More

    ರಕ್ತಹೀನತೆ ತಡೆಗಟ್ಟಲು ಪೌಷ್ಠಿಕ ಆಹಾರ ಸೇವಿಸಿ

    ಬಳ್ಳಾರಿ: ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಅತ್ಯಗತ್ಯವಾಗಿದ್ದು, ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.

    ನಗರದ ಅಂಚೆ ಕಚೇರಿ ಹಿಂಭಾಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ದೇಹದ ಅಂಗಾಂಗಗಳಿಗೆ ಸಾಕಷ್ಟು ಆಮ್ಲಜನಕವನ್ನು ಸಾಗಿಸಲು ಅಗತ್ಯವಾದ ಪ್ರಮಾಣದಲ್ಲಿ ಆರೋಗ್ಯಕರ ಕೆಂಪು ರಕ್ತಕಣಗಳ ಕೊರತೆ ಉಂಟಾಗುವ ಸನ್ನಿವೇಶವನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ ಎಂದರು.

    ರಾಜ್ಯ ಸರ್ಕಾರವು ಅನಿಮೀಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮವನ್ನು ಇಡೀ ರಾಜ್ಯಾದ್ಯಾಂತ ಆರಂಭಿಸಿದೆ. ಇದರಡಿಯಲ್ಲಿ 6 ತಿಂಗಳಿನಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ, ಎಲ್ಲ ಗರ್ಭಿಣಿಯರಿಗೂ ಮತ್ತು ಹಾಲುಣಿಸುವ ತಾಯಂದಿರಿಗೆ ಹಾಗೂ ಸಂತಾನೋತ್ಪತ್ತಿ ವಯಸ್ಸಿನ ಎಲ್ಲ ಮಹಿಳೆಯರಿಗೆ ರಕ್ತಹೀನತೆಯ ಪರೀಕ್ಷೆಯನ್ನು ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಪಾಲಿಕೆ ಉಪ ಮೇಯರ್ ಬಿ.ಜಾನಕಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಲ್ಲಿ ಮುಖ್ಯವಾಗಿ ಹಿಮೋಗ್ಲೋಬಿನ್ (ಕಬ್ಬಿಣಾಂಶ) ಕಡಿಮೆಯಾದಾಗ ಆಯಾಸ, ದುರ್ಬಲತೆ, ಉಸಿರಾಟದ ತೊಂದರೆ ತಲೆ ತಿರುಗುವಿಕೆ, ಕೂದಲು ಉದುರುವಿಕೆ, ಬೆಳವಣಿಗೆಯಲ್ಲಿ ಕುಂಠಿತ, ನೆನಪಿನ ಶಕ್ತಿ ಮತ್ತು ಏಕಾಗ್ರತೆಗೆ ತೊಂದರೆ ಉಂಟಾಗುತ್ತದೆ. ಮಕ್ಕಳಲ್ಲಿ ರಕ್ತಹೀನತೆ ಕಂಡುಬಂದಾಗ ಮಗುವಿನ ಓದುವಿನಲ್ಲಿ ಪರಿಣಾಮ ಬೀರುವ ಜೊತೆಗೆ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆಗಳಿವೆ. ಗರ್ಭಿಣಿಯರಲ್ಲಿ ರಕ್ತಹೀನತೆ ಉಂಟಾದಾಗ ಹೆರಿಗೆ ಪೂರ್ವದಲ್ಲಿ ಆಕಾಲಿಕ ಜನನ ಗರ್ಭಧಾರಣೆಯ ತೊಡಕುಗಳು, ಗರ್ಭಪಾತ, ಹೆರಿಗೆ ಸಮಯದಲ್ಲಿ ತೀವ್ರ ರಕ್ತಸ್ರಾವ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಕಬ್ಬಿಣಾಂಶ ಇರುವ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಅಂಗನವಾಡಿಗೆ ದಾಖಲಾಗಿರುವ 1,07,106 ಮಕ್ಕಳು, ಶಾಲೆಗಳಿಗೆ ಹೋಗುವ 2,77,578 ಮಕ್ಕಳು, ಕಾಲೇಜುಗಳಲ್ಲಿ ಓದುವ 26,700 ವಿದ್ಯಾರ್ಥಿಗಳಿಗೆ, 33,325 ಗರ್ಭಿಣಿಯರು, 32,240 ಬಾಣಂತಿಯರು ಮತ್ತು 3,00,245 ಸಂತಾನೋತ್ಪತ್ತಿ ವಯಸ್ಸಿನ ಎಲ್ಲ ಮಹಿಳೆಯರ ರಕ್ತಹೀನತೆ ತಪಾಸಣೆ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಮೊದಲ ಹಂತದಲ್ಲಿ 16 ರಿಂದ 18 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಿಗೆ 20 ದಿನಗಳಲ್ಲಿ ತಪಾಸಣೆ ಕೈಗೊಳ್ಳಲಾಗುವುದು. ನಂತರ ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳ ತಂಡ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ತಪಾಸಣೆ ಕೈಗೊಳ್ಳುವರು. ಚಿಕಿತ್ಸೆಗೆ ಅರ್ಹರಿರುವವರನ್ನು ವೈದ್ಯಾಧಿಕಾರಿಗಳು ತಮ್ಮ ಹಂತದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಯುಳ್ಳವರಿಗೆ ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ವಿವರಿಸಿದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆರ್.ಅನಿಲ್‌ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕುರಿತ ಭಿತ್ತಿಚಿತ್ರಗಳನ್ನು ಗಣ್ಯರಿಂದ ಬಿಡುಗಡೆಗೊಳಿಸಿದರು.

    ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಕ್ತಹೀನತೆಯ ಪರೀಕ್ಷೆ ಕೈಗೊಂಡು, ಕಬ್ಬಿಣಾಂಶ ಮಾತ್ರೆಗಳನ್ನು ವಿತರಿಸಲಾಯಿತು.

    ಮಹಾನಗರ ಪಾಲಿಕೆ ಸದಸ್ಯೆ ಕೆ.ಈರಮ್ಮ ಸುಚಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಮೀಮಾ ಜೋಹರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗೋಪಾಲ ಸಾಗರ, ಡಿಡಿಪಿಐ ಹನುಮಕ್ಕ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಸುಲೇಖಾ.ಬಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಅಭಿನಯ ಅಭಿಲಾಷ, ಅನುದಾನರಹಿತ ಶಾಲೆಗಳ ಪದಾಧಿಕಾರಿಗಳಾದ ಮರಿಸ್ವಾಮಿರೆಡ್ಡಿ, ಶ್ರೀನಿವಾಸಲು, ಡಾ.ಸುರೇಖಾ, ಡಾ.ಕರುಣಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts