More

    ಎಲ್ಲೆಡೆ ಕನ್ನಡದ ಕಂಪು ಪಸರಿಸಲು ಶ್ರಮಿಸೋಣ : ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕರೆ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ಕನ್ನಡ ಸಾಹಿತ್ಯ ಪರಿಷತ್ ಜನ ಸಾಮಾನ್ಯರ ಪರಿಷತ್ ಆಗಬೇಕು. ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ನೂತನ ಪದಾಧಿಕಾರಿಗಳು ಈ ಕಾರ್ಯದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ಕೃಷ್ಣಪ್ಪ ಹೇಳಿದರು.
    ಪಟ್ಟಣದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಕಸಾಪದಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲೆ, ತಾಲೂಕು ಹಾಗೂ ಹೋಬಳಿಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕನ್ನಡಿಗ, ಕನ್ನಡ ಸಾರ್ವಭೌಮನಾಗಬೇಕು ಎಂಬ ಉದ್ದೇಶದಿಂದ ಕಸಾಪ ಅಧ್ಯಕ್ಷರು ವಿವಿಧ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
    ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ಕಸಾಪ ಸದಸ್ಯರಿದ್ದಾರೆ. ಗಡಿನಾಡುಗಳಲ್ಲಿ ಸಾಹಿತ್ಯ ಪರಿಷತ್‌ನಿಂದ ಘಟಕಗಳನ್ನು ಸ್ಥಾಪಿಸಲಾಗಿದೆ. ಪದಾಧಿಕಾರಿಗಳು ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಲು ಕಾರ್ಯಕ್ರಮ ರೂಪಿಸಿ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
    ಕಸಾಪ ಗೌರವಾಧ್ಯಕ್ಷ ರವಿಕಿರಣ್ ಮಾತನಾಡಿ, ಕಸಾಪ ಕನ್ನಡಿಗರು ಒಪ್ಪಿಕೊಂಡಿರುವ ಸಂಸ್ಥೆ. ಅನೇಕ ಬುದ್ಧಿಜೀವಿಗಳ, ಸಾಹಿತಿಗಳ, ಕನ್ನಡಿಗರ ಸ್ವತ್ತಾಗಿ ಬೆಳೆಯುತ್ತಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 10 ಸಾವಿರ ಸದಸ್ಯರಿದ್ದಾರೆ. ಪ್ರತಿ ತಾಲೂಕು, ಹೋಬಳಿಗಳಲ್ಲಿ ಘಟಕಗಳು ಆರಂಭವಾಗಿವೆ. ಕಸಾಪ ಕಲೆ, ಸಂಸ್ಕೃತಿ, ಉನ್ನತೀಕರಿಸುವ ಸಂಸ್ಥೆಯಾಗಿದೆ. ಕನ್ನಡ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
    ಕರವೇ ನಾರಾಯಣಗೌಡ ಬಣದ ಉಪಾಧ್ಯಕ್ಷ ನಿಲೇರಿ ಅಂಬರೀಶ್ ಗೌಡ ಮಾತನಾಡಿ, ತಾಯಿಯ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅದು ಸಿಕ್ಕಾಗ ನಾವು ತಾಯಿಯ ಋಣ ತೀರಿಸಬೇಕು. ಎಲ್ಲ ಕನ್ನಡ ಮನಸ್ಸುಗಳು ಒಗ್ಗೂಡುವ ಕೆಲಸವಾಗಬೇಕು. ಕನ್ನಡವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯಬೇಕು. ಕನ್ನಡ ಭಾಷೆಗಿರುವ ಇತಿಹಾಸ ಬೇರಾವ ಭಾಷೆಗೂ ಇಲ್ಲ. ಹಾಗಾಗಿ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದರು. ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು, ಸಾಹಿತಿ ಶರಣಯ್ಯ ಹಿರೇಮಠ, ನಿಕಟಪೂರ್ವ ತಾಲೂಕು ಅಧ್ಯಕ್ಷ ರಾಮಕೃಷ್ಣ ಹೆಗ್ಗಡೆ, ಟೌನ್ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಪದಾಧಿಕಾರಿಗಳಾದ ರಮೇಶ್ ಕುಮಾರ್, ಗೋವಿಂದರಾಜು, ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts