More

    ಜೈಪುರದಲ್ಲಿ ಇಬ್ಬನಿ ಇದ್ದರೂ, ಭಾರತ-ಕಿವೀಸ್ ಮೊದಲ ಟಿ20ಯಲ್ಲಿ ಟಾಸ್ ನಿರ್ಣಾಯಕವಲ್ಲ!

    ಜೈಪುರ: ಟಿ20 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ಬುಧವಾರ ಚಾಲನೆ ಸಿಗಲಿದೆ. ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ನಿರ್ಣಾಯಕವೆನಿಸುವ ಸಾಧ್ಯತೆ ಇಲ್ಲ. ಇಬ್ಬನಿ ಸಮಸ್ಯೆ ಇದ್ದರೂ, ಎರಡನೇ ಸರದಿಯಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕಷ್ಟೇ ಅದರ ಲಾಭ ಸಿಗದು. ಯಾಕೆಂದರೆ ಪಂದ್ಯದ ಎರಡೂ ಇನಿಂಗ್ಸ್‌ಗಳಿಗೆ ಇಬ್ಬನಿ ಕಾಡುವ ನಿರೀಕ್ಷೆ ಇದೆ.
    ಜೈಪುರದಲ್ಲಿ ಈಗ ಭಾರಿ ಚಳಿ ಶುರುವಾಗಿದ್ದು, ಸಂಜೆ 7ರಿಂದಲೇ ಇಬ್ಬನಿ ಬೀಳಲಾರಂಭಿಸಿದೆ. ಇದರಿಂದಾಗಿ ರಾತ್ರಿ 7.30ಕ್ಕೆ ಆರಂಭವಾಗುವ ಪಂದ್ಯದಲ್ಲಿ ಒಂದು ತಂಡಕ್ಕಷ್ಟೇ ಇದು ಸಮಸ್ಯೆಯಾಗಿ ಕಾಡದು. ಉಭಯ ತಂಡಗಳ ಪೈಕಿ ಯಾವ ತಂಡ ಇಬ್ಬನಿ ಸಮಸ್ಯೆಯನ್ನು ಮೆಟ್ಟಿ ನಿಲ್ಲುವುದೋ ಅದಕ್ಕಷ್ಟೇ ಗೆಲುವು ಒಲಿಯಲಿದೆ.

    ‘ಜೈಪುರದಲ್ಲಿ ಮೊದಲ ಇನಿಂಗ್ಸ್‌ನಿಂದಲೇ ಇಬ್ಬನಿ ಕಾಡಲಿದೆ. ಕಳೆದೆರಡು ರಾತ್ರಿಗಳಲ್ಲಿ ನಾವು ಇಬ್ಬನಿಯನ್ನು ಗಮನಿಸಿದ್ದೇವೆ. ಹೀಗಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸದು. ಇಬ್ಬನಿ ನಿಗ್ರಹ ಸ್ಪ್ರೇಯನ್ನು ನಾವು ಬಳಸಲಿದ್ದೇವೆ. ಆದರೂ ಅದರ ಪರಿಣಾಮ ಬಹಳ ಸೀಮಿತವಾಗಿರಲಿದೆ. ಇದು ಟಿ20 ಪಂದ್ಯವಾಗಿರುವುದರಿಂದ ಸಾಕಷ್ಟು ರನ್ ಪ್ರವಾಹ ಹರಿಯುವ ನಿರೀಕ್ಷೆ ಇದೆ’ ಎಂದು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.

    8 ವರ್ಷಗಳ ಬಳಿಕ ಪಂದ್ಯ
    ಜೈಪುರದಲ್ಲಿ 8 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. 2013ರಲ್ಲಿ ಕೊನೆಯದಾಗಿ ಇಲ್ಲಿ ಭಾರತ-ಆಸೀಸ್ ಪಂದ್ಯ ನಡೆದಿತ್ತು. ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಶತಕದ ಬಲದಿಂದ ಆಸ್ಟ್ರೇಲಿಯಾದ 359 ರನ್ ಸವಾಲನ್ನು ಭಾರತ 43.3 ಓವರ್‌ಗಳಲ್ಲೇ ಬೆನ್ನಟ್ಟಿತ್ತು. ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಕಲಹದಿಂದಾಗಿ ಬಳಿಕ ಜೈಪುರಕ್ಕೆ ಆತಿಥ್ಯ ಒಲಿದಿರಲಿಲ್ಲ.

    ಹೌಸ್‌ಫುಲ್ ನಿರೀಕ್ಷೆ
    ಸ್ಟೇಡಿಯಂಗೆ ಪ್ರೇಕ್ಷಕರ ಪ್ರವೇಶಕ್ಕೆ ಯಾವುದೇ ಮಿತಿ ಇಲ್ಲ. ಹೀಗಾಗಿ 25 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಕ್ರೀಡಾಂಗಣ ಭರ್ತಿಯಾಗುವ ನಿರೀಕ್ಷೆ ಇದೆ. ಪಂದ್ಯದ 8 ಸಾವಿರ ಟಿಕೆಟ್‌ಗಳು ಮಾರಾಟಕ್ಕಿಟ್ಟ 3 ಗಂಟೆಯಲ್ಲೇ ಬಿಕರಿಯಾಗಿದ್ದವು. ಕರೊನಾ ಲಸಿಕೆಯ ಕನಿಷ್ಠ 1 ಡೋಸ್ ತೆಗೆದುಕೊಂಡವರಿಗೆ ಮಾತ್ರ ಸ್ಟೇಡಿಯಂಗೆ ಪ್ರವೇಶ ದೊರೆಯಲಿದೆ.

    ಐಪಿಎಲ್‌ಗೆ ದಿಕ್ಸೂಚಿ
    ಈ ವರ್ಷ ಏಪ್ರಿಲ್-ಮೇನಲ್ಲಿ ಭಾರತದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿ ಕರೊನಾ ಹಾವಳಿಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಆ ಬಳಿಕ ಈ ಸರಣಿಯೊಂದಿಗೆ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆ ಶುರುವಾಗುತ್ತಿದೆ. ಮುಂದಿನ ವರ್ಷ ಮತ್ತೆ ಭಾರತದಲ್ಲೇ ಐಪಿಎಲ್ ಆಯೋಜಿಸುವ ದೃಷ್ಟಿಯಿಂದ ಈ ಸರಣಿಯ ಯಶಸ್ಸು ಮಹತ್ವದ ಪಾತ್ರ ನಿರ್ವಹಿಸಲಿದೆ.

    ಮುಂಬೈನಲ್ಲಿ ರಹಾನೆ ಪಡೆ ಸಿದ್ಧತೆ
    ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಅಜಿಂಕ್ಯ ರಹಾನೆ ಸಾರಥ್ಯದ ಭಾರತ ಟೆಸ್ಟ್ ತಂಡದ ಆಟಗಾರರು ಸೋಮವಾರ ಮುಂಬೈನಲ್ಲಿ ಸಿದ್ಧತೆ ಆರಂಭಿಸಿದರು. ಕಳೆದ 15 ಟೆಸ್ಟ್‌ಗಳಲ್ಲಿ 24.76 ಸರಾಸರಿಯಲ್ಲಿ 644 ರನ್ ಮಾತ್ರ ಗಳಿಸಿರುವ ರಹಾನೆ ಫಾರ್ಮ್ ಮೇಲೆಯೇ ಹೆಚ್ಚಿನ ಗಮನವಿದ್ದು, ಮೊದಲ ದಿನ ಅವರು ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಚೇತೇಶ್ವರ ಪೂಜಾರ, ಮಯಾಂಕ್ ಅಗರ್ವಾಲ್, ಶುಭಮಾನ್ ಗಿಲ್ ಕೂಡ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಇಶಾಂತ್ ಶರ್ಮ, ಪ್ರಸಿದ್ಧಕೃಷ್ಣ ಬೌಲಿಂಗ್ ಮಾಡಿದರು. ಎನ್‌ಸಿಎ ತರಬೇತುದಾರರು ಮೇಲ್ವಿಚಾರಣೆ ವಹಿಸಿಕೊಂಡಿದ್ದರು. ಮೊದಲ ಟೆಸ್ಟ್ ನ. 25ರಿಂದ ಕಾನ್ಪುರದಲ್ಲಿ ನಡೆಯಲಿದೆ.

    ಕಿವೀಸ್ ತಂಡ ಆಗಮನ
    ಟಿ20 ವಿಶ್ವಕಪ್ ಫೈನಲ್‌ನಲ್ಲಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲೆಂಡ್ ತಂಡ ಸೋಮವಾರ ಬೆಳಗ್ಗೆ ಜೈಪುರಕ್ಕೆ ಬಂದಿಳಿಯಿತು. ಫೈನಲ್ ಆಡಿದ 2 ದಿನಗಳ ಅಂತರದಲ್ಲೇ ಮತ್ತೆ ಕಣಕ್ಕಿಳಿಯಬೇಕಾದ ಸವಾಲು ಕಿವೀಸ್ ತಂಡಕ್ಕಿದೆ. ಜೈಪುರದಲ್ಲಿ ಮಾಲಿನ್ಯ ಸಮಸ್ಯೆಯೂ ಎದುರಾಗಿದ್ದು, ಪ್ರವಾಸಿ ತಂಡಕ್ಕೆ ಇದು ಸವಾಲೆನಿಸಿದೆ.

    ಸನ್‌ರೈಸರ್ಸ್‌ಗೆ ಟಾಂಗ್ ನೀಡಿದ ಡೇವಿಡ್​ ವಾರ್ನರ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts