More

    ಎಡನೀರು ನೂತನ ಮಠಾಧೀಶರ ಪೀಠಾರೋಹಣ

    ಬದಿಯಡ್ಕ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ನೂತನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಪೀಠಾರೋಹಣ ವೇದಮಂತ್ರ ಘೋಷಗಳೊಂದಿಗೆ ಬುಧವಾರ ನೆರವೇರಿತು.

    ಬೆಳಗ್ಗೆ ಗಣಪತಿ ಹವನ, ಚಂಡಿಕಾಹೋಮ, ಪಟ್ಟದ ದೇವರಿಗೆ ಪೂಜೆ, ವಿವಿಧ ಅಭಿಷೇಕಗಳ ಬಳಿಕ ಚಿನ್ನದ ಕಿರೀಟ ಧಾರಣೆಯೊಂದಿಗೆ ಪೀಠಾರೋಹಣ ನಡೆಯಿತು.

    ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು. ಕಾಸರಗೋಡು ಚಿನ್ಮಯ ಮಿಷನ್‌ನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಕಟೀಲಿನ ಕಮಲಾದೇವಿ ಆಸ್ರಣ್ಣ, ಶ್ರೀಹರಿನಾರಾಯಣ ಆಸ್ರಣ್ಣ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್, ಪೀಠಾರೋಹಣ ಸಮಿತಿ ಗೌರವಾಧ್ಯಕ್ಷ ಟಿ.ಶ್ಯಾಮ್ ಭಟ್, ಕಾರ್ಯಾಧ್ಯಕ್ಷ ಕೆ.ಶ್ರೀಕಾಂತ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೊಲ್ಲೂರು ದೇವಸ್ಥಾನದ ನರಸಿಂಹ ಅಡಿಗ, ಬಾಳೆಕುದ್ರು ಮಠ ಪ್ರತಿನಿಧಿಗಳು, ಪೇಜಾವರ ಮಠದ ರಘುರಾಮ ಆಚಾರ್ಯ, ರವೀಶ ತಂತ್ರಿ ಕುಂಟಾರು ಮತ್ತಿತರರಿದ್ದರು.

    ಧರ್ಮಸ್ಥಳ, ಕಣಿಪುರ ಶ್ರೀ ಗೋಪಾಲಕೃಷ್ಣ, ಅನಂತಪುರ ಶ್ರೀ ಅನಂತಪದ್ಮನಾಭ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ, ಅಜ್ಜಾವರ ಮಹಿಷಮರ್ದಿನಿ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ, ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ, ಬಾಳೆಕುದ್ರು ಮಠ, ಕಾಂಚಿ ಮಠಗಳ ಪ್ರಸಾದದೊಂದಿಗೆ ಗೌರವಾರ್ಪಣೆ ನಡೆಯಿತು. ಹಿರಣ್ಯ ವೆಂಕಟೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

    ಅಪರಾಹ್ನ ಧಾರ್ಮಿಕ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕಾಂಚಿ ಜಗದ್ಗುರು ಶ್ರೀ ಭಾರತಿ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರಿದ್ದರು.

    ಮಠದ ಪರಂಪರೆಗೆ ಅನುಗುಣವಾಗಿ ಸೇವೆಗೈಯ್ಯುವ ಅವಕಾಶ ಒದಗಿ ಬಂದಿದೆ. ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಅನುಗ್ರಹದಿಂದ ವೇದ ಪರಂಪರೆ ಬೆಳೆಸುವ ನಿಟ್ಟಿನಲ್ಲಿ ಮಠದ ಕಡೆಯಿಂದ ವೇದಪಾಠ ಶಾಲೆ ಆರಂಭಿಸಲು ಉದ್ದೇಶಿಸಲಾಗಿದೆ. ಕಾನೂನು ಕ್ಷೇತ್ರದಲ್ಲಿ ಶ್ರೀ ಕೇಶವಾನಂದ ಭಾರತಿಗಳ ಕೊಡುಗೆಯ ಸ್ಮರಣೆಗಾಗಿ ಎಡನೀರು ಕೇಂದ್ರೀಕರಿಸಿ ಕಾನೂನು ಸಂಬಂಧಿ ಯೋಜನೆಯೊಂದನ್ನು ಅನುಭವಿಗಳ ಸಲಹೆಗಳ ಅನುಸಾರ ಅನುಷ್ಠಾನಗೊಳಿಸಲಾಗುವುದು.
    – ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಎಡನೀರು ಮಠಾಧೀಶರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts