More

    ವಾರದ ಸಂತೆಗೆ ಬಿಸಿಲು ಅಡ್ಡಿ

    ವಿಜಯವಾಣಿ ಸ್ದುದಿಜಾಲ ಬದಿಯಡ್ಕ

    ಕಾಸರಗೋಡು ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ವಿವಿಧ ಕಾಯಿಲೆಗಳಿಗೂ ಕಾರಣವಾಗುತ್ತಿದೆ. ಬದಿಯಡ್ಕ ಪೇಟೆಯಲ್ಲಿ ಪ್ರತೀ ಶನಿವಾರ ನಡೆಯುತ್ತಿರುವ ವಾರದ ಸಂತೆಯ ಮೇಲೂ ಬೇಸಿಗೆಯ ಸುಡುಬಿಸಿಲು ಪ್ರಭಾವ ಬೀರಿದ್ದು, ಜನರು ಮನೆಯಿಂದ ಹೊರಗಿಳಿಯುತ್ತಿಲ್ಲ. ಪರಿಣಾಮ ವ್ಯಾಪಾರ ವಹಿವಾಟು ಕುಂಠಿತಗೊಂಡು ಕೃಷಿಕರು ಬೆಳೆದ ಕೃಷಿ ಉತ್ಪನ್ನಗಳು ಗ್ರಾಹಕರ ಕೈಸೇರದೆ ನಷ್ಟಗೊಳ್ಳುತ್ತಿವೆ.

    ವಾರದ ಸಂತೆಯಲ್ಲಿ ಸಾವಿರಾರು ರೂ.ಗಳ ಆದಾಯ ಲಭಿಸುತ್ತಿದ್ದು, ಎರಡು ಮೂರು ವಾರಗಳಿಂದ ಬಿಸಿಲಿನ ತಾಪಮಾನಕ್ಕೆ ಹೆದರಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಆದಾಯದಲ್ಲಿ ಭಾರಿ ಇಳಿಮುಖವಾಗಿದೆ. ಬದನೆಕಾಯಿ, ಹಾಗಲಕಾಯಿ, ಬಾಳೆಕಾಯಿ, ಬಸಳೆ, ಸೊಪ್ಪು ತರಕಾರಿಗಳು, ಹಣ್ಣುಹಂಪಲು, ಮೀನು, ಕೋಳಿ ಮಾರಾಟದಲ್ಲಿ ಭಾರಿ ಕಡಿತಗೊಂಡಿದೆ.

    ಬೇಕು ಸುಸಜ್ಜಿತ ವ್ಯವಸ್ಥೆ: ಬದಿಯಡ್ಕದ ಶನಿವಾರ ಸಂಜೆ ಜಿಲ್ಲೆಯಲ್ಲೇ ಅತೀ ದೊಡ್ಡ ಸಂತೆಗಳಲ್ಲಿ ಒಂದೆನಿಸಿದ್ದು, ವಿವಿಧ ಊರುಗಳಿಂದ ರೈತರು ಉತ್ಪನ್ನಗಳ ವಿಕ್ರಯಕ್ಕೆ ಮತ್ತು ಖರೀದಿಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಏರುತ್ತಿರುವ ಬಿಸಿಲಿನ ತಾಪಮಾನ ಮತ್ತು ವಾಹನ ದಟ್ಟಣೆ ಕಾರಣ ಸಮರ್ಪಕ ರೀತಿಯಲ್ಲಿ ಸಂತೆ ನಿರ್ವಹಿಸುವುದು ಸವಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣವೊಂದು ಇಲ್ಲಿಗೆ ಅಗತ್ಯ ಎನ್ನುವುದು ದಶಕಗಳ ಬೇಡಿಕೆ.

    ಒಂದೂವರೆ ತಿಂಗಳಿಂದ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯಲಾಗಿದೆ. ಪ್ರಸ್ತುತ ಗಮನಿಸಿದಂತೆ ಶನಿವಾರದ ಸಂತೆಗೆ ಸಂಬಂಧಿಸಿ ಹಲವು ಸಮಸ್ಯೆಗಳು ಇದ್ದು, ಈ ಬಗ್ಗೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ, ಅಗತ್ಯ ವ್ಯವಸ್ಥೆಗಳಿಗೆ ಮುಂದಿನ ಪಂಚಾಯಿತಿ ಆಡಳಿತ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು.
    ಶಾಂತಾ ಬಿ., ಅಧ್ಯಕ್ಷರು,
    ಬದಿಯಡ್ಕ ಗ್ರಾಮ ಪಂಚಾಯಿತಿ

    ಎರಡು ವಾರಗಳಿಂದ ಉಷ್ಣಾಂಶ ಏರಿಕೆಯಾಗುತ್ತಿದ್ದು, ಸಂತೆ ಸಹಿತ ಸಾರ್ವಜನಿಕ ಸ್ಥಳಗಳಿಗೆ ತೆರಳಲು ಭಾರಿ ಸಮಸ್ಯೆಯಾಗುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳ ಜತೆ ಮಾರುಕಟ್ಟೆಗೆ ತೆರಳಿ ವ್ಯಾಪಾರ ವಹಿವಾಟು ಮತ್ತು ಇನ್ನಿತರ ಸಾಮಗ್ರಿಗಳನ್ನು ಪಡೆಯುವುದೆಂದರೆ ತೀರಾ ಸಂಕಷ್ಟದ ಪರಿಸ್ಥಿತಿ. ಆದ್ದರಿಂದ ಪ್ರತೀ ವಾರ ಸಂತೆಗೆ ಹೋಗುತ್ತಿದ್ದ ನಾನು ಮೂರು ನಾಲ್ಕು ವಾರಗಳಿಂದ ಹಿಂದೇಟು ಹಾಕುತ್ತಿದ್ದೇನೆ.
    ಶಾಮಪ್ರಸಾದ ಸರಳಿ ಸ್ಥಳೀಯ ನಿವಾಸಿ

    ಕೆಲವು ವಾರಗಳ ಹಿಂದೆ ಇದ್ದ ವ್ಯಾಪಾರ ಈಗ ಇಲ್ಲವಾಗಿದೆ. ಬಿಸಿಲಿಗೆ ಹೆದರಿ ಜನರು ವಾರದ ಸಂತೆಗೆ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದ್ದರಿಂದ ತರಕಾರಿ, ಹಣ್ಣುಹಂಪಲು ಸಹಿತ ಇನ್ನಿತರ ವಸ್ತುಗಳ ಕೊಳ್ಳುವಿಕೆ ಮೇಲೆ ಭಾರಿ ಪೆಟ್ಟು ಬಿದ್ದಿದೆ.
    ರಿಯಾಸ್, ತರಕಾರಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts