More

    43 ಲಕ್ಷ ರೂ. ಪಡೆದ ವಂಚಕ ನೈಜೀರಿಯಾ ಪ್ರಜೆ ಬೆಂಗಳೂರಿನಲ್ಲಿ ಅಂದರ್

    ಕಾಸರಗೋಡು: ವಿದ್ಯಾನಗರದ ಪತ್ರಕರ್ತರ ಕಾಲನಿ ನಿವಾಸಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಾಧವ ಎಂಬುವರಿಂದ ಹಂತ ಹಂತವಾಗಿ 43 ಲಕ್ಷ ರೂ.ಎಗರಿಸಿದ ಆರೋಪಿ ಕೊನೆಗೂ ಪೊಲೀಸರ ಬಲೆ ಬಿದ್ದಿದ್ದಾನೆ.

    ಪ್ರಕರಣದ ಸೂತ್ರಧಾರ ನೈಜೀರಿಯಾ ಪ್ರಜೆ ಆಂಟನಿ ಒಥೆವೊರೊಬೊ (36) ಎಂಬುವನನ್ನು ಬೆಂಗಳೂರಿನಲ್ಲಿ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ನಗರ ಠಾಣೆ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಸೂಚನೆ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಮಧು ನೇತೃತ್ವದ ತಂಡ ಬೆಂಗಳೂರಿಗೆ ತೆರಳಿತ್ತು.

    ಘಟನೆಯಲ್ಲಿ ಬೃಹತ್ ಜಾಲವೇ ತೊಡಗಿದ್ದು, ಉಳಿದ ಆರೋಪಿಗಳನ್ನೂ ಶೀಘ್ರವೇ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

    ಔಷಧ ತಯಾರಿಕೆಯಲ್ಲಿ ಹಣ ಹೂಡಿಕೆ ಸಂಬಂಧ ಆಮಿಷವೊಡ್ಡಿದ್ದ ಆರೋಪಿ ಆಂಟನಿ, ಮಾಧವ ಅವರಿಂದ ಜೂನ್ 1ರಿಂದ 18ರವರೆಗೆ ಹಂತ ಹಂತವಾಗಿ ಬೃಹತ್ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಆತನ ಯಾವುದೇ ಮಾಹಿತಿ ಸಿಗದ ಕಾರಣ, ಪರಿಶೀಲಿಸಿದಾಗ ಮೋಸ ಹೋಗಿರುವುದನ್ನು ಅರಿತ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಾಧವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

    ಮಾಧವ ನೀಡಿದ ದೂರು ಪ್ರಕಾರ, ತಮಿಳುನಾಡು ಮೂಲದ ಅನಿಲ್ ಸಹಿತ ಐವರ ಮೇಲೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದರು. ಸೈಬರ್ ಸೆಲ್ ಮೂಲಕ ನಡೆಸಲಾದ ತನಿಖೆಯಲ್ಲಿ ಈ ಪ್ರಕರಣದ ಸೂತ್ರಧಾರಿ ನೈಜಿರಿಯಾ ಪ್ರಜೆ ಎಂದೂ, ಆತ ಬೆಂಗಳೂರಿನಲ್ಲಿದ್ದಾನೆಂದೂ ತಿಳಿಯಿತು.

    ಬೆಂಗಳೂರಿಗೆ ತೆರಳಿದ ಪೊಲೀಸರ ತಂಡ, ಆಂಟನಿಯನ್ನು ಬಂಧಿಸಿದೆ. ಈತ ಇನ್ನೂ ಹಲವರಿಗೆ ಈ ರೀತಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts