More

    ಕರೊನಾಗೆ ನಲುಗಿದ ಆರ್ಥಿಕತೆ: ಕೇಂದ್ರದ ಆದಾಯಕ್ಕೆ ಬರೆ, ರಾಜ್ಯಕ್ಕೆ ಹೊರೆ!

    | ಮೃತ್ಯುಂಜಯ ಕಪಗಲ್ ಬೆಂಗಳೂರು

    ‘ಕರೊನಾ ಸೋಂಕು ಮಾರಿಯ ದುಷ್ಪರಿಣಾಮ ಕೇಂದ್ರದ ರಾಜಸ್ವ ಮತ್ತು ಜಿಎಸ್​ಟಿ ಮೇಲಿನ ಸೆಸ್ ಸಂಗ್ರಹಣೆಯಲ್ಲಿ ಕೊರತೆ ಉಂಟಾಗಿದೆ. ಹೀಗಾಗಿ ಬೇರೆ ರಾಜ್ಯಗಳಂತೆ ಕರ್ನಾಟಕಕ್ಕೂ ಹಂಚಿಕೆಯಾದ ತೆರಿಗೆಯಲ್ಲಿ ಗಣನೀಯವಾಗಿ ಕಡಿಮೆ ಆಗಲಿದೆ’. ಇದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು. ಫೆಬ್ರವರಿ ಮೊದಲ ವಾರ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ವೇಳೆ ಸಿಎಂ ಈ ಕಹಿಸತ್ಯ ಬಿಚ್ಚಿಟ್ಟಿದ್ದರು. ಇದರೊಂದಿಗೆ ಕರೊನಾ ತಂದೊಡ್ಡಿದ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡಲಿಲ್ಲ ಎನ್ನುವುದು ಖುಷಿಯ ಸಂಗತಿಯೋ? ಯೋಜನೆಗಳ ಬದಲಿಗೆ ಬದ್ಧತಾ ವೆಚ್ಚ ಸಿಂಹಪಾಲು ಆಗಿರುವುದಕ್ಕೆ ಕಳವಳ ಪಡಬೇಕೋ? ಹೀಗೆ ತಿಳಿಯಲಾಗದ ಆರ್ಥಿಕ ಸಿಕ್ಕುಗಳಲ್ಲಿ ರಾಜ್ಯ ಸಿಲುಕಿದೆ.

    2019-20ರಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ 39,806 ಕೋಟಿ ರೂ. ನಿಗದಿಯಾಗಿದ್ದರೆ, 22,536 ಕೋಟಿ ರೂ. ಲಭ್ಯವಾಯಿತು. 2020-21ನೇ ಸಾಲಿಗೆ 28,591 ಕೋಟಿ ರೂ. ಹಂಚಿಕೆ, ಡಿಸೆಂಬರ್ ಅಂತ್ಯದವರೆಗೆ ದೊರೆತದ್ದು 13,550 ಕೋಟಿ ರೂಪಾಯಿ. ಕೇಂದ್ರದ ಸಹಾಯ ಅನುದಾನದಡಿ 2020-21ರಲ್ಲಿ 31,570 ಕೋಟಿ ರೂ. ಹಂಚಿಕೆಯಾಗಿದ್ದು, ಡಿಸೆಂಬರ್ ಅಂತ್ಯದವರೆಗೆ 21,594 ಕೋಟಿ ರೂ. ಲಭಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ತೆರಿಗೆ ಮತ್ತು ಸಹಾಯಾನುದಾನ ಹಂಚಿಕೆ ಪ್ರಮಾಣ ತಗ್ಗಿಸಿ, ಅದರಲ್ಲೂ ಕಡಿಮೆ ಕೊಟ್ಟಿದೆ. ಜಿಎಸ್​ಟಿಯಲ್ಲಿ ಹೆಚ್ಚಿನ ಪಾಲು (ಶೇಕಡ 60 ) ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳಿಂದ ಸಂದಾಯವಾಗುತ್ತದೆ. ಇದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೆ, ತೆರಿಗೆ, ಸಹಾಯಾನುದಾನ ಹಂಚಿಕೆ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಅಪಸ್ವರಗಳು ಕೇಳಿಬರುತ್ತಿವೆ. ಇಷ್ಟು ಸಾಲದೆಂಬಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 885 ಕೋಟಿ ರೂ. ಪಾವತಿ ಬಾಕಿಯಿದೆ. ಅತಿವೃಷ್ಟಿ ಮತ್ತು ಪ್ರವಾಹಪೀಡಿತ ಪ್ರದೇಶದಲ್ಲಿ ಪರಿಹಾರ ಕಾಮಗಾರಿಗಳಿಗೆ ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ನಿಯಮಾವಳಿ ಪ್ರಕಾರ 2,261 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದರೆ 1,369 ಕೋಟಿ ರೂ. ಬಿಡುಗಡೆ ಆಗಿದೆ.

    ನಿರಂತರ ಇಳಿಮುಖ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪರಿಹಾರದಲ್ಲಿ ನಿರಂತರವಾಗಿ ಇಳಿಮುಖವಾಗಿದೆ. ಬಜೆಟ್​ನಲ್ಲಿ ವ್ಯತ್ಯಾಸ ಮತ್ತು ಪರಿಷ್ಕೃತ ಅಂದಾಜಿನಂತೆ 13,763 ಕೋಟಿ ರೂಪಾಯಿ ಖೋತಾ ಆಗಿದೆ. ತೆರಿಗೆ ಹಂಚಿಕೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. 2020-21ನೇ ಆರ್ಥಿಕ ವರ್ಷದ 3ನೇ ತ್ರೖೆಮಾಸಿಕ ಅಂತ್ಯದವರೆಗಿನ ಲೆಕ್ಕಾಚಾರದ ಪ್ರಕಾರ 18,000 ಕೋಟಿ ರೂ. ಸಹಾಯ ಅನುದಾನದಲ್ಲಿ 12,000 ಕೋಟಿ ರೂ. ಕೈತಪ್ಪಿ ಹೋಗುವ ಸಾಧ್ಯತೆಗಳಿವೆ. 15ನೇ ಹಣಕಾಸು ಆಯೋಗದ ವರದಿಯಂತೆ ಒಟ್ಟು ತೆರಿಗೆಗಳ ರಾಜ್ಯದ ಪಾಲಿನಲ್ಲಿ ಶೇ.2ರಷ್ಟು ಕಡಿಮೆಯಾಗಲಿದೆ. ಅಲ್ಲದೆ, ಈ ಆಯೋಗದ ಶಿಫಾರಸು ಪ್ರಕಾರ 5,495 ಕೋಟಿ ರೂ. ಪಾವತಿ ನನೆಗುದಿಗೆ ಬಿದ್ದಿದ್ದು, ಕೇಂದ್ರದ ನೆರವಿನಡಿ ಒಟ್ಟಾರೆ 50 ಸಾವಿರ ಕೋಟಿ ರೂ. ಕಡಿತವಾಗುವ ಅಂದಾಜಿದೆ.

    ಕೇಂದ್ರದ ಅನುದಾನ ಕಡಿತ: ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಯೋಜನೆ, ಉಪ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಅನುದಾನ ಹಂಚಿಕೆ ಅನುಪಾತದಲ್ಲಿ ವ್ಯತ್ಯಾಸಗಳಾಗಿವೆ. ರಾಜ್ಯಗಳ ಜತೆಗೆ ಸಮಾಲೋಚನೆ, ಮುಖ್ಯಮಂತ್ರಿಗಳ ತಂಡದ ಜತೆಗೆ ಚರ್ಚೆಯ ಬಳಿಕ ಪುನರಾವರ್ತಿತ ಕಾರ್ಯಕ್ರಮಗಳ ವಿಲೀನ, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪುನರ್ ರಚಿಸಲಾಗಿದೆ. ಡಾ.ವೈ.ವಿ.ರೆಡ್ಡಿ ನೇತೃತ್ವದ 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೃಷಿ ಸಂಬಂಧಿತ, ಸಾಮಾಜಿಕ ನ್ಯಾಯದಡಿ 30 ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯಗಳ ತಲಾ 50:50, 60:40, 70:30 ಇಲ್ಲವೇ 90:10 ಅನುಪಾತದಂತೆ ಅನುದಾನ ಹಂಚಿಕೆಗೆ ಪರಿವರ್ತನೆಯಾಗಿದೆ. ಎನ್.ಕೆ.ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗವು ತೆರಿಗೆ ಸಂಪನ್ಮೂಲ ಕ್ರೋಡೀಕರಣ ಆಧರಿಸಿ ನಿಗದಿತ ಶೇ.42ರಲ್ಲಿಯೇ ಕಡಿತಗೊಳಿಸಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಹಂಚಿಕೆಗೆ ಶಿಫಾರಸು ಮಾಡಿದೆ. ಕೇಂದ್ರ ಪುರಸ್ಕೃತ 66 ಯೋಜನೆಗಳ ಪೈಕಿ 30 ಯೋಜನೆಗಳನ್ನು ರಾಜ್ಯಕ್ಕೆ ಹಸ್ತಾಂತರಿಸಿದೆ. ರಾಜ್ಯ ಪಟ್ಟಿಯಲ್ಲಿರುವ ಇಲಾಖೆಗಳ ಕೆಲಸಗಳಿಗೆ ಕೇಂದ್ರ ಪಾಲಿನ ಮೊತ್ತ ವರ್ಗಾಯಿಸಲಿದೆ. ಅದೂ ರಾಜ್ಯ ತನ್ನ ಪಾಲಿನ ಅನುದಾನ ಹೂಡಿಕೆ ಮಾಡಿರುವುದನ್ನು ಖಾತರಿಪಡಿಸಿಕೊಂಡ ಬಳಿಕ ನೆರವು ನೀಡಲಿದ್ದು, ಪರೋಕ್ಷವಾಗಿ ಅನುದಾನ ಕಡಿತ ಮಾರ್ಗ ಅನುಸರಿಸಿದೆ.

    ಬದಲಾವಣೆಯಿಲ್ಲ: ಗಮನಾರ್ಹ ಪರಿಷ್ಕರಣೆ, ಪುನರ್ ರಚನೆ ನಂತರವೂ ಪ್ರಮುಖ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ನರೇಗಾ, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಿಸಾನ್ ಸಮ್ಮಾನ್, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಕೆಲವು ಯೋಜನೆಗಳು, ಸೆಂಟ್ರಲ್ ರೋಡ್ ಫಂಡ್, ಗಡಿ ಪ್ರದೇಶಾಭಿವೃದ್ಧಿ ಅನುದಾನ ನಿಧಿ, ಸ್ವಚ್ಛ ಭಾರತ್, ಜೀವನೋಪಾಯ ಮಿಷನ್ ಮುಂತಾದವುಗಳನ್ನು ಅಬಾಧಿತವಾಗಿ ಮುಂದುವರಿಸಿದೆ.

    ಭರಪೂರ ಅನುದಾನ: ಬೆಂಗಳೂರು ಉಪ ನಗರ ರೈಲ್ವೆ ಜಾಲಕ್ಕೆ 18,600 ಕೋಟಿ ರೂ., 13 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ 21,000 ಕೋಟಿ ರೂ. ಒಳಗೊಂಡು ಮೂಲ ಸವಲತ್ತುಗಳ ಅಭಿವೃದ್ಧಿಗೆ 1.16 ಲಕ್ಷ ಕೋಟಿ ರೂ. ಹೂಡಲಿರುವುದಾಗಿ ಕೇಂದ್ರ ಸರ್ಕಾರ ಈ ಬಾರಿ ಬಜೆಟ್​ನಲ್ಲಿ ಪ್ರಕಟಿಸಿದೆ. ಕೇಂದ್ರದ ತೆರಿಗೆ ಪಾಲು ಕಡಿತಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರಕ್ಕೆ ಬಡ್ಡಿರಹಿತ ಸಾಲದ ನೆರವು, ನವೋದ್ಯಮಗಳಿಗೆ ಉತ್ತೇಜನ, ಮುದ್ರಾ ಮೂಲಕ ಅತಿಸಣ್ಣ, ಸಣ್ಣ ಉದ್ಯಮಗಳಿಗೆ ನೆರವು, ಕರೊನಾ ಸಾಂಕ್ರಾಮಿಕ ರೋಗದಿಂದ ಬಳಲಿದ ಉದ್ಯಮ, ತಯಾರಿಕಾ ವಲಯಕ್ಕೆ ಆತ್ಮನಿರ್ಭರ್ ಭಾರತ ಯೋಜನೆಯಡಿ ಸಹಾಯನಿಧಿ, ದೊಡ್ಡ ಕೈಗಾರಿಕೆಗಳಿಗೆ ಕಾರ್ಯಸಾಧನೆ ಆಧಾರಿತ ಸಹಾಯಧನ, ಸಣ್ಣ ಉದ್ದಿಮೆ ಸ್ಥಾಪನೆಗೆ ಗರಿಷ್ಠ 2 ಕೋಟಿ ರೂ. ಸಾಲ ಪಡೆಯಲು ಸರ್ಕಾರವೇ ಖಾತರಿ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ಸುಸ್ಥಿರ ಅಭಿವೃದ್ಧಿಯ 17 ವಿಭಾಗಗಳಲ್ಲಿ ಕರ್ನಾಟಕ 100ಕ್ಕೆ 66 ಅಂಕ ಗಳಿಸಿ ದೇಶದಲ್ಲಿ 6ನೇ ಸ್ಥಾನದಲ್ಲಿದೆ.

    ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಕೇಂದ್ರದಿಂದ ನಿರೀಕ್ಷೆಗೂ ಮೀರಿದ ನೆರವು ಲಭಿಸಿದೆ. ನರೇಗಾದಡಿ ಹೆಚ್ಚುವರಿ 800 ಕೋಟಿ ರೂ., ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 5,200 ಕಿ.ಮೀ. ರಸ್ತೆ ಅಭಿವೃದ್ಧಿಗೆ ಮಂಜೂರು, ಗಂಗೆ ಯೋಜನೆ ಅನುಷ್ಠಾನಕ್ಕೆ 4,500 ಕೋಟಿ ರೂ., ಸ್ವಚ್ಛ ಭಾರತ್ ಮಿಷನ್​ನಡಿ ಘನ ತ್ಯಾಜ್ಯ ನಿರ್ವಹಣೆಗೆ 6,011 ಗ್ರಾ.ಪಂ.ಗಳಿಗೆ ತಲಾ 15 ರಿಂದ 20 ಲಕ್ಷ ರೂ. ಅನುದಾನಕ್ಕೆ ಅಸ್ತು ಎಂದಿದೆ.

    | ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ

    ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ರಾಜ್ಯಗಳ ಹೆಸರಿನಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ನೆರವಿನ ಸಿಂಹಪಾಲು, ಜಿಎಸ್​ಟಿಗೆ ಹೆಚ್ಚು ಸಂದಾಯ ಮಾಡುವ ಕರ್ನಾಟಕಕ್ಕೆ ಕಡಿಮೆ ಪಾಲು ನೀಡಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಿ, ಮತ್ತೊಂದೆಡೆ ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚುತ್ತದೆ. ಕೇಂದ್ರದ ತೆರಿಗೆ ಹಂಚಿಕೆ ಮಾನದಂಡವೇ ಅವೈಜ್ಞಾನಿಕ, ವಿರೋಧಾಭಾಸದಿಂದ ಕೂಡಿದೆ. ದೇಶದ ಆರ್ಥಿಕ ಹೆಬ್ಬಾಗಿಲು ಬೆಂಗಳೂರಿಗೆ 1 ಲಕ್ಷ ಕೋಟಿ ರೂ. ನೀಡುವುದು ಉತ್ತಮ ಕ್ರಮ.

    | ಸಂಪತ್ ರಾಮನ್ ಮಾಜಿ ಅಧ್ಯಕ್ಷ, ಅಸೋಚಾಮ್

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಭಾರೀ ಅಚ್ಚರಿ! ರಮೇಶ್ ಜಾರಕಿಹೊಳಿ ಆಪ್ತ ಸಚಿವರು ಕೋರ್ಟ್​ಗೆ ಅರ್ಜಿ ಸಲ್ಲಿಕೆ

    ಕೆಲಸಕ್ಕೆ ಹೋಗಿದ್ದ ಹೆಂಡತಿ ತಡವಾಗಿ ಮನೆಗೆ ಬಂದಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ!; ಪತ್ನಿಯ ಶೀಲದ ಕುರಿತು ಅನುಮಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts