More

    ಇ-ಶ್ರಮ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

    ಹುಣಸೂರು: ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಯೋಜನೆ ವರದಾನವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ನಿರೀಕ್ಷಕ ಲಕ್ಷ್ಮೀಶ ತಿಳಿಸಿದರು.

    ನಗರದ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಇ-ಶ್ರಮ ಕಾರ್ಡ್ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ವಿತರಿಸಿ ಮಾತನಾಡಿದರು.

    ಅಸಂಘಟಿತ ವಲಯದಲ್ಲಿರುವ ಪತ್ರಿಕಾ ವಿತರಕರಲ್ಲಿ ಬಹುತೇಕರು ಪತ್ರಿಕೆ ವಿತರಿಸಲು ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.

    18ರಿಂದ 59 ವರ್ಷದೊಳಗಿನ ಇಎಸ್‌ಐ, ಇಪಿಎಫ್ ಸೌಲಭ್ಯ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಾಗಿರದ ಎಲ್ಲರೂ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ರೂ., ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ. ಹಾಗೂ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರೂ.ಗಳವರೆಗೆ ಅವಕಾಶವಿದೆ. ಇ-ಶ್ರಮ ಪೋರ್ಟಲ್ ಮೂಲಕವೂ ಸ್ವಯಂ ಆಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

    ತಾಲೂಕು ಪತ್ರಿಕಾ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪ್ರತಾಪ್ ಮಾತನಾಡಿ, ವಿಜಯವಾಣಿ ದಿನಪತ್ರಿಕೆಯು 15 ವರ್ಷಗಳ ಹಿಂದೆ ಮೊದಲ ಬಾರಿಗೆ ರಾಜ್ಯಾದ್ಯಂತ ಪತ್ರಿಕೆ ವಿತರಿಸುವ ಹುಡುಗರ ಸಮೀಕ್ಷೆ ನಡೆಸಿ ಅಂದಿನ ಸರ್ಕಾರಕ್ಕೆ ಪತ್ರಿಕೆ ಹಂಚುವವರಿಗೆ ಸೇವಾ ಭದ್ರತೆ ನೀಡಲು ಒತ್ತಾಯಿಸಿತ್ತು. ಮಳೆ, ಬಿಸಿಲು, ಚಳಿ ಎನ್ನದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಹುಡುಗರಿಗೆ ನೈತಿಕಸ್ಥೈರ್ಯ ತುಂಬುವಲ್ಲಿ ವಿಜಯವಾಣಿ ಪತ್ರಿಕೆ ಮತ್ತು ಸರ್ಕಾರ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.

    ವಿಜಯವಾಣಿ ತಾಲೂಕು ವರದಿಗಾರ ಶಿವಕುಮಾರ್ ವಿ.ರಾವ್, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬನ್ನಿಕುಪ್ಪೆ ಚಲುವರಾಜು, ಗಜೇಂದ್ರ, ಹಿರೀಕ್ಯಾತನಹಳ್ಳಿ ಸ್ವಾಮಿಗೌಡ, ಯೋಗಾನಂದ್, ಸಣ್ಣಶೆಟ್ಟಿ, ಮಹದೇವ್, ಕಾರ್ಮಿಕ ಇಲಾಖೆಯ ಡಿಇಒಗಳಾದ ಭಾಸ್ಕರ್, ರಮ್ಯಾ ಮತ್ತು ಪತ್ರಿಕೆ ಹಂಚುವ ಹುಡುಗರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts