More

    ನೀರಿನ ಘಟಕಗಳಿಗೆ ಗ್ರಹಣ, ದುರಸ್ತಿಗೆ ಮುಂದಾಗದ ಗುತ್ತಿಗೆದಾರರ ವಿರುದ್ಧ ಜಿಪಂ ಸದಸ್ಯರ ಅಸಮಾಧಾನ

    ಬೆಂಗಳೂರು ಗ್ರಾಮಾಂತರ
    ಜಿಲ್ಲೆಯ ಬಹುಪಾಲು ಶುದ್ಧ ನೀರಿನ ಘಟಕಗಳು ದುರಸ್ತಿಯಲ್ಲಿವೆ. ಒಂದೊಂದರ ರಿಪೇರಿಗೂ ತಿಂಗಳುಗಟ್ಡಲೆ ಸಮಯ ತೆಗೆದುಕೊಳ್ಳಲಾಗುತ್ತಿದೆ. ಘಟಕಗಳ ಉದ್ದೇಶವೇ ಬುಡಮೇಲಾಗಿದೆ ಎಂದು ಜಿಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

    ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದನಲ್ಲಿ ಗುರುವಾರ ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆ ಬಗ್ಗೆ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

    ಸದಸ್ಯ ಅಪ್ಪಯ್ಯಣ್ಣ ವಿಷಯ ಪ್ರಸ್ತಾಪಿಸಿ, ಘಟಕಗಳ ನಿರ್ವಹಣೆ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅಲ್ಲದೆ ಹೊರರಾಜ್ಯದವರಿಗೆ ಗುತ್ತಿಗೆ ನೀಡುವುದು ಸರಿಯಲ್ಲ ಎಂದರು.

    ಘಟಕಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಿರ್ವಹಣೆ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ನಿರ್ಲಕ್ಷ ವಹಿಸಿದರೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ಕುಡಿಯುವ ನೀರು ವಿಭಾಗದ ಅಧಿಕಾರಿಗಳಿಗೆ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ಚಾಟಿ ಬೀಸಿದರು.

    ಘಟಕಗಳ ನಿರ್ವಹಣೆಯನ್ನು ಆಯಾ ಪಂಚಾಯಿತಿಗೆ ವಹಿಸಿಕೊಡಬೇಕೆಂದು ಜಿಪಂ ಸದಸ್ಯರು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಜಿಪಂ ಸಿಇಒ ಎನ್.ಎಂ.ನಾಗರಾಜ್, ಈಗಾಗಲೇ ಹಲವು ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಪಂಗಳಿಗೆ ನೀಡಲಾಗಿದೆ. ಅಲ್ಲಿಯೂ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದರು.

    ರೋಗಿಗಳಿಗೆ ಸ್ಪಂದಿಸದ ವೈದ್ಯೆ: ಕೊಯಿರಾ ಆಸ್ಪತ್ರೆ ವೈದ್ಯಾಧಿಕಾರಿ ನೀತುರಾಣಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ದೂರಿದರು. ಎಚ್ಚರಿಕೆ ನೀಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾದೇವಿ ತಿಳಿಸಿದರು.

    ಜಿಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ವೇತನ ಕಡಿತಗೊಳಿಸಲಾಗುತ್ತಿದೆ. ಕರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಬಗ್ಗೆ ಕಾಳಜಿವಹಿಸಬೇಕು ಎಂದು ಕೆ.ಸಿ.ಮಂಜುನಾಥ್ ಗಮನ ಸೆಳೆದರು. ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಭರವಸೆ ನೀಡಿದರು.

    ಮುಖ್ಯಶಿಕ್ಷಕರಿಲ್ಲ: ಜಿಲ್ಲೆಯ ಹಲವು ಶಾಲೆಗಳಲ್ಲಿ ಮುಖ್ಯಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಆ ಜಾಗಕ್ಕೆ ಬೇರೆ ಶಿಕ್ಷಕರು ನಿಯೋಜನೆಯಾಗಿಲ್ಲ ಎಂದು ಸದಸ್ಯರು ಗಮನ ಸೆಳೆದರು. ಶಿಕ್ಷಕರ ಬಡ್ತಿ ಕಾರ್ಯ ಆರಂಭವಾಗಲಿದ್ದು, ಕೆಲವೇ ದಿನಗಳಲ್ಲಿ ನಿಯೋಜನೆಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.

    ಕರೊನಾ ಸೋಂಕಿತರಿಗೆ ದೇವನಹಳ್ಳಿಯಲ್ಲಿ ಬೆಡ್: ಜಿಲ್ಲೆಯಲ್ಲಿ ಕರೊನಾ ಸೋಂಕಿತ ಪ್ರಕರಣ ಹೆಚ್ಚಾಗಿದೆ. ಸೋಂಕಿತರಿಗೆ ಬೆಡ್ ವ್ಯವಸ್ಥೆ ಹೇಗಿದೆ ಎಂದು ಜಿಪಂ ಅಧ್ಯಕ್ಷೆ ಜಯಮ್ಮ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಮಂಜುಳಾದೇವಿ, ದೇವನಹಳ್ಳಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಉತ್ತಮವಾಗಿದ್ದು, ಜಿಲ್ಲೆಯ ಎಲ್ಲಿಯಾದರೂ ಸೋಂಕಿತರು ಕಂಡು ಬಂದರೆ ದೇವನಹಳ್ಳಿಗೆ ದಾಖಲಿಸಬಹುದು ಎಂದರು.

    ಹೆರಿಗೆಗೂ ಲಂಚ: ಜಿಲ್ಲೆಯ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಲಂಚಾವತಾರ ತಾಂಡವಾಡುತ್ತಿದ್ದು, 5 ಸಾವಿರ ರೂ.ಗೆ ಬೇಡಿಕೆ ಇಡಲಾಗುತ್ತಿದೆ. ಎಲ್ಲ ಚಿಕಿತ್ಸೆಗೂ ದರ ನಿಗದಿ ಮಾಡುತ್ತಿದ್ದಾರೆ. ಬಡವರಿಂದ ಸುಲಿಗೆಯಾಗುತ್ತಿದೆ ಎಂದು ಸದಸ್ಯರು ದೂರಿದರು.

    ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜಯಮ್ಮಲಕ್ಷ್ಮಿ ನಾರಾಯಣ, ಸಿಇಒ ಎನ್.ಎಂ.ನಾಗರಾಜ್, ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts