More

    ಸಮುದಾಯಭವನ ಕಾಮಗಾರಿಗೆ ಗ್ರಹಣ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ಪಟ್ಟಣದ ಅಂಬೇಡ್ಕರ್ ನಗರದಲ್ಲಿ 2013ರಲ್ಲಿ ಪ್ರಾರಂಭವಾದ ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ಕಾಮಗಾರಿ 8 ವರ್ಷವಾದರೂ ಪೂರ್ಣಗೊಳ್ಳದೆ ಗ್ರಹಣ ಹಿಡಿದಂತಾಗಿದೆ.

    ಪಟ್ಟಣದಲ್ಲಿ ಸಮುದಾಯ ಭವನ ನಿರ್ವಣವಾಗಬೇಕು ಎಂಬುದು ಹಿಂದುಳಿದ ವರ್ಗದ ಜನರ ಪ್ರಮುಖ ಬೇಡಿಕೆಯಾಗಿತ್ತು. ಸಮಾಜ ಕಲ್ಯಾಣ ಇಲಾಖೆ 2006-07 ರಲ್ಲಿಯೇ 17.5 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿತು. ಇದಕ್ಕೆ ಸ್ಥಳೀಯ ಪುರಸಭೆ ನಿವೇಶನ ಕಲ್ಪಿಸಿ 5 ಲಕ್ಷ ರೂಪಾಯಿ ವಂತಿಕೆಯನ್ನೂ ನೀಡಿತ್ತು. ಇಷ್ಟಾಗಿಯೂ ನಿವೇಶನ ದಾಖಲೆ, ಇತರೆ ತಾಂತ್ರಿಕ ತೊಂದರೆಗಳು ಉಂಟಾಗಿದ್ದರಿಂದ 2013ರಲ್ಲಿ ಪಿಆರ್​ಇಡಿಯಿಂದ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಲಾಯಿತು. ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರರು ಅನುದಾನದ ಕೊರತೆಯಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು. ಈ ವೇಳೆ 2016-17 ರಲ್ಲಿ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಅವರು ಭವನದ ಕಾಮಗಾರಿ ಪೂರ್ಣಗೊಳ್ಳಲು ಮತ್ತೇ 15 ಲಕ್ಷ ರೂಪಾಯಿ ಅನುದಾನ ಕಲ್ಪಿಸಿದರು. ಇಷ್ಟಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

    ಸಮುದಾಯ ಭವನದ ಇಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸ ಮುಗಿದಿಲ್ಲ. ಬಾಗಿಲು, ಕಿಟಕಿ ಸೇರಿ ಅನೇಕ ಕಾಮಗಾರಿಗಳು ಬಾಕಿಯಿವೆ. ಅಲ್ಲದೆ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಡುವಿನ ಸಮನ್ವಯತೆ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಂದಾಗಿ ಕಳಪೆಯಾಗಿದೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ.

    ಸಮುದಾಯ ಭವನ ಕಾರ್ಯ ಪೂರ್ಣಗೊಂಡರೆ ಹರಿಜನ ಕಾಲನಿಯ ಬಡವರು ಮದುವೆ, ಸಭೆ-ಸಮಾರಂಭ ಇತರೆ ಕಾರ್ಯಕ್ರಮ ನಡೆಸಲು ಅನುಕೂಲ ಕಲ್ಪಿಸಿದಂತಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ಆದಷ್ಟು ಬೇಗ ಲೋಕಾರ್ಪಣೆಗೊಳಿಸಬೇಕು. 15 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ.

    | ಸುರೇಶ ನಂದೆಣ್ಣವರ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ

    ಲಕ್ಷ್ಮೇಶ್ವರದ ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಅನುದಾನ ಕೊರತೆ ಸೇರಿ ಕೆಲ ತಾಂತ್ರಿಕ ತೊಂದರೆಗಳಿಂದ ತಡವಾಗಿದೆ. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಸಣ್ಣಪುಟ್ಟ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

    | ಎಸ್.ಬಿ. ಹರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts