More

    ಅಮೃತ ನಗರೋತ್ಥಾನ ಯೋಜನೆಗೆ ಗ್ರಹಣ

    ಮುಂಡರಗಿ: ಸ್ಥಳೀಯ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕಾಮಗಾರಿಗೆ ಚಾಲನೆ ನೀಡಿ 11 ತಿಂಗಳು ಕಳೆದರೂ ಬಹುತೇಕ ವಾರ್ಡ್‌ಗಳಲ್ಲಿ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ.

    2023ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಅಂದಾಜು 6.92 ಕೋಟಿ ರೂ.ವೆಚ್ಚದಲ್ಲಿ ಇಲ್ಲಿನ ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಹಿಂದಿನ ಶಾಸಕರು ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಪ್ರಾರಂಭದಲ್ಲಿ ಕೆಲವೊಂದು ವಾರ್ಡ್‌ಗಳಲ್ಲಿ ಕಾಮಗಾರಿ ಮಾಡಿದ್ದರೆ, ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಅಪೂರ್ಣಗೊಳಿಸಲಾಗಿದೆ. ಇನ್ನೂ ಬಹುತೇಕ ವಾರ್ಡ್‌ಗಳಲ್ಲಿ ಈವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ.

    ಪುರಸಭೆ ವ್ಯಾಪ್ತಿಯ 6, 15, 16, 17, 22ನೇ ವಾರ್ಡ್‌ನಲ್ಲಿ ನಗರೋತ್ಥಾನ ಕಾಮಗಾರಿ ಮಾಡಲಾಗಿದೆ. 7 ಮತ್ತು 18ನೇ ವಾರ್ಡ್‌ನಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಇನ್ನೂ 1, 2, 3, 4, 5, 8, 9, 10, 11, 12, 13, 14, 19, 20, 21, 23ನೇ ವಾರ್ಡ್‌ನಲ್ಲಿ ಮಾಡಬೇಕಿದ್ದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಈವರೆಗೂ ಪ್ರಾರಂಭಿಸಿಲ್ಲ. ಬಹುತೇಕ ವಾರ್ಡ್‌ಗಳ ಕೆಲವು ಕಡೆ ರಸ್ತೆ ಹದಗೆಟ್ಟಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ.

    ಈಗಿರುವಂಥ ಚರಂಡಿ ದುರಸ್ತಿಗೆ ತಲುಪಿ ಅವ್ಯವಸ್ಥೆ ವಾತಾವರಣದಿಂದ ಕೂಡಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸಾರ್ವಜನಿಕರಿಗೆ ಸದುಪಯೋಗವಾಗಬೇಕಿದ್ದ ಸರ್ಕಾರದ ನಗರೋತ್ಥಾನ ಯೋಜನೆಯ ಕೆಲಸ ನಡೆಯದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಗುತ್ತಿಗೆದಾರರಿಗೆ ಸೂಚನೆ ನೀಡಿ ಕಾಮಗಾರಿ ಪ್ರಾರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ಮುಂಡರಗಿ ಪಟ್ಟಣದ ವಿವಿಧೆಡೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಬೇಕಿದ್ದ ಕಾಮಗಾರಿಯನ್ನು ಈವರೆಗೂ ಪ್ರಾರಂಭಿಸಿಲ್ಲ. ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸುವಂಥ ಲಕ್ಷಣ ಕಾಣಿಸುತ್ತಿಲ್ಲ. ಇನ್ನಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಿ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಆರಂಭಿಸಬೇಕು.
    >ಅಡಿವೆಪ್ಪ ಚಲವಾದಿ, ಸಾಮಾಜಿಕ ಕಾರ್ಯಕರ್ತ

    ಪುರಸಭೆಗೆ ಹೊಸದಾಗಿ ನೇಮಕಗೊಂಡಿದ್ದೇನೆ. ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಲಸ ಪ್ರಾರಂಭಿಸುವಂತೆ ಗುತ್ತಿಗೆದಾರರೊಂದಿಗೆ ಮಾತನಾಡುತ್ತೇನೆ. ಹಂತ-ಹಂತವಾಗಿ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    >ಐ.ಜಿ.ಕೊನ್ನೂರ ಪುರಸಭೆ, ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts