More

    ಕಾಯುವಿಕೆ ಅಂತ್ಯ; ಲಸಿಕೆ ಪಡೆಯಲು ಉದಾಸೀನ ಸಲ್ಲ…

    ಕರೊನಾ ಸೋಂಕಿನ ಹಾವಳಿ ಮಾಡಿದ ಹಾನಿ ಅಷ್ಟಿಷ್ಟಲ್ಲ. ಪ್ರಾಣಹಾನಿಯ ಭೀಕರತೆ ಒಂದೆಡೆಯಾದರೆ, ವ್ಯಾಪಾರ-ವಹಿವಾಟು ಸ್ತಬ್ಧಗೊಂಡಿದ್ದರಿಂದ ಆದ ಆರ್ಥಿಕ ನಷ್ಟದ ಭಾರ ಮತ್ತೊಂದೆಡೆ. ಜಗತ್ತು ಅದೆಷ್ಟೇ ಮುಂದುವರಿದಿದ್ದರೂ ಒಂದು ಅಗೋಚರ ವೈರಸ್ ಎದುರು ಅಸಹಾಯಕವಾದಾಗ, ಇದರಿಂದ ಮುಕ್ತಿ ಹೇಗೆ ಎಂಬ ಚಿಂತೆ ವ್ಯಾಪಕವಾಗಿ ಕಾಡಿತು. ಇದಕ್ಕೆ ಚಿಕಿತ್ಸೆಯೇ ಇಲ್ಲ, ಸುರಕ್ಷತಾ ಕ್ರಮಗಳೇ ಮದ್ದು ಎಂಬ ಸಂಗತಿ ಗಾಬರಿಯನ್ನು ಹೆಚ್ಚಿಸಿತ್ತು. ಆದರೆ, ವೈದ್ಯಕೀಯ ರಂಗದ ವಿಜ್ಞಾನಿಗಳು, ಇತರ ಸಂಶೋಧಕರು ಕರೊನಾಗೆ ಲಸಿಕೆ ತರಲು ಶ್ರಮಿಸುತ್ತಲೇ ಇದ್ದರು. ಇದು ಜನಸಾಮಾನ್ಯರಿಗೆ ಲಭ್ಯವಾಗಲು ಕೆಲ ವರ್ಷಗಳೇ ಬೇಕಾಗುತ್ತವೆ ಎಂದು ಆರಂಭದಲ್ಲಿ ಹೇಳಲಾಗಿದ್ದರಿಂದ ವ್ಯಾಕ್ಸಿನ್ ಕುರಿತಾದ ಕುತೂಹಲ ಮಂಕಾಗಿತ್ತು. ಯಾವಾಗ ಲಸಿಕೆ ಬರಲಿದೆಯೋ? ಜನಜೀವನ ಯಾವಾಗ ಮತ್ತೆ ಮೊದಲಿನಂತೆ ಮುಕ್ತವಾಗಿ, ಆತಂಕರಹಿತವಾಗಿ ಹಳಿಗೆ ಮರಳಲಿದೆಯೋ ಎಂಬೆಲ್ಲ ಪ್ರಶ್ನೆ, ಅನುಮಾನಗಳಿಗೆ ಅಂತಿಮ ಉತ್ತರ ದೊರೆತಿದ್ದು, ಲಸಿಕೆಗಾಗಿ ಕಾಯುವಿಕೆ ಅಂತ್ಯಗೊಂಡಿದೆ.

    ಕರೊನಾ ಮಹಾಮಾರಿ ನಿವಾರಣೆಗೆ ಭಾರತದಲ್ಲಿ ತಯಾರಾಗಿರುವ ಎರಡು ಲಸಿಕೆಗಳ (ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್) ತುರ್ತು ಬಳಕೆಗೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದ್ದು ಗೊತ್ತಿರುವಂಥದ್ದೇ. ಇದರ ಬೆನ್ನಲ್ಲೇ ಭಾರತ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಕೂಡ ಭಾನುವಾರ ಈ ಲಸಿಕೆಗಳ ತುರ್ತು ಬಳಕೆಗೆ ಅಧಿಕೃತ ಮುದ್ರೆ ಒತ್ತಿದ್ದು, ಸಂಚಲನಕ್ಕೆ ಕಾರಣವಾಗಿದೆ. ‘ಎರಡೂ ಲಸಿಕೆಗಳು ಶೇ. 110ರಷ್ಟು ಸುರಕ್ಷಿತವಾಗಿವೆ. ಔಷಧ ಸುರಕ್ಷತೆ ಕುರಿತು ಒಂದು ಅಂಶದಷ್ಟು ಅನುಮಾನವಿದ್ದರೂ ನಾವು ಅನುಮೋದನೆ ನೀಡುತ್ತಿರಲಿಲ್ಲ’ ಎಂದು ಡಿಸಿಜಿಐ ವಿ.ಜಿ. ಸೋಮಾನಿ ಹೇಳಿರುವುದು ಗಮನಾರ್ಹ. ಹಾಗಾಗಿ, ಲಸಿಕೆ ಲಭ್ಯವಾಗುವ ದಿನಗಳು ಸಮೀಪಿಸಿವೆ ಎನ್ನಬಹುದು. ಆದರೆ, ಈ ವಿಚಾರದಲ್ಲೂ ರಾಜಕೀಯ ಪಕ್ಷಗಳು ರಾಜಕಾರಣ ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಜನರು ಕೋವಿಡ್ ಮತ್ತು ಅದು ಸೃಷ್ಟಿಸಿದ ಹಲವು ಸಮಸ್ಯೆಗಳಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಆರೋಗ್ಯ, ರಕ್ಷಣೆ, ಮೂಲಸೌಕರ್ಯದಂಥ ಪ್ರಮುಖ ರಂಗಗಳಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ನುಸುಳಬಾರದು. ಹಾಗಾದರೆ, ಅದರಿಂದ ಸಮಾಜದ ಹಿತಕ್ಕೆ ಮಾರಕ. ಲಸಿಕೆಯ ಶ್ರೇಯಸ್ಸು ಪಡೆಯುವುದು ಅಥವಾ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವುದಕ್ಕಿಂತ ಲಸಿಕೆಯ ಸರಿಯಾದ ಮತ್ತು ಸಮರ್ಪಕ ಲಭ್ಯತೆಯ ಕಡೆಗೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಗಮನ ಕೊಡಬೇಕು. ಆ ನಿಟ್ಟಿನಲ್ಲಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

    ಜನಸಾಮಾನ್ಯರು ಕೂಡ ಲಸಿಕೆ ವಿಷಯದಲ್ಲಿ ಉದಾಸೀನ ಧೋರಣೆ ತಳೆಯಬಾರದು, ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ಹಿಂಜರಿಕೆ ಇಲ್ಲದೆ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಬಳಿಕ ವೈದ್ಯರು ಸೂಚಿಸಿದ ಕ್ರಮಗಳನ್ನು ಪಾಲಿಸಬೇಕು. ಆ ಹೊತ್ತಲ್ಲಿ ದೇಹದಲ್ಲಿ ಕೊಂಚ ಅಸಹಜತೆ ಕಂಡು ಬಂದಲ್ಲಿ ಭಯಭೀತರಾಗದೆ, ವೈದ್ಯರ ಸಲಹೆಯಂತೆ ಸಾಗಬೇಕು. ದೇಶವ್ಯಾಪಿಯಾಗಿ ಲಸಿಕೆಯ ಅಭಿಯಾನ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts