More

    ಜಿಲ್ಲೆಯಲ್ಲಿ ಮೇವು ಸಮೃದ್ಧಿ, ಸಂಕಷ್ಟದಲ್ಲಿ ಕೈಹಿಡಿದ ಹೈನುಗಾರಿಕೆ 25 ವಾರಕ್ಕಾಗುವಷ್ಟು ಮೇವು ದಾಸ್ತಾನು

    ಬೆಂಗಳೂರು ಗ್ರಾಮಾಂತರ: ಕಳೆದ ಎರಡ್ಮೂರು ವರ್ಷದ ಹಿಂದೆ ರಾಸುಗಳ ಮೇವಿಗೆ ಪರದಾಡುವಂತ ಪರಿಸ್ಥಿತಿಯಿದ್ದ ಜಿಲ್ಲೆಯಲ್ಲಿ ಈ ಬಾರಿ ಮೇವು ಸಮೃದ್ಧಿಯಾಗಿದೆ. ಜಿಲ್ಲೆಯಲ್ಲಿ 25 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು ಕೊರತೆಯಾಗುವುದಿಲ್ಲ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ತಿಳಿಸಿದೆ.

    ಮೇವು ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ರೈತರಿಗೆ ೆಬ್ರವರಿಯಲ್ಲಿಯೇ ಮೇವು ಬಿತ್ತನೆ ಬೀಜ ವಿತರಿಸಿತ್ತು. ಇದರಲ್ಲಿ ಎತ್ತರಕ್ಕೆ ಬೆಳೆಯುವ ಹಾಗೂ ಉತ್ತಮ ಹಾಲು ಉತ್ಪಾದನೆಗೆ ಕಾರಣವಾಗುವ ಆಫ್ರಿಕನ್ ಟಾಲ್ಮೆಸ್ ಬೀಜ ಒಂದಾದರೆ, ಸುಮಾರು 5 ಬಾರಿ ಕಟಾವು ಮಾಡಬಹುದಾದ ಮಲ್ಟಿಕಲ್ ಬಿತ್ತನೆ ಬೀಜ ಸೇರಿ ಎರಡು ಮಾದರಿಯ ಬೀಜಗಳ ವಿತರಣೆಯಾಗಿತ್ತು.

    ಸುಮಾರು 60 ರಿಂದ 70 ದಿನಗಳ ಅವಧಿಯಲ್ಲಿ ಬರುವ ಈ ಮೇವಿನಿಂದಾಗಿ ಪ್ರಸ್ತುತ ಸನ್ನಿವೇಶದಲ್ಲಿ ಹಸಿ ಮೇವು ಸಮೃದ್ಧವಾಗಿದೆ. ಇದರೊಂದಿಗೆ ಕಳೆದ ಬಾರಿ ಉತ್ತಮ ಮಳೆಯಾಗಿ ರಾಗಿ ಹಾಗೂ ಜೋಳದ ಬೆಳೆ ಉತ್ತಮವಾಗಿದ್ದರಿಂದ ಒಣ ಹುಲ್ಲಿಗೂ ಕೊರತೆಯಿಲ್ಲದಂತಾಗಿದೆ.

    1.90 ಲಕ್ಷ ರಾಸುಗಳು: ಜಾನುವಾರು ಜನಗಣತಿ ಅಂಕಿ ಅಂಶದಂತೆ ಜಿಲ್ಲೆಯಲ್ಲಿ 1.90 ಲಕ್ಷ ರಾಸುಗಳ ದಾಖಲಾತಿ ಕಂಡುಬಂದಿದೆ. ಕಳೆದ ಸಾಲಿಗೆ ಹೋಲಿಸಿದರೆ 6 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ ಎಂದು ಪಶುಪಾಲನಾ ಇಲಾಖೆ ತಿಳಿಸಿದೆ.

    ಕೈಹಿಡಿದ ಹೈನುಗಾರಿಕೆ: ಕರೊನಾ ಲಾಕ್‌ಡೌನ್ ವೇಳೆ ಹಣ್ಣು, ತರಕಾರಿ ರೈತರು ಸಾಕಷ್ಟು ಕೈಸುಟ್ಟುಕೊಂಡರೂ ಹೈನುಗಾರಿಕೆ ರೈತರನ್ನು ಕೈ ಬಿಟ್ಟಿಲ್ಲ ಎನ್ನಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಸ್ವಗ್ರಾಮಕ್ಕೆ ಮರಳಿದ ಅನೇಕರಿಗೆ ಉದ್ಯೋಗ ಕಲ್ಪಿಸಿದೆ.

    ಸರ್ಕಾರದ ಸವಲತ್ತು ಪೂರಕ: ಒಂದೆಡೆ ಉತ್ತಮ ಮಳೆ, ಸಮೃದ್ಧ ಮೇವಿನ ಜತೆಗೆ ಸರ್ಕಾರ ಹೈನುಗಾರಿಕೆಗೆ ಹಲವು ಸವಲತ್ತು ನೀಡುತ್ತಿರುವುದು ಹೈನುಗಾರರಿಗೆ ವರದಾನವಾಗಿ ಪರಿಗಣಮಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಹಲವು ಸವಲತ್ತು ದೊರೆಯುತ್ತಿದೆ. ಬ್ಯಾಂಕ್ ಸಾಲ ಸುಲಭವಾಗಿ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದೆ. ರಾಸುಗಳ ನಿರ್ವಹಣೆಗೂ ಸಹಾಯಧನ ಲಭ್ಯವಾಗುತ್ತಿದೆ. ಇನ್ನು ಅನೇಕ ಸವಲತ್ತುಗಳಿಂದ ರೈತಾಪಿ ಜನರ ಆರ್ಥಿಕ ಪ್ರಗತಿಗೆ ಈ ಬಾರಿ ಹೈನುಗಾರಿಕೆ ವರದಾನವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

    ಉಪಕಸುಬು ಪೂರಕ: ಹೈನುಗಾರಿಕೆಯೊಂದಿಗೆ ಕೋಳಿ ಸಾಕಣೆ, ಕುರಿ, ಮೇಕೆ ಸಾಕಣೆ, ಹಂದಿ ಸಾಕಣೆಯಂತಹ ಪಶುಪಾಲನಾ ಚಟುವಟಿಕೆಯಿಂದ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತಿದೆ. ಬರಪೀಡಿತ ಜಿಲ್ಲೆಯಂಬ ಹಣೆಪಟ್ಟಿ ತೊಟ್ಟಿದ್ದ ಗ್ರಾಮಾಂತರ ಜಿಲ್ಲೆಯಲ್ಲಿ ಇದೀಗ ಸುಗ್ಗಿಕಾಲ ಆರಂಭವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

    ಕಾಲಕಾಲಕ್ಕೆ ಔಷಧೋಪಚಾರ ಮಾಡಿ: ಪಶುಪಾಲನಾ ಇಲಾಖೆಯಿಂದ ಬರಡು ರಾಸುಗಳ ಶಿಬಿರ, ವೈಜ್ಞಾನಿಕ ಹೈನುಗಾರಿಕೆ ಕಾರ್ಯಾಗಾರ, ಕಾಲುಬಾಯಿ ರೋಗಕ್ಕೆ ಲಸಿಕೆ ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಕಾಲಕಾಲಕ್ಕೆ ರಾಸುಗಳಿಗೆ ಸರಿಯಾದ ಔಷಧೋಪಾಚಾರ ನಡೆಸಿದರೆ ಉತ್ತಮ ಲಾಭ ಪಡೆಯಬಹುದು ಎಂಬುದು ಪಶುಪಾಲನಾ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ. ಜಂತುಹುಳ ಔಷಧ ನೀಡಿಕೆಯೊಂದಿಗೆ ಕನಿಕ ಮಿಶ್ರಿತ ಪೌಷ್ಟಿಕಾಂಶ ಆಹಾರ ನೀಡಬೇಕು. ಹಸಿ ಹಾಗೂ ಒಣಹುಲ್ಲಿನ ಜತೆಗೆ ಪಶುಆಹಾರ ನೀಡುವುದರಿಂದ ಉತ್ತಮ ಲಿತಾಂಶ ಪಡೆಯಬಹುದು. ಹೈನುಗಾರಿಕೆ ಹಾಗೂ ಪಶುಪಾಲನೆಗೆ ಸಂಬಂಧಿಸಿದ ಯಾವುದೇ ಮಾಹಿತಿಗೆ ಇಲಾಖೆಯನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ರಾಸು ಮೇವು ಸಮೃದ್ಧವಾಗಿದೆ. ಸುಮಾರು 25 ವಾರಕ್ಕಾಗುವಷ್ಟು ಮುಂಗಡ ಮೇವು ದಾಸ್ತಾನಿದೆ. ಎಲ್ಲಿಯೂ ಕೊರತೆ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಗೋಶಾಲೆ, ಮೇವು ಬ್ಯಾಂಕ್ ತೆರೆಯುವ ಅವಶ್ಯಕತೆ ಕಂಡುಬಂದಿಲ್ಲ.
    ಡಾ.ಅನಿಲ್‌ಕುಮಾರ್
    ಮುಖ್ಯ ಪಶುವೈದ್ಯಾಧಿಕಾರಿ, ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts