More

    ಶಾಸಕ ಭರತ್‌ರೆಡ್ಡಿ ಮನೆ ಮೇಲೆ ಇಡಿ ದಾಳಿ, 2ನೇ ದಿನವೂ ಶೋಧ

    ಬಳ್ಳಾರಿ: ಶಾಸಕ ನಾರಾ ಭರತ್ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಭಾನುವಾರ ಎರಡನೇ ದಿನವೂ ಮುಂದುವರೆಯಿತು.

    ನಗರದ ಮೋಕಾ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಎಂಟರ್ಪ್ರೈಸ್ ಹಾಗೂ ಗ್ರಾನೈಟ್ ಕಂಪನಿಯಲ್ಲಿ ಶೋಧ ಕಾರ್ಯ ಮುಂದುವರೆದಿತ್ತು. ಶನಿವಾರ ಬೆಳಗ್ಗೆ 8.30ಯಿಂದ ಆರಂಭಗೊಂಡ ಇಡಿ ಅಧಿಕಾರಿಗಳ ಪರಿಶೀಲನೆ ರಾತ್ರಿ 10.30ರ ವೇಳೆ ವರೆಗೆ ನಡೆಯಿತು. ನಂತರ ಭಾನುವಾರ ಮುಂಜಾನೆಯಿಂದಲೇ ಮತ್ತೆ ಶೋಧ ಕಾರ್ಯ ನಡೆದಿದ್ದು, ದಾಳಿಯಲ್ಲಿ ಮಹತ್ವದ ದಾಖಲೆಯನ್ನು ಇಡಿ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿದೆ. ಪ್ರತಿದಿನ ಮನೆಗೆ ಬರುತ್ತಿದ್ದ ಕೆಲಸದವರನ್ನು ಭಾನುವಾರ ಬರದಂತೆ ತಾಕೀತು ಮಾಡಲಾಯಿತು. ಮನೆಗೆ ಬಂದಿದ್ದ ಕೆಲವರನ್ನು ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದರು.

    ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅವರ ತಂದೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಕಳೆದ ಎರಡು ದಿನದಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇನ್ನು ಇಡಿ ಅಧಿಕಾರಿಗಳು ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಬೇರೆ ಕಡೆಗಳಿಂದ ತರಿಸಿಕೊಂಡರು. ಶಾಸಕ ಭರತ್ ರೆಡ್ಡಿ ಅವರ ಚಿಕ್ಕಪ್ಪ ಪ್ರತಾಪ್ ರೆಡ್ಡಿ ಅವರ ಮನೆ ಮತ್ತು ಕಚೇರಿ ಮೇಲೆ ಶನಿವಾರ ದಾಳಿ ಮಾಡಿದ್ದರು. ರಾತ್ರಿ 10.30ರ ವೇಳೆಗೆ ಪರಿಶೀಲನೆಯನ್ನು ಅಂತ್ಯಗೊಳಿಸಿದರು.

    ಮುಂಜಾನೆ ಕಚೇರಿಗೆ ಆಗಮಿಸಿದ್ದ ಪ್ರತಾಪ್ ರೆಡ್ಡಿ ಅವರನ್ನು ಆಪ್ತರು, ಬೆಂಬಲಿಗರು ವಿಚಾರಿಸಿದರು. ವಿಧಾನಸಭೆ ಚುನಾವಣೆ ವೇಳೆ ನಡೆದ ಹಣದ ವ್ಯವಹಾರದ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಶಾಸಕ ಭರತ್‌ರೆಡ್ಡಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರತ್ನಬಾಬು ಮತ್ತು ಸತೀಶ್ ಎಂಬುವವರ ಮನೆಯಲ್ಲೂ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.


    ಮನಿ ಲ್ಯಾಂಡ್ರಿಂಗ್ ಮತ್ತು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಶಾಸಕ ಭರತ್‌ರೆಡ್ಡಿ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಹಲವು ವರ್ಷಗಳಿಂದ ಗ್ರಾನೈಟ್ ಉದ್ಯಮ ಮಾಡುತ್ತಿರುವ ಶಾಸಕ ಭರತ್ ರೆಡ್ಡಿ ಕುಟುಂಬ ನೂರಾರು ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ತಿಳಿದು ಬಂದಿದ್ದು, ಇಡಿ ತನಿಖೆಯಿಂದ ಮಾಹಿತಿ ಬಹಿರಂಗಗೊಂಡ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts