾನದಲ್ಲಿವೆ. ಆದರೆ, ವೃದ್ಧ ತಂದೆ-ತಾಯಿಗಳನ್ನು ಮಕ್ಕಳು ಬೀದಿಪಾಲು ಮಾಡುವ ಅಥವಾ ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ದೇಶದಲ್ಲಿ ಹೆಚ್ಚುತ್ತಿರುವ ಪರಿಣಾಮ ವೃದ್ಧರು ಹಲವು ಬಗೆಯ ಸಮಸ್ಯೆ ಎದುರಿಸುವಂತಾಗಿದೆ. ಬಾಳಿನ ಸಂಧ್ಯಾಕಾಲದಲ್ಲಿ ಒಂದಿಷ್ಟು ನೆಮ್ಮದಿಯ ದಿನಗಳನ್ನು ಕಾಣಬೇಕಾದ ಹಿರಿಯ ವಯಸ್ಕರು, ಯಾವುದೇ ಆಸರೆ ಇಲ್ಲದೆ ಹಸಿವೆಯಿಂದ ಬಳಲುವ ಅದೆಷ್ಟೋ ನಿದರ್ಶನಗಳು ಹೃದಯ ಹಿಂಡುತ್ತವೆ. ಓಡಾಡಲು ಚೈತನ್ಯವಿಲ್ಲದೆ, ನಾಲ್ಕು ಹೆಜ್ಜೆಯೂ ಇಡಲಾಗದಂಥ ಸ್ಥಿತಿಯಲ್ಲಿ ಕೆಲವೊಮ್ಮೆ ಹಸಿವೆಯಿಂದಲೇ ವೃದ್ಧರು ಪ್ರಾಣ ಕಳೆದುಕೊಂಡಂಥ ನೋವಿನ ಘಟನೆಗಳು ಸಂಭವಿಸಿದ್ದಿದೆ.

    ಕೇಂದ್ರ ಸರ್ಕಾರ ಇದಕ್ಕಾಗಿ ಪರಿಹಾರವನ್ನು ಹುಡುಕಿದ್ದು, ಉತ್ತಮ ಕಳಕಳಿ ಹೊಂದಿದ ಯೋಜನೆ ಜಾರಿಗೆ ತರಲು ಮುಂದಾಗಿದೆ. ಆಹಾರಕ್ಕೆ ತೊಂದರೆ ಅನುಭವಿಸುತ್ತಿರುವ ವಯೋವೃದ್ಧರಿಗಾಗಿ ಸ್ಟಾರ್ಟಪ್, ಸ್ವಸಹಾಯ ಗುಂಪುಗಳ ಬೆಂಬಲದಿಂದ ಮಧ್ಯಾಹ್ನದ ಬಿಸಿಯೂಟ ಒದಗಿಸಲು ನಿರ್ಧರಿಸಿದೆ. 2050ರ ವೇಳೆಗೆ ದೇಶದ ವೃದ್ಧರ ಸಂಖ್ಯೆ 30 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಅನಾಥರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮತ್ತು ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯದ ಹಿರಿಯ ನಾಗರಿಕರನ್ನು ಗುರುತಿಸಿ, ಅವರಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲು ತೀರ್ವನಿಸಲಾಗಿದೆ. ಪಂಚಾಯಿತಿ, ನಗರಸಭೆ, ಪುರಸಭೆಗಳ ಮೂಲಕ ಇದು ಅನುಷ್ಠಾನಕ್ಕೆ ಬರಲಿರುವುದರಿಂದ, ಆ ನಿಟ್ಟಿನಲ್ಲಿ ಪೂರಕ ಸಿದ್ಧತೆಗಳೂ ಆಗಬೇಕಿವೆ. ಯೋಜನೆ ಅನುಷ್ಠಾನದಲ್ಲಿ ರಾಜ್ಯಗಳ ಪಾತ್ರವು ಮಹತ್ವದ್ದು. ಇಂಥ ಉತ್ತಮ ಆಶಯದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗಬೇಕು, ನಿಜವಾದ ಫಲಾನುಭವಿಗಳನ್ನು ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ಅದಕ್ಕೆ ಸಂಬಂಧಿಸಿದ ವ್ಯವಸ್ಥೆ ಒಂದಿಷ್ಟು ಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕಿದೆ. ಏಕೆಂದರೆ, ಯಾವುದೇ ಪಕ್ಷದ ಸರ್ಕಾರ ಬಂದರೂ ಒಂದಿಷ್ಟು ಉತ್ತಮ ಯೋಜನೆಗಳನ್ನು ತಂದಿರುತ್ತದೆ. ಆದರೆ, ಸರ್ಕಾರ ಬದಲಾದೊಡನೆ ಬಹುತೇಕ ಬಾರಿ ಹಿಂದಿನ ಸರ್ಕಾರದ ಯೋಜನೆಗಳು ರದ್ದಾಗುತ್ತವೆ ಅಥವಾ ಹೆಸರಿಗೆ ಮಾತ್ರ ಸೀಮಿತವಾಗಿ ಉಳಿಯುತ್ತವೆ. ಜನರಿಗೆ ಉಪಯೋಗವಿಲ್ಲದ ಯೋಜನೆಗಳಾಗಿದ್ದಲ್ಲಿ ಅದನ್ನು ಕೈಬಿಟ್ಟರೆ ಅಭ್ಯಂತರವಿಲ್ಲ. ಆದರೆ, ರಾಜಕೀಯ ಲಾಭದಿಂದ ಅಥವಾ ‘ಇದು ಆ ಪಕ್ಷದ/ಸರ್ಕಾರದ ಯೋಜನೆ’ ಎಂಬ ಮತ್ಸರ ಭಾವದಿಂದ ಅದನ್ನು ಸ್ಥಗಿತಗೊಳಿಸಿದರೆ ಅದು ಅಧಿಕಾರದ ದುರುಪಯೋಗ ಮಾತ್ರವಲ್ಲ, ಜನಸಾಮಾನ್ಯರಿಗೆ ಮಾಡುವ ಅನ್ಯಾಯವೂ ಹೌದು. ಹಾಗಾಗಿ, ವೃದ್ಧರ ಆರೈಕೆ ವಿಷಯವನ್ನಾದರೂ ರಾಜಕೀಯ ಕನ್ನಡಕದಿಂದ ನೋಡಬಾರದು. ರಾಜ್ಯಗಳಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ, ಇಂಥ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಅಂಥ ಸಂವೇದನೆಯನ್ನು ನಮ್ಮ ರಾಜಕೀಯ ವ್ಯವಸ್ಥೆ ಅಳವಡಿಸಿಕೊಳ್ಳಲಿ ಎಂಬುದು ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts